ಮಾಜಿ ಪತ್ನಿ ಐಶ್ವರ್ಯ ಹಾಗೂ ರಜನಿಕಾಂತ್‌ಗೆ ಧನುಷ್ ಸವಾಲು: ಈ ಹೋರಾಟದಲ್ಲಿ ಗೆಲ್ಲೋದ್ಯಾರು?
ತಮಿಳು ನಟ ಧನುಷ್ ಹಾಗೂ ಪತ್ನಿ ಐಶ್ವರ್ಯ ಕೆಲ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದರು. 19 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಕಳೆದ ವರ್ಷ ತಿಲಾಂಜಲಿ ಇಟ್ಟಿದ್ದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿ ದೂರಾಗಿದ್ದು ಅಭಿಮಾನಿಗಳಿಗೂ ಬೇಸರ ತರಿಸಿತ್ತು. ಆ ಬಳಿಕ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾದರು.
ಐಶ್ವರ್ಯ ರಜನಿಕಾಂತ್ ಸಿನಿಮಾ ನಿರ್ದೇಶಕಿಯಾಗಿಯೂ ಗುರ್ತಿಸಿಕೊಂಡಿದ್ದಾರೆ. 4 ಸಿನಿಮಾಗಳನ್ನು ನಿರ್ದೇಶನದ ಮಾಡಿದ್ದಾರೆ. ಧನುಷ್ ನಟಿಸಿದ್ದ 'ತ್ರೀ' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಧನುಷ್ ಹಾಗೂ ಐಶ್ವರ್ಯ ಡಿವೋರ್ಸ್ ಪಡೆಯಲು ಕಾರಣ ಏನು ಎನ್ನುವುದು ಬಹಿರಂಗವಾಗಲೇ ಇಲ್ಲ. ಒಂದಷ್ಟು ಅಂತೆ ಕಂತೆ ಸುದ್ದಿ ಹರಿದಾಡಿದರೂ ಇಬ್ಬರು ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಸದ್ಯ ತಂದೆ ಮನೆಯಲ್ಲಿ ಐಶ್ವರ್ಯ ವಾಸ್ತವ್ಯ ಹೂಡಿದ್ದಾರೆ. ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

'ಲಾಲ್ ಸಲಾಂ' ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮೊಹಿದ್ದೀನ್ ಭಾಯ್ ಎನ್ನುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿದ್ದು ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸಂಕ್ರಾಂತಿ ಸಂಭ್ರಮದಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ದೀಪಾವಳಿಗೆ ಟೀಸರ್ ಉಡುಗೊರೆ ನೀಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.
ಮತ್ತೊಂದು ಕಡೆ ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಮುಖ್ಯ ಪಾತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 15ಕ್ಕೆ ಸಿನಿಮಾ ರಿಲೀಸ್ ಎಂದು ಈ ಹಿಂದೆ ಘೋಷಿಸಿದ್ದರು. ದಿಢೀರನೆ ಚಿತ್ರವನ್ನು ಸಂಕ್ರಾಂತಿಗೆ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಧನುಷ್ ವರ್ಸಸ್ ಐಶ್ವರ್ಯ ರಜನಿಕಾಂತ್ ಫೈಟ್ ಎನ್ನುವ ಚರ್ಚೆ ಕಾಲಿವುಡ್‌ನಲ್ಲಿ ಶುರುವಾಗಿದೆ.

ಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಬಾಕ್ಸಾಫೀಸ್ ದೋಚಬಹುದು ಎನ್ನುವ ಲೆಕ್ಕಾಚಾರ ಇದೆ. ಹಬ್ಬದ ಸಡಗರದಲ್ಲಿ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರುತ್ತಾರೆ ಎನ್ನುವ ಅಂದಾಜಿದೆ. ಅದರಲ್ಲೂ ಸುಗ್ಗಿ ಹಬ್ಬವನ್ನು ತಮಿಳುನಾಡಿನಲ್ಲಿ ದೊಡ್ಡದಾಗಿ ಆಚರಿಸಲಾಗುತ್ತದೆ. ಇದೇ ಕಾರಣಕ್ಕೆ 'ಲಾಲ್ ಸಲಾಂ' ಹಾಗೂ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾಗಳನ್ನು ಒಟ್ಟಿಗೆ ರಿಲೀಸ್ ಮಾಡುವ ಪ್ರಯತ್ನಗಳು ನಡೀತಿದೆ.
ಸುಗ್ಗಿ ಹಬ್ಬಕ್ಕೆ ತೆಲುಗು, ತಮಿಳಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ. ಅದರಲ್ಲಿ ಈ ಎರಡು ಸಿನಿಮಾಗಳು ನಿರೀಕ್ಷೆ ಹುಟ್ಟು ಹಾಕಿದೆ. 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಶಿವಣ್ಣ ನಟಿಸಿದ್ದು ಕನ್ನಡ ಸಿನಿಮಾ ಡಬ್ ಆಗಿ ಬರಲಿದೆ. ಹಾಗಾಗಿ ಕರ್ನಾಟಕದಲ್ಲೂ ದೊಡ್ಡಮಟ್ಟಿಗೆ ಸಿನಿಮಾ ಸದ್ದು ಮಾಡುವ ಸುಳಿವು ಸಿಗುತ್ತಿದೆ.
ತೆಲುಗಿನಲ್ಲಿ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ', 'ವಿಕ್ಟರಿ ವೆಂಕಟೇಶ್ ಸೈಂಧವ್', ನಾಗಾರ್ಜುನ ನಟನೆಯ 'ನಾ ಸಾಮಿ ರಂಗ', ರವಿತೇಜ 'ಈಗಲ್' ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ತಮಿಳಿನಲ್ಲಿ ಶಿವ ಕಾರ್ತಿಕೇಯನ್ ನಟನೆಯ 'ಅಯಲಾನ್' ಸಿನಿಮಾ ಕೂಡ ಸಂಕ್ರಾಂತಿ ಹಬ್ಬದ ಮೇಲೆ ಕಣ್ಣಿಟ್ಟಿದೆ. ಹೇಳಿದಂತೆ ಎಲ್ಲಾ ಸಿನಿಮಾಗಳು ಹಬ್ಬಕ್ಕೆ ರಿಲೀಸ್ ಆಗ್ತಾವಾ? ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಹೆದರಿ ಯಾರಾದರೂ ಹಿಂದೆ ಸರಿತ್ತಾರಾ? ಎಂದು ಕಾದು ನೋಡಬೇಕಿದೆ.
'ಲಾಲ್ ಸಲಾಂ' ಹಾಗೂ 'ಕ್ಯಾಪ್ಟನ್ ಮಿಲ್ಲರ್' ಚಿತ್ರಗಳ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆ ಆಗಿದೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಧನುಷ್- ಐಶ್ವರ್ಯ ನಡುವೆ ಫೈಟ್ ಏರ್ಪಡುತ್ತಾ? ಎನ್ನುವ ಕುತೂಹಲ ಮೂಡಿದೆ. 'ಲಾಲ್ ಸಲಾಂ' ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಸುತ್ತಾ ಸುತ್ತುತ್ತದೆ. ಚಿತ್ರದಲ್ಲಿ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅರುಣ್ ಮತೇಶ್ವರನ್ ನಿರ್ದೇಶದ 'ಕ್ಯಾಪ್ಟನ್ ಮಿಲ್ಲರ್' ಪೀರಿಯಡ್ ಆಕ್ಷನ್ ಅಡ್ವೆಂಚರಸ್ ಸಿನಿಮಾ. 1930- 40ರ ಕಾಲಘಟ್ಟದ ಕತೆ ಕೂಡ ಚಿತ್ರದಲ್ಲಿದೆ.


Click it and Unblock the Notifications











