ದಳಪತಿ ವಿಜಯ್‌ಗೆ 'ಕರುಪ್ಪು' ಕಥೆ ಹೇಳಿದ್ದೆ.. ಅವ್ರು ಯಾಕೆ ನಟಿಸಲ್ಲ ಅಂದ್ರು ಕಾರಣ; ನಿರ್ದೇಶಕ ಆರ್‌ಜೆ ಬಾಲಾಜಿ
ಸೂರ್ಯ ನಟನೆಯ 'ಕರುಪ್ಪು' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಫ್ಯಾಂಟಸಿ ಎಂಟರ್‌ಟೈನರ್ ಸಿನಿಮಾ ಕರ್ನಾಟಕದಲ್ಲಿ ಕೂಡ ಸಖತ್ ಸದ್ದು ಮಾಡ್ತಿದೆ. 'ಕಾಂತಾರ- 2' ಹಾಗೂ 'ಸಪ್ತಸಾಗರದಾಚೆ ಎಲ್ಲೋ' ಚಿತ್ರಗಳಿಂದ ಸ್ಫೂರ್ತಿ ಪಡೆದು ಕೆಲ ದೃಶ್ಯಗಳನ್ನು ಕಟ್ಟಿಕೊಟ್ಟಿರುವುದಾಗಿ ನಿರ್ದೇಶಕ ಆರ್‌ಜೆ ಬಾಲಾಜಿ ಒಪ್ಪಿಕೊಂಡಿದ್ದಾರೆ.
'ಕರುಪ್ಪು' ಚಿತ್ರಕ್ಕೆ ಸೂರ್ಯ ಮೊದಲ ಆಯ್ಕೆ ಆಗಿರಲಿಲ್ಲ. ಬದಲಿಗೆ ದಳಪತಿ ವಿಜಯ್ ಹೀರೊ ಆಗಿ ನಟಿಸಬೇಕಿತ್ತು ಎನ್ನುವ ಚರ್ಚೆ ನಡೀತಿದೆ. ಈ ವಿಚಾರವನ್ನು ಇದೀಗ ಸ್ವತಃ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಹೌದು, ನಾನು ಈ ಕಥೆಯನ್ನು ಮೊದಲಿಗೆ ವಿಜಯ್ ಅವರಿಗೆ ಹೇಳಿದ್ದೆ. ಅವರಿಗೂ ಇಷ್ಟವಾಗಿಲ್ಲ. ಆದರೆ ರಾಜಕೀಯರಂಗಕ್ಕೆ ಪ್ರವೇಶಿಸಲು ಸಿದ್ಧತೆ ನಡೆಸಿದ್ದರು. ಅದಕ್ಕೆ ಪೂರಕವಾದ ಸಿನಿಮಾದಲ್ಲಿ ನಟಿಸೋಕೆ ಮನಸ್ಸು ಮನಸ್ಸು ಮಾಡಿದ್ದರು. ಹಾಗಾಗಿ 'ಜನನಾಯಗನ್' ಕಥೆ ಆಯ್ಕೆ ಮಾಡಿಕೊಂಡಿದ್ರು ಎಂದಿದ್ದಾರೆ.

ವಿಜಯ್ ಇಷ್ಟಪಟ್ಟು ನಟಿಸೋಕೆ ಸಾಧ್ಯವಾಗಲ್ಲ ಎಂದು ಹೇಳಿದ್ದು ಚಿತ್ರರಂಗದಲ್ಲಿ ಗೊತ್ತಾಗಿತ್ತು. ಹಾಗಾಗಿ ನಿರ್ಮಾಪಕರು ಈ ಕಥೆಯನ್ನು ಸೂರ್ಯ ಅವರಿಗೆ ಹೇಳಿ ಒಪ್ಪಿಸುವಂತೆ ಕೇಳಿದ್ರು. ಹೀಗಾಗಿ 'ಕುರುಪ್ಪು' ಚಿತ್ರಕ್ಕೆ ಸೂರ್ಯ ಹೀರೊ ಆಗುವಂತಾಯಿತು ಎಂದು ಆರ್‌ಜೆ ಬಾಲಾಜಿ ತಿಳಿಸಿದ್ದಾರೆ. The Hollywood Reporter India ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಕರುಪ್ಪು ಕಥೆಯನ್ನು ಮೊದಲಿಗೆ ವಿಜಯ್ ಅವರಿಗೆ ಹೇಳಿದ್ದೆ. ಎರಡ್ಮೂರು ಬಾರಿ ಮಾತುಕತೆ ನಡೆಸಿದ್ದೆವು. ರಾಜಕೀಯ ಪ್ರವೇಶಕ್ಕೂ ಕೊನೆ ಚಿತ್ರದಲ್ಲಿ ನಟಿಸುವ ಆಲೋಚನೆಯಲ್ಲಿದ್ರು.. ಬಳಿಕ ಕರೆ ಮಾಡಿ ಯಾಕೆ ಈ ಸಿನಿಮಾದಲ್ಲಿ ನಟಿಸೋಕೆ ಸಾಧ್ಯವಿಲ್ಲ ಅಂತ ಹೇಳಿದ್ರು. ಅವರು ಕೊಟ್ಟ ಕಾರಣಗಳು ನನಗೂ ಸರಿ ಅನಿಸಿತು" ಎಂದಿದ್ದಾರೆ.
'ಕರುಪ್ಪು' ಚಿತ್ರಕ್ಕೂ ಮುನ್ನ ವಿಜಯ್ ಅವರಿಗೆ ಮತ್ತೊಂದು ಕಥೆ ಹೇಳಿದ್ದೆ. ಆಗ ಕೂಡ ಒಳ್ಳೆ ರೀತಿಯಲ್ಲಿ ಸ್ಪಂದಿಸಿದ್ದರು. ಅಂದಹಾಗೆ ವಿಜಯ್ ಅವರ ಜೊತೆಗಿನ ಚರ್ಚೆ ವೇಳೆ ಕಥೆ ಬಗ್ಗೆ ಸಾಕಷ್ಟು ಸಲಹೆಗಳು ಕೊಟ್ರು. ಅದನ್ನು ನಾನು ಬಳಸಿಕೊಂಡೆ. ಅವರಿಂದಲೇ ಸೂರ್ಯ ಸರ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅದೇ ಕಾರಣಕ್ಕೆ ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಅವರಿಗೆ ಧನ್ಯವಾದ ತಿಳಿಸಿದ್ದೇವೆ ಎಂದು ಬಾಲಾಜಿ ವಿವರಿಸಿದ್ದಾರೆ.
ವಿನೋದ್ ನಿರ್ದೇಶನದ 'ಜನನಾಯಗನ್' ಕಥೆಯನ್ನು ವಿಜಯ್ ತಮ್ಮ ಕೊನೆಯ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರು. ತೆಲುಗಿನ 'ಭಗವತ್ ಕೇಸರಿ' ರೀಮೆಕ್ ಇದು. ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿತ್ತು. ಭ್ರಷ್ಟರಾಜಕಾರಣಿಗಳ ವಿರುದ್ಧ ಸಮರ ಸಾರುವ ಕಥೆ ಚಿತ್ರದಲ್ಲಿದೆ. ಸಂಕ್ರಾಂತಿ ವೇಳೆಗೆ ಸಿನಿಮಾ ರಿಲೀಸ್ ಮಾಡಿ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲು ವಿಜಯ್ ಪ್ರಯತ್ನಿಸಿದ್ದರು. ಆದರೆ ಸೆನ್ಸಾರ್ ಸಮಸ್ಯೆಯಿಂದ ಈವರೆಗೆ 'ಜನನಾಯಗನ್' ಸಿನಿಮಾ ಬಿಡುಗಡೆ ಆಗಲಿಲ್ಲ. ಇದೆಲ್ಲದರ ನಡುವೆ ಚುನಾವಣೆಗೆ ಕೆಲವೇ ದಿನಗಳ ಮುನ್ನ ಸಂಪೂರ್ಣ ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗಿಬಿಡ್ತು.
ಸದ್ಯ ವಿಜಯ್ ಚುನಾವಣೆಯಲ್ಲಿ ಗೆದ್ದು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಶೀಘ್ರದಲ್ಲೇ 'ಜನನಾಯಗನ್' ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಮಮಿತಾ ಬೈಜು ಮತ್ತೊಂದು ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಲನ್ ಆಗಿ ಪ್ರಕಾಶ್ ರಾಜ್ ಅಬ್ಬರಿಸಿದ್ದಾರೆ.
'ಜನನಾಯಗನ್' ಸಿನಿಮಾ ಲೀಕ್ ಆಗಿದ್ದರಿಂದ ನಿರ್ಮಾಪಕರಿಗೆ ಭಾರೀ ನಷ್ಟವಾಗಿದೆ. ಆದರೆ ವಿಜಯ್ ಸಿಎಂ ಆಗಿರುವುದರಿಂದ ಕ್ರೇಜ್ ಹೆಚ್ಚಾಗಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುವ ಲೆಕ್ಕಾಚಾರ ಶುರುವಾಗಿದೆ.


Click it and Unblock the Notifications