ವಿಜಯ್-ಅಜಿತ್ ಹೋಲಿಸಿ ಮಾತಾಡಿದ ದಿಲ್ ರಾಜು, ಹಿಗ್ಗಾ ಮುಗ್ಗಾ ಬೈದ ನೆಟ್ಟಿಗರು
ತೆಲುಗಿನ ಜನಪ್ರಿಯ ನಿರ್ಮಾಪಕ ದಿಲ್ ರಾಜು ಇದೀಗ ತಮಿಳಿನ ಸ್ಟಾರ್ ನಟ ವಿಜಯ್‌ರ ಹೊಸ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ವಿಜಯ್ ನಟಿಸಿ, ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿರುವ 'ವಾರಿಸು' ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಿದ್ದು, ಸಿನಿಮಾದ ಕುರಿತು ಮಾತನಾಡುತ್ತಾ, ಅಜಿತ್ ಹಾಗೂ ವಿಜಯ್ ಬಗ್ಗೆ ಹೋಲಿಸಿ ಮಾತನಾಡಿರುವುದು ದಿಲ್ ರಾಜುಗೆ ಮುಳುವಾಗಿದೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ದಿಲ್ ರಾಜು, 'ನಟ ಅಜಿತ್‌ಗೆ ಹೋಲಿಸಿದರೆ ವಿಜಯ್ ಬಹಳ ದೊಡ್ಡ ಸೂಪರ್ ಸ್ಟಾರ್. ಹಾಗಾಗಿ ನಿರ್ಮಾಪಕ, ನಟ ಹಾಗೂ ಸಚಿವರೂ ಆಗಿರುವ ಉದಯ್ ನಿಧಿ ಸ್ಟಾಲಿನ್ ಅಜಿತ್‌ರ 'ತುಣಿವು' ಸಿನಿಮಾಗೆ ಕಡಿಮೆ ಚಿತ್ರಮಂದಿರಗಳಿಗೆ ಸೀಮಿತಗೊಳಿಸಿ, ವಿಜಯ್‌ರ 'ವಾರಿಸು'ಗೆ ಹೆಚ್ಚು ಚಿತ್ರಮಂದಿರಗಳನ್ನು ನೀಡಬೇಕು ಎಂದಿದ್ದಾರೆ.
ಅಜಿತ್ ನಟನೆಯ 'ತುಣಿವು' ಸಿನಿಮಾವನ್ನು ಬಾಲಿವುಡ್‌ನ ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ. ಆದರೆ ಆ ಸಿನಿಮಾದ ವಿತರಣೆ ಮಾಡುತ್ತಿರುವುದು ಉದಯ್ ನಿಧಿ ಸ್ಟಾಲಿನ್‌ರ ಸಂಸ್ಥೆ ರೆಡ್ ಜೈಂಟ್ ಮೂವೀಸ್. ಹಾಗಾಗಿ ದಿಲ್ ರಾಜು ಉದಯ್ ನಿಧಿ ಸ್ಟಾಲಿನ್ ಬಳಿ ಈ ಒತ್ತಾಯ ಮಾಡಿದ್ದಾರೆ.
'ವಾರಿಸು' ಸಿನಿಮಾವು ಸಂಕ್ರಾಂತಿ ಹಬ್ಬದಂದು ಬಿಡುಗಡೆ ಆಗುತ್ತಿದ್ದು, ಅದೆ ದಿನ ತೆಲುಗಿನಲ್ಲಿ ಇಬ್ಬರು ಸ್ಟಾರ್ ನಟರಾದ ಚಿರಂಜೀವಿ ಹಾಗೂ ನಂದಮೂರಿ ಬಾಲಕೃಷ್ಣ ಅವರ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಹಾಗಾಗಿ ಆಂಧ್ರ-ತೆಲಂಗಾಣಗಳಲ್ಲಿ 'ವಾರಿಸು' ಸಿನಿಮಾಕ್ಕೆ ಹೆಚ್ಚು ಚಿತ್ರಮಂದಿರಗಳು ಧಕ್ಕುತ್ತಿಲ್ಲ.

ಇನ್ನು ತಮಿಳುನಾಡಿನಲ್ಲೂ ಸಹ ಅದೇ ದಿನ 'ವಾರಿಸು' ಎದುರು ಸ್ಟಾರ್ ನಟ ಅಜಿತ್‌ರ 'ತುಣಿವು' ಸಿನಿಮಾ ಬಿಡುಗಡೆ ಆಗುತ್ತಿದೆ. ಹಾಗಾಗಿ ತಮಿಳುನಾಡಿನಲ್ಲಿಯೂ ಭಾರಿ ಸಂಖ್ಯೆಯ ಚಿತ್ರಮಂದಿರಗಳು 'ವಾರಿಸು'ಗೆ ಲಭ್ಯವಾಗುತ್ತಿಲ್ಲ. ಇದು ನಿರ್ಮಾಪಕ ದಿಲ್ ರಾಜು ಆತಂಕಕ್ಕೆ ಕಾರಣವಾಗಿದೆ.
ಅಜಿತ್‌ಗಿಂತಲೂ ವಿಜಯ್ ದೊಡ್ಡ ಸ್ಟಾರ್ ನಟ ಎಂದು ದಿಲ್ ರಾಜು ಹೇಳಿರುವುದಕ್ಕೆ ಅಜಿತ್ ಅಭಿಮಾನಿಗಳು ಹಾಗೂ ತಮಿಳುನಾಡಿನ ಹಲವು ಸಿನಿಮಾ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಜಿತ್ ಅಭಿಮಾನಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ದಿಲ್ ರಾಜು ವಿರುದ್ಧ ನಿಂದನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.


Click it and Unblock the Notifications











