Rajinikanth vs Dhanush: ಮತ್ತೆ ಮತ್ತೆ ಅನ್ಯಾಯ; ಧನುಷ್ ಎದುರು ಅಖಾಡಕ್ಕೆ ರಜನಿಕಾಂತ್ ?
ರಜನಿಕಾಂತ್ ಮಗಳನ್ನು ಧನುಷ್ ಪ್ರೀತಿಸಿ ಮದುವೆ ಆಗಿದ್ದು 18 ವರ್ಷಗಳ ಬಳಿಕ ಡಿವೋರ್ಸ್ ಪಡೆದಿದ್ದು ಎಲ್ಲಾ ಗೊತ್ತೇಯಿದೆ. ಮಾವನಿಂದ ಧನುಷ್ ತಮ್ಮ ವೃತ್ತಿ ಜೀವನಕ್ಕೆ ಯಾವುದೇ ಸಹಾಯ ಪಡೆಯಲಿಲ್ಲ. ತಮ್ಮದೇ ಪರಿಶ್ರಮದಿಂದ ಬೆಳೆದು ಬಂದರು. ಇದೀಗ ಮಾಜಿ ಮಾವ ಹಾಗೂ ಅಳಿಯ ಬಾಕ್ಸಾಫೀಸ್ ಅಖಾಡದಲ್ಲಿ ಕದನಕ್ಕೆ ಇಳಿಯುತ್ತಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್- 2' ಸಿನಿಮಾ ಅಕ್ಟೋಬರ್ 15ಕ್ಕೆ ತೆರೆಗೆ ಬರಲಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಅಕ್ಟೋಬರ್ 16ಕ್ಕೆ 'ಓಂ' ಸಿನಿಮಾ ಬಿಡುಗಡೆ ಮಾಡುವುದಾಗಿ 2 ವಾರಗಳ ಹಿಂದೆ ಚಿತ್ರತಂಡ ಹೇಳಿತ್ತು. ಧನುಷ್ ನಿರ್ಮಿಸಿ ನಟಿಸುತ್ತಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಮಮ್ಮುಟ್ಟಿ, ಶ್ರೀಲೀಲಾ, ಸಾಯಿ ಪಲ್ಲವಿ ಕೂಡ 'ಓಂ' ಚಿತ್ರದಲ್ಲಿದ್ದಾರೆ.

ಒಂದೇ ದಿನದ ಅಂತರದಲ್ಲಿ ರಜನಿಕಾಂತ್ ಹಾಗೂ ಧನುಷ್ ಸಿನಿಮಾಗಳು ಬಿಡುಗಡೆ ಸಾಧ್ಯವೇ ಎನ್ನುವ ಚರ್ಚೆ ಶುರುವಾಗಿದೆ. ಎಲ್ಲಾ ಗೊತ್ತಿದ್ದು 'ಜೈಲರ್- 2' ರಿಲೀಸ್ ಡೇಟ್ ಘೋಷಿಸಿದ್ರಾ ಎನ್ನುವ ಅನುಮಾನ ಮೂಡಿದೆ. ಒಂದು ಸಿನಿಮಾ ರಿಲೀಸ್ ಡೇಟ್ ಎನ್ನುವುದು ಸಾಮಾನ್ಯ ವಿಷಯ ಅಲ್ಲವೇ ಅಲ್ಲ. ಅದರ ಹಿಂದೆ ಸಾಕಷ್ಟು ಲೆಕ್ಕಾಚಾರ ಇರುತ್ತದೆ. ಎಲ್ಲಾ ಕೋನದಲ್ಲಿ ಯೋಚಿಸಿ ಡೇಟ್ ಫಿಕ್ಸ್ ಮಾಡುತ್ತಾರೆ. ದಸರಾ ಸಂಭ್ರಮದಲ್ಲಿ 'ಓಂ' ಚಿತ್ರವನ್ನು ತೆರೆಗೆ ತರಲು ಧನುಷ್ ಮನಸ್ಸು ಮಾಡಿದ್ದಾರೆ. ಆದರೆ ಈಗ ಒಂದು ದಿನ ಮುನ್ನ 'ಜೈಲರ್- 2' ಬರೋದು ಕುತೂಹಲ ಮೂಡಿಸಿದೆ.
ಸನ್ ಪಿಕ್ಚರ್ಸ್ ಸಂಸ್ಥೆ ಇಷ್ಟು ಭರವಸೆಯಿಂದ 'ಜೈಲರ್- 2' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿರುವುದು ನೋಡಿದ್ರೆ, 'ಓಂ' ಚಿತ್ರತಂಡ ಜೊತೆ ಚರ್ಚಿಸಿರುವಂತೆ ಕಾಣುತ್ತಿದೆ. ಸೂಪರ್ ಸ್ಟಾರ್ ಸಿನಿಮಾ, ದೊಡ್ಡ ಸಿನಿಮಾ ಎನ್ನುವ ಕಾರಣಕ್ಕೆ ಧನುಷ್ ಕೂಡ ಇದಕ್ಕೆ ಒಪ್ಪಿಕೊಂಡಿರಬಹುದು. ಹೇಳಿಕೇಳಿ ಸೂಪರ್ ಸ್ಟರ್ ಅಭಿಮಾನಿ ಧನುಷ್. ಹಾಗಾಗಿ ಇಷ್ಟು ಮಾಡದೇ ಇರ್ತಾರಾ? ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಪದೇ ಪದೆ ಧನುಷ್ ಚಿತ್ರಗಳಿಗೆ ಯಾಕೆ ಅನ್ಯಾಯ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಈ ಹಿಂದೆ ಕೂಡ ಬೇರೆ ಸಿನಿಮಾಗಳಿಗಾಗಿ ಧನುಷ್ ತಮ್ಮ ಸಿನಿಮಾ ರಿಲೀಸ್ ಡೇಟ್ ಬದಲಿಸಿಕೊಳ್ಳುವಂತಾಗಿತ್ತು. ಎರಡು ವರ್ಷಗಳ ಹಿಂದೆ ಕಮಲ್ ಹಾಸನ್ ನಟನೆಯ 'ಇಂಡಿಯನ್'-2 ಚಿತ್ರಕ್ಕಾಗಿ ಧನುಷ್ ತಮ್ಮ 'ರಾಯನ್' ಸಿನಿಮಾ ರಿಲೀಸ್ ಡೇಟ್ ಬದಲಿಸಿಕೊಂಡಿದ್ದರು. ಕಳೆದ ವರ್ಷ ಧನುಷ್ ನಿರ್ದೇಶನದ ನಟಿಸಿದ್ದ 'ಇಡ್ಲಿಕಡೇ' ಸಿನಿಮಾ ರಿಲೀಸ್ ಡೇಟ್ ಕೂಡ ಅನಿವಾರ್ಯವಾಗಿ ಬದಲಿಸುವಂತಾಗಿದೆ. ಅಜಿತ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಚಿತ್ರಕ್ಕಾಗಿ ಧನುಷ್ ಅದಾಗಲೇ ಘೋಷಣೆ ಮಾಡಿದ್ದ ದಿನಾಂಕ ಬಿಟ್ಟುಕೊಟ್ಟಿದ್ದರು. ಈಗ 'ಓಂ' ಸಿನಿಮಾ ಸರದಿ. ಹೀಗೆ ಬೇರೆ ಸಿನಿಮಾಗಳ ಕಾರಣಕ್ಕೆ ಧನುಷ್ ಪದೇ ಪದೆ ತಮ್ಮ ಸಿನಿಮಾ ರಿಲೀಸ್ ಮುಂದೂಡುವಂತಾಗಿರುವುದು ಬೇಸರದ ಸಂಗತಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಆಗಸ್ಟ್ 15ಕ್ಕೆ 'ಜೈಲರ್- 2' ಸಿನಿಮಾ ಬಿಡುಗಡೆ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಚಿತ್ರೀಕರಣ ತಡವಾಗಿ ಅಕ್ಟೋಬರ್ 15ಕ್ಕೆ ರಿಲೀಸ್ ಡೇಟ್ ಬದಲಿಸಿದ್ದಾರೆ. ನೆಲ್ಸನ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸೀಕ್ವೆಲ್ ಬಲವೂ ಚಿತ್ರಕ್ಕೆ ಸಿಕ್ಕಿದೆ. 3 ವರ್ಷಗಳ ಹಿಂದೆ ಬಂದಿದ್ದ 'ಜೈಲರ್'ಸಿನಿಮಾ 600 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.
ಧನುಷ್ ನಟನೆಯ 'ಓಂ' ಚಿತ್ರ ಮಾತ್ರವಲ್ಲ, ತೆಲುಗಿನಲ್ಲಿ ಚಿರಂಜೀವಿ ನಟನೆಯ 'ವಿಶ್ವಂಭರ' ಸಿನಿಮಾ ಕೂಡ ಅಕ್ಟೋಬರ್ 15ಕ್ಕೆ ತೆರೆಗೆ ಬರುವ ನಿರೀಕ್ಷೆಯಿದೆ. 3 ವರ್ಷಗಳ ಹಿಂದೆ 'ಜೈಲರ್' ಎದುರು ಚಿರು ನಟಿಸಿದ್ದ 'ಭೋಳಾಶಂಕರ್' ಸಿನಿಮಾ ತೆರೆಕಂಡು ಹೀನಯವಾಗಿ ಸೋತಿತ್ತು. ಈ ಬಾರಿ ಅಂತಹ ಸಾಹಸಕ್ಕೆ ಮೆಗಾಸ್ಟಾರ್ ಕೈ ಹಾಕಲ್ಲ ಎನ್ನಲಾಗ್ತಿದೆ.


Click it and Unblock the Notifications