'ಜೈಲರ್'ನಲ್ಲಿ ವಿಲನ್ ಆಗಬೇಕಿತ್ತು ಮಮ್ಮುಟ್ಟಿ: ರಜನಿಕಾಂತ್ ಬೇಡ ಎಂದಿದ್ದು ಏಕೆ?
ಸೂಪರ್‌ಸ್ಟಾರ್ ರಜನಿಕಾಂತ್ ಅವರ ಜೈಲರ್ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಹಿಟ್ ಆಗಿದೆ. ವಿಶ್ವದಾದ್ಯಂತ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿರುವ ಮಲಯಾಳಂ ನಟ ವಿನಾಯಕನ್ ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಈ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು, ಮಲಯಾಳಂ ಮೆಗಾಸ್ಟಾರ್ ಮಮ್ಮುಟಿ!
ಎಸ್....ಇದು ನಿಜ.... ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್‌ನಲ್ಲಿ ಖಳನಾಯಕನ ಪಾತ್ರಕ್ಕೆ ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಆಯ್ಕೆಯಾಗಿದ್ದರು. ರಜನಿಕಾಂತ್ ಎದುರು ನೆಗೆಟಿವ್ ಪಾತ್ರದಲ್ಲಿ ನಟಿಸಲು ಅವರನ್ನು ಪರಿಗಣಿಸಲಾಗಿತ್ತು. ಆದರೆ, ಅವರು ನಟಿಸದಿರಲು ಕಾರಣ ರಜನಿಕಾಂತ್!.

ಮಮ್ಮುಟ್ಟಿಗೆ ಜೈಲರ್‌ನಲ್ಲಿ ಖಳನಾಯಕನ ಪಾತ್ರವಿತ್ತು
ಸೂಪರ್ ಹಿಟ್ ಜೈಲರ್ ಚಿತ್ರದಲ್ಲಿ ರಜನಿಕಾಂತ್ ಅವರ ಮಗನ ಪಾತ್ರವನ್ನು ನಿರ್ವಹಿಸಿದ ನಟ ವಸಂತ್ ರವಿ ಅವರು ವಿನಾಯಕನ್ ಪಾತ್ರಕ್ಕೆ ಮಮ್ಮುಟ್ಟಿ ಅವರನ್ನು ಮೊದಲು ಪರಿಗಣಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.
"ಸಿನಿಮಾದಲ್ಲಿ ವಿಲನ್ ಪಾತ್ರಕ್ಕೆ ಮಮ್ಮುಟ್ಟಿ ಸರ್ ಮೊದಲ ಆಯ್ಕೆ, ರಜಿನಿ ಸರ್ ಅವರೇ ನನಗೆ ಹೇಳಿದ್ದರು. ನೆಲ್ಸನ್ ಸರ್ ಮಮ್ಮುಟ್ಟಿ ಒಳ್ಳೆ ಆಯ್ಕೆಯಾಗುತ್ತಾರೆ ಎಂದು ಹೇಳಿದಾಗ, ರಜಿನಿ ಸರ್ ಮಮ್ಮುಟ್ಟಿಗೆ ಕರೆ ಮಾಡಿ ಹೇಳಿದ್ದರು. ಆದರೆ, ಬಳಿಕ ನಿರ್ಧಾರ ಬದಲಿಸಿದ ಅವರು, ಮಮ್ಮುಟಿ ಮಲಯಾಳಂನಲ್ಲಿ ದೊಡ್ಡ ಸ್ಟಾರ್ ಆಗಿದ್ದಾರೆ ಮತ್ತು ಅವರಂತಹವರು ಖಳನಾಯಕನ ಪಾತ್ರವನ್ನು ಮಾಡುವುದು ನನಗೆ ಸರಿ ಅನಿಸುತ್ತಿಲ್ಲ ಎಂದು ರಜನಿ ಸರ್ ಹೇಳಿದರು" ಎಂದು ನಟ ವಸಂತ್ ರವಿ ತಿಳಿಸಿದ್ದಾರೆ.

"ಅಂತಹ ನೆಗೆಟಿವ್ ಶೇಡ್ ಇರುವಂತಹ ಪಾತ್ರಗಳು ನಟನಿಗೆ ಹೊಂದುವುದಿಲ್ಲ ಎಂದು ಅವರು ಭಾವಿಸಿದ್ದರು. ಹೀಗಾಗಿ, ರಜಿನಿ ಸರ್ ಮಮ್ಮುಟ್ಟಿ ಅವರಿಗೆ ಕರೆ ಮಾಡಿ ಸಮಸ್ಯೆಯನ್ನು ತಿಳಿಸಿದರು. ಬಳಿಕ ಇಬ್ಬರು ಒಟ್ಟಿಗೆ ಮತ್ತೊಂದು ಸಿನಿಮಾ ಮಾಡಬೇಕೆಂದು ಹೇಳಿದರು. ನಾನು ಕೂಡ ಇದು ಸರಿಯಾದ ನಿರ್ಧಾರ ಎಂದು ಭಾವಿಸಿದೆ. ಮುಂದೆ ಅವರು ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ನಾನು ಅವರಿಗೆ ಹೇಳಿದೆ" ಎಂದು ವಸಂತ್ ರವಿ ಸಂದರ್ಶನದಲ್ಲಿ ಹೇಳಿದ್ದಾರೆ.
ಸೂಪರ್ ಹಿಟ್ ಜೈಲರ್!
ಎರಡು ವರ್ಷಗಳ ನಂತರ ರಜನಿಕಾಂತ್ ಅವರು ಭರ್ಜರಿ ಹಿಟ್ ಚಿತ್ರದೊಂದಿಗೆ ಥಿಯೇಟರ್‌ಗೆ ನುಗ್ಗಿದ್ದಾರೆ. ಸಿನಿಮಾ ರಂಗದಲ್ಲಿ ಮತ್ತೊಮ್ಮೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಜೈಲರ್ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ. ಈಗಾಗಲೇ 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್ ಮಾಡಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ಅವರ ಅಭಿನಯ, ಜಾಕಿ ಶ್ರಾಫ್, ಶಿವರಾಜ್ ಕುಮಾರ್, ಮೋಹನ್‌ಲಾಲ್ ಅವರ ಅತಿಥಿ ಪಾತ್ರಗಳು, ನೆಲ್ಸನ್ ದಿಲೀಪ್‌ಕುಮಾರ್ ಅವರ ನಿರ್ದೇಶನ, ತಮನ್ನಾ ಭಾಟಿಯಾ, ಸುನೀಲ್, ರಮ್ಯಾ ಕೃಷ್ಣನ್, ವಿನಾಯಕನ್, ಮಿರ್ನಾ ಮೆನನ್, ಮತ್ತು ವಸಂತ್ ರವಿ ತಾರಾಗಣ ಮತ್ತು ಇತರ ಅಂಶಗಳು ಪ್ರೇಕ್ಷಕರನ್ನು ಸಂಪೂರ್ಣವಾಗಿ ಮೆಚ್ಚಿಸಿವೆ. ಸನ್ ಪಿಕ್ಚರ್ಸ್‌ನ ಕಲಾನಿತಿ ಮಾರನ್ ಚಿತ್ರವನ್ನು ನಿರ್ಮಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಅವರ ಛಾಯಾಗ್ರಹಣವಿದೆ.


Click it and Unblock the Notifications











