ತಮಿಳು ನಿರ್ದೇಶಕ ಶಂಕರ್ ಕೆಂಡಾಮಂಡಲ; ಕಾರಣ 'ದೇವರ' ಟ್ರೈಲರ್?
ತಮಿಳು ಚಿತ್ರ ನಿರ್ದೇಶಕ ಶಂಕರ್ ಗರಂ ಆಗಿದ್ದಾರೆ. ಸೂಪರ್ ಹಿಟ್ ಸಿನಿಮಾಗಳ ಸರದಾರ ಇದೀಗ ಸೋಲಿನ ಸುಳಿಗೆ ಸಿಲುಕಿದ್ದಾರೆ. ತಾನಾಯ್ತು ತನ್ನ ಸಿನಿಮಾ ಆಯ್ತು ಎಂದು ಇರುವ ಶಂಕರ್ ಇದೇ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಶಂಕರ್ ನಿರ್ದೇಶನದ ಸಿನಿಮಾಗಳು ಇತ್ತೀಚೆಗೆ ಸದ್ದು ಮಾಡ್ತಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ 'ಇಂಡಿಯನ್-2' ಸಿನಿಮಾ ನೆಲಕಚ್ಚಿತ್ತು. ಸದ್ಯ 'ಇಂಡಿಯನ್-3' ಹಾಗೂ ತೆಲುಗಿ 'ಗೇಮ್ ಚೇಂಜರ್' ಸಿನಿಮಾಗಳನ್ನು ತೆರೆಗೆ ತರುವ ಸನ್ನಾಹದಲ್ಲಿದ್ದಾರೆ. ಆ ಎರಡು ಸಿನಿಮಾಗಳು ಕೂಡ ಹೈಪ್ ಕ್ರಿಯೇಟ್ ಮಾಡುವಲ್ಲಿ ಸೋತಿದೆ. ಇದೆಲ್ಲದ ನಡುವೆ ಶಂಕರ್ ಕಾಪಿರೈಟ್ ಕೇಸ್ ಹಾಕುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಎಲ್ಲರ ಗಮನಕ್ಕೆ. ಸು. ವೆಂಕಟೇಶನ್ ಅವರ 'ವೀರ ಯುಗ ನಾಯಗನ್ ವೇಲ್ ಪಾರಿ' ತಮಿಳು ಕಾದಂಬರಿ ಕಾಪಿರೈಟ್ಸ್ ನನ್ನ ಬಳಿಯಿದೆ. ಆದರೆ ಅನೇಕ ಚಿತ್ರಗಳಲ್ಲಿ ಅನುಮತಿಯಿಲ್ಲದೆ ಆ ಕಾದಂಬರಿಯ ಪ್ರಮುಖ ದೃಶ್ಯಗಳನ್ನು ಬಳಸುವುದನ್ನು ನೋಡಿ ನನಗೆ ಶಾಕ್ ಆಗಿದೆ. ಇತ್ತೀಚೆಗೆ ಬಂದ ಒಂದು ಸಿನಿಮಾ ಟ್ರೇಲರ್‌ನಲ್ಲಿ ಕಾದಂಬರಿಯ ಪ್ರಮುಖ ದೃಶ್ಯವನ್ನು ನೋಡಿ ನಿಜವಾಗಿಯೂ ಬೇಸರವಾಗಿದೆ" ಎಂದು ನಿರ್ದೇಶಕ ಶಂಕರ್ ಬರೆದುಕೊಂಡಿದ್ದಾರೆ.
"ರಚನೆಕಾರರ ಹಕ್ಕುಗಳನ್ನು ಗೌರವಿಸಿ. ಸಿನಿಮಾ, ವೆಬ್ ಸೀರಿಸ್ ಮತ್ತು ಯಾವುದೇ ಮಾಧ್ಯಮದಲ್ಲಿ ಕಾದಂಬರಿಯ ದೃಶ್ಯಗಳನ್ನು ಬಳಸಬೇಡಿ. ದೃಶ್ಯಗಳ ಅನಧಿಕೃತವಾಗಿ ನಿಮಗೆ ಬೇಕಾದಂತೆ ಬದಲಿಸಿಕೊಂಡು ಸಿನಿಮಾ ಮಾಡುವುದರಿಂದ ದೂರವಿರಿ. ತಪ್ಪಿದರೆ ಕಾನೂನು ಕ್ರಮ ಎದುರಿಸಿ" ಎಂದು ಎಚ್ಚರಿಕೆ ನೀಡಿದ್ದಾರೆ.
ನಿರ್ದೇಶಕ ಶಂಕರ್ ಹೀಗೆ ಯಾವುದೇ ಚಿತ್ರದ ಹೆಸರು ಉಲ್ಲೇಖಿಸದೇ ಟ್ವೀಟ್ ಮಾಡಿರುವುದು ಚರ್ಚೆ ಹುಟ್ಟು ಹಾಕಿದೆ. ಅಷ್ಟಕ್ಕೂ ಅವರು ಯಾವ ಚಿತ್ರದ ದೃಶ್ಯಗಳನ್ನು ಪ್ರಸ್ತಾಪಿಸಿ ಹೀಗೆ ಹೇಳಿದ್ದಾರೆ? ಅವರ ಟಾರ್ಗೆಟ್ ಯಾರು? ಏನು ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ. ಇತ್ತೀಚೆಗೆ ಯಾವ ಸಿನಿಮಾ ಟ್ರೈಲರ್ ಬಿಡುಗಡೆ ಆಯಿತು? ಅದರಲ್ಲಿ ಯಾವ ದೃಶ್ಯ? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಶಂಕರ್ ಕಾನೂನು ಹೋರಾಟದ ಎಚ್ಚರಿಕೆ ಕೊಟ್ಟಿರುವುದು ಅಚ್ಚರಿ ಮೂಡಿಸಿದೆ.
ತಮಿಳಿನ 'ಕಂಗುವ' ಚಿತ್ರದ ಟ್ರೈಲರ್ ನೋಡಿ ಶಂಕರ್ ಪೋಸ್ಟ್ ಮಾಡಿದ್ದಾರೆ ಎನ್ನುವುದು ಕೆಲವರ ವಾದ. ಶಿವ ನಿರ್ದೇಶನದ ಈ ಚಿತ್ರದಲ್ಲಿ ಸೂರ್ಯ ನಟಿಸಿದ್ದಾರೆ. ಇದೊಂದು ಫ್ಯಾಂಟಸಿ ಸಿನಿಮಾ ಆಗಿದ್ದು ಇದರಲ್ಲಿ ಸು. ವೆಂಕಟೇಶನ್ ಬರೆದ ಐತಿಹಾಸಿಕ ಕಾದಂಬರಿ ಆಧರಿತ ದೃಶ್ಯಗಳು ಇದ್ಯಾ? ಎಂದು ಕೆಲವರು ಊಹಿಸಿಕೊಳ್ಳುತ್ತಿದ್ದಾರೆ.
ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಸಿನಿಮಾ ರಿಲೀಸ್ ಹೊಸ್ತಿಲಲ್ಲಿದೆ. ಆ ಚಿತ್ರದ ಎರಡು ಟ್ರೈಲರ್ ಬಿಡುಗಡೆ ಆಗಿದೆ ಸದ್ದು ಮಾಡ್ತಿದೆ. ಅಪ್ಪಿತಪ್ಪಿ ಅದರಲ್ಲಿ 'ವೀರ ಯುಗ ನಾಯಗನ್ ವೇಲ್ ಪಾರಿ' ಕಾದಂಬರಿ ಅಂಶಗಳು ಇದ್ಯಾ? ಎಂದು ಚರ್ಚೆ ನಡೀತಿದೆ. ಬರೀ ಟ್ರೈಲರ್ ನೋಡಿ ನಿಮ್ಮ ಬಳಿ ರೈಟ್ಸ್ ಇರುವ ಕಾದಂಬರಿಯಿಂದ ದೃಶ್ಯ ಕದ್ದಿದ್ದಾರೆ ಎಂದು ಹೇಳಬೇಡಿ. ಸಿನಿಮಾ ಬಿಡುಗಡೆ ಆಗವರೆಗೂ ಕಾಯಿರಿ ಎಂದು ಕೆಲವರು ಶಂಕರ್‌ಗೆ ಕಿವಿಮಾತು ಹೇಳುತ್ತಿದ್ದಾರೆ.
'ಜಂಟಲ್‌ಮನ್', 'ಕಾದಲನ್', 'ಇಂಡಿಯನ್', 'ಮುದಲ್ವನ್', 'ಬಾಯ್ಸ್', 'ಅನ್ನಿಯನ್', 'ಶಿವಾಜಿ', 'ರೋಬೊ' ರೀತಿಯ ಅದ್ಭುತ ಸಿನಿಮಾಗಳನ್ನು ಶಂಕರ್ ಕಟ್ಟಿಕೊಟ್ಟಿದ್ದಾರೆ. ತೆರೆಮೇಲೆ ವಿಭಿನ್ನ ಪ್ರಯೋಗಗಳನ್ನು ಮಾಡಿ ಗೆದ್ದಿದ್ದಾರೆ. ದಶಕಗಳ ಹಿಂದೆಯೇ ಬಾಲಿವುಡ್ ಮಂದಿ ಸೌತ್ ಸಿನಿಇಂಡಸ್ಟ್ರಿ ಕಡೆ ತಿರುಗಿ ನೋಡುವಂತೆ ಮಾಡಿದವರು ಶಂಕರ್. ಆದರೆ ಇತ್ತೀಚೆಗೆ ಅವರ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. 'ಐ', '2.O', 'ಇಂಡಿಯನ್-2' ಸಿನಿಮಾಗಳು ನಿರೀಕ್ಷೆ ಹುಸಿಗೊಳಿಸಿದ್ದವು.


Click it and Unblock the Notifications











