"ನಿಮ್ಮ ಗಂಡನಿಗಿಂತ ವಿಜಯ್ ಉತ್ತಮ" ಎಂದವನಿಗೆ ಜ್ಯೋತಿಕಾ ಪ್ರತಿಕ್ರಿಯೆ ಏನು?
ಸೋಶಿಯಲ್ ಮೀಡಿಯಾ ತಾರೆಯರು ಹಾಗೂ ಅಭಿಮಾನಿಗಳನ್ನು ಬಹಳ ಹತ್ತಿರವಾಗಿಸಿಬಿಟ್ಟಿದೆ. ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಮೂಲಕ ಜನ ತಾರೆಯರ ಜೊತೆ ಸಂವಹನ ನಡೆಸುವಂತಾಗಿದೆ. ನಟ-ನಟಿಯರ ಪೋಸ್ಟ್‌ಗಳಿಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಾರೆ. ಕೆಲವೊಮ್ಮೆ ಟ್ರೋಲ್ ಕೂಡ ಆಗುವಂತಾಗುತ್ತದೆ.
ತಮಿಳು ನಟ ಸೂರ್ಯ ನಟನೆಯ 'ಕಂಗುವ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದು ಗೊತ್ತೇಯಿದೆ. ಇದೇ ಕಾರಣಕ್ಕೆ ಸೂರ್ಯ ಬಹಳ ಟೀಕೆ, ಟ್ರೋಲ್ ಎದುರಿಸುವಂತಾಯಿತು. ಕೆಲವರು ಮಾತ್ರ ಇಂದಿಗೂ ಅವರನ್ನು ಟ್ರೋಲ್ ಮಾಡುವುದು ನಿಲ್ಲಿಸಿಲ್ಲ. ಈ ಹಿಂದೆ ಇಂತಹ ಟೀಕೆಗಳ ಬಗ್ಗೆ ಸೂರ್ಯ ಪತ್ನಿ ಜ್ಯೋತಿಕಾ ಪ್ರತಿಕ್ರಿಯಿಸಿದ್ದರು. 'ಕಂಗುವ' ಸಿನಿಮಾ ಆರಂಭದ ಅರ್ಧ ಗಂಟೆ ವರ್ಕೌಟ್ ಆಗಿಲ್ಲ. ಕೆಲ ಲೋಪದೋಷಗಳಿರುವುದು ನಿಜ. ಹಾಗಂತ ಇಡೀ ಸಿನಿಮಾ ಚೆನ್ನಾಗಿಲ್ಲ ಎನ್ನುವುದು ಸರಿಯಲ್ಲ ಎಂದು ಪೋಸ್ಟ್ ಮಾಡಿದ್ದರು.

ಕೆಲ ಕಾಣದ ಕೈಗಳಿಂದ 'ಕಂಗುವ' ಸಿನಿಮಾ ಸೋಲುಂವತಾಯಿತು. ಮೊದಲ ಪ್ರದರ್ಶನ ಮುಗಿಯುವ ಮುನ್ನ ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದು ಅಪಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಸದ್ಯ 'ಡಬ್ಬಾ ಕಾರ್ಟೆಲ್' ಎನ್ನುವ ಹಿಂದಿ ವೆಬ್ ಸೀರಿಸ್‌ನಲ್ಲಿ ಜ್ಯೋತಿಕಾ ನಟಿಸಿದ್ದಾರೆ. ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಈ ಕ್ರೈಂ ಥ್ರಿಲ್ಲರ್ ಸ್ಟ್ರೀಮಿಂಗ್ ಆಗಲಿದೆ. ಇದೆಲ್ಲದರ ನಡುವೆ ನೆಟ್ಟಿಗನೊಬ್ಬನ ಕಾಮೆಂಟ್‌ಗೆ ಜ್ಯೋತಿಕಾ ರಿಪ್ಲೇ ಮಾಡಿದ್ದಾರೆ ಎಂದು ಚರ್ಚೆ ನಡೀತಿದೆ.
ನಟಿ ಜ್ಯೋತಿಕಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಬಿಳಿ ಶರ್ಟ್ ಹಾಗೂ ನೀಲಿ ಬಣ್ಣದ ಡೆನಿಮ್ ಧರಿಸಿ ಪೋಸ್ ನೀಡಿದ್ದಾರೆ. ಆದರೆ ಈ ಪೋಸ್ಟ್ ಕಾಮೆಂಟ್ ಬಾಕ್ಸ್‌ನಲ್ಲಿ ಆಕೆಯನ್ನು ಟ್ರೋಲ್ ಮಾಡುವ ಕೆಲಸ ನಡೀತಿದೆ. ಮತ್ತೆ 'ಕಂಗುವ' ಸಿನಿಮಾ ವಿಚಾರ ಎಳೆದು ತಂದು ಕೆಲವರು ಸೂರ್ಯ ಕಾಲೆಳೆದಿದ್ದಾರೆ. ನಿಮ್ಮ ಗಂಡನಿಗಿಂತ ನಟ, ನಿರ್ದೇಶಕ ಪ್ರದೀಪ್ ರಂಗನಾಥವ್ ಉತ್ತಮ ಎಂದು ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.
"ನಿಮ್ಮ ಗಂಡನಿಗಿಂತ ದಳಪತಿ ವಿಜಯ್ ವಾಸಿ" ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ, ಅದಕ್ಕೆ ರಿಪ್ಲೇ ಮಾಡಿರುವ ಜ್ಯೋತಿಕಾ ನಗುವ ಎಮೋಜಿ ಹಾಕಿದ್ದಾರೆ ಎನ್ನಲಾಗ್ತಿದೆ. ಸದ್ಯ ಆ ಕಾಮೆಂಟ್ಸ್, ರಿಪ್ಲೇ ಎರಡೂ ಕಾಣಿಸುತ್ತಿಲ್ಲ. ನಿಜಕ್ಕೂ ನೆಟ್ಟಿಗನ ಕಾಮೆಂಟ್‌ಗೆ ನಟಿ ಜ್ಯೋತಿಕಾ ರಿಪ್ಲೇ ಮಾಡಿದ್ದು ನಿಜವೇ ಎಂದು ಚರ್ಚೆ ನಡೀತಿದೆ. ಸದ್ಯ ಸಾಕಷ್ಟು ಜನ ಆ ಪೋಸ್ಟ್ ಕೆಳಗೆ ಇರುವ ಕಾಮೆಂಟ್‌ಗಳಲ್ಲಿ ಹುಡುಕುತ್ತಿದ್ದಾರೆ. ನಿಜಕ್ಕೂ ಜ್ಯೋತಿಕಾ ಆ ರೀತಿ ರೆಪ್ಲೇ ಮಾಡಿದ್ರಾ? ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಕೆಲವರು ಬೇಕಂತಲೇ ರಿಪ್ಲೇ ಮಾಡಲಿ ಎಂದು ಈ ರೀತಿ ಕೆಣಕುವ ಕಾಮೆಂಟ್ ಹಾಕುತ್ತಾರೆ ಅದಕ್ಕೆಲ್ಲಾ ನೀವು ಯಾಕೆ ರಿಪ್ಲೇ ಮಾಡ್ತೀರಾ ಮೇಡಂ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಇದು ಸುಖಾಸುಮ್ಮನೆ ಫ್ಯಾನ್ಸ್ ವಾರ್‌ಗೆ ಕಾರಣವಾಗುತ್ತದೆ. ನೆಟ್ಟಿಗರ ಪೋಸ್ಟ್‌ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಒಟ್ಟಾರೆ ಈ ಕಾಮೆಂಟ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸೂರ್ಯ ಹಾಗೂ ವಿಜಯ್ ಅಭಿಮಾನಿಗಳ ನಡುವೆ ಮೊದಲಿನಿಂದಲೂ ಕೆಸರೆರಚಾಟ ನಡೆಯುತ್ತಲೇ ಇದೆ. 'ಕಂಗುವ' ಚಿತ್ರದ ಸೋಲಿಗೆ ದಳಪತಿ ಅಭಿಮಾನಿಗಳೇ ಕಾರಣ, ನೆಗೆಟಿವ್ ಹಬ್ಬಿಸಿದ್ದೇ ಅವರು ಎಂದು ಚರ್ಚೆ ನಡೆದಿತ್ತು. ಇದೆಲ್ಲದರ ನಡುವೆ ಈಗ ಜ್ಯೋತಿಕಾ ರಿಪ್ಲೇ ವಿಚಾರಕ್ಕೆ ಇಷ್ಟೆಲ್ಲಾ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಸ್ವತಃ ಜ್ಯೋತಿಕಾ ಪ್ರತಿಕ್ರಿಯೆ ನೀಡಬೇಕಿದೆ.
ಅಂದಹಾಗೆ ಜ್ಯೋತಿಕಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಬಂದಿದ್ದ 'ಶೈತಾನ್' ಚಿತ್ರದಲ್ಲಿ ಒಂದೊಳ್ಳೆ ಪಾತ್ರದಲ್ಲಿ ನಟಿಸಿದ್ದರು. ಫ್ಯಾಮಿಲಿ ಸಮೇತ ಮುಂಬೈಗೆ ಶಿಫ್ಟ್ ಆಗಿದ್ದು ಬಾಲಿವುಡ್ ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.


Click it and Unblock the Notifications











