ಸಿಲ್ಕ್ ಸ್ಮಿತಾಳ ಒಂದು ರಾತ್ರಿ ರೇಟ್ ಎಷ್ಟು ಎಂದು ಕೇಳಿದ್ದ ಹಳ್ಳಿಗರು; ಕಕ್ಕಾಬಿಕ್ಕಿಯಾಗಿದ್ದ ನಿರ್ದೇಶಕ
ಒಂದ್ಕಾಲದಲ್ಲಿ ಮಾದಕ ನಟಿ ಸಿಲ್ಮಾ ಸ್ಮಿತಾ ಕ್ರೇಜ್ ಹೇಗಿತ್ತು ಎಂದು ಬಿಡಿಸಿ ಹೇಳುವುದು ಬೇಕಿಲ್ಲ. ನಾಯಕಿಯಾಗಿ ಹೆಚ್ಚು ನಟಿಸದೇ ಇದ್ದರೂ ಐಟಂ ಸಾಂಗ್‌ಗಳಲ್ಲಿ ಕುಣಿದು ಸಿಲ್ಕ್ ಜನಪ್ರಿಯತೆ ಸಾಧಿಸಿದ್ದರು. ಆಕೆಯನ್ನು ಒಮ್ಮೆ ನೋಡಿದರೆ ಸಾಕು, ಮಾತನಾಡಿಸಿದರೆ ಸಾಕು, ಮುಟ್ಟಿದರೆ ಸಾಕು ಎಂದು ಕೆಲವರು ಬಯಸಿದ್ದರು. ಅಷ್ಟರಮಟ್ಟಿಗೆ ಆಕೆಯ ಕ್ರೇಜ್ ಇತ್ತು.
ಸಿಲ್ಕ್ ಸ್ಮಿತಾ ಕಚ್ಚಿದ ಸೇಬನ್ನು ಕೂಡ ಹರಾಜು ಹಾಕಿದ್ದರು ಎನ್ನುವ ಇಂಟ್ರೆಸ್ಟಿಂಗ್ ಕಥೆಗಳು ಆಕೆಯ ಬಗ್ಗೆ ಚಾಲ್ತಿಯಲ್ಲಿದೆ. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧೀ ಕೂಡ ಸಿಲ್ಕ್ ಸ್ಮಿತಾ ಕ್ರೇಜ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ, ಆಕೆ ಯಾರು ಎಂದು ಕೇಳಿದ್ದರಂತೆ. ಸಿಲ್ಮ್ ಸ್ಮಿತಾ ಸಿನಿಮಾ ಚಿತ್ರೀಕರಣ ಅಂದರೆ ಬೇರೆ ಸಿನಿಮಾಗಳ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಕೂಡ ಸೆಟ್‌ಗೆ ಬಂದು ಕೂರುತ್ತಿದ್ದರು. ಆಕೆಯ ಡ್ಯಾನ್ಸ್ ನೋಡುತ್ತಿದ್ದರು.

ಬೋಲ್ಡ್ ಪಾತ್ರಗಳಲ್ಲಿ ನಟಿಸುತ್ತಿದ್ದ ಬಿಂದಾಸ್ ಸಾಂಗ್‌ಗಳಲ್ಲಿ ಕುಣಿಯುತ್ತಿದ್ದ ಸಿಲ್ಕ್ ಸ್ಮಿತಾ ವ್ಯಕ್ತಿಗತವಾಗಿ ಬಹಳ ಒಳ್ಳೆಯವರು. ತಮ್ಮ ಸುತ್ತಾಮುತ್ತಾ ಇರುವವರ ಜೊತೆ ಒಳ್ಳೆ ಒಡನಾಟ ಇಟ್ಟುಕೊಂಡಿದ್ದರು. ತಮ್ಮ ನೇರಾನೇರ ವ್ಯಕ್ತಿತ್ವದಿಂದ ಕೆಲವರಿಗೆ ಬೇಸರ ಹುಟ್ಟಿಸಿದ್ದರು. ಇನ್ನುಳಿದಂತೆ ಆಕೆ ಬಹಳ ಒಳ್ಳೆಯವರು ಎಂದು ಇವತ್ತಿಗೂ ಆಕೆಯ ಜೊತೆ ಕೆಲಸ ಮಾಡಿದ ನಿರ್ದೇಶಕರು, ಕಲಾವಿದರು ಹೇಳುತ್ತಿರುತ್ತಾರೆ.
ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿ ಒಂದೆರಡು ಸಿನಿಮಾಗಳನ್ನು ಸಿಲ್ಕ್ ಸ್ಮಿತಾ ನಿರ್ಮಿಸಿದ್ದರು. ಡಾ. ರಾಧಕೃಷ್ಣ ಎಂಬುವವರ ಜೊತೆ ಆಕೆಯ ಮದುವೆ ಕೂಡ ನಡೆದಿತ್ತು ಎನ್ನಲಾಗುತ್ತದೆ. ಆದರೆ ಈ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಸಿಲ್ಕ್ ಸ್ಮಿತಾ ಕಾಲ್‌ಶೀಟ್, ಸಿನಿಮಾ ಎಲ್ಲವನ್ನು ಆತನೇ ನೋಡಿಕೊಳ್ಳುತ್ತಿದ್ದ. ಹಣಕಾಸು ವಿಚಾರದಲ್ಲಿ ರಾಧಾಕೃಷ್ಣ ಮೋಸಮಾಡಿದ್ದ ಎನ್ನಲಾಗುತ್ತದೆ. ಆಕೆಯ ಆತ್ಮಹತ್ಯೆ ವಿಚಾರದ ಇವತ್ತಿಗೂ ನಿಗೂಢವಾಗಿಯೇ ಇದೆ.

ಸಿನಿಮಾಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಇವತ್ತಿಗೂ ಕೆಟ್ಟ ದೃಷ್ಟಿಯಲ್ಲೇ ನೋಡುವವರು ಸಾಕಷ್ಟು ಜನ ಇದ್ದಾರೆ. ಇನ್ನು ಕೊಂಚ ಬಿಂದಾಸ್ ಆಗಿ ಇರುವವರನ್ನು ನೋಡಿದರೆ ಏನೇನೋ ಕಲ್ಪಿಸಿಕೊಂಡು ತಮ್ಮಷ್ಟಕ್ಕೆ ತಾವೇ ಏನೇನೋ ಅಂದುಕೊಳ್ಳುತ್ತಾರೆ. ಸಿಲ್ಕ್ ಸ್ಮಿತಾ ಸಿಕ್ಕಾಪಟ್ಟೆ ಬೋಲ್ಡ್. ಸಿನಿಮಾಗಳಲ್ಲಿ ಬಿಂದಾಸ್ ಪಾತ್ರಗಳಲ್ಲಿ ನಟಿಸುತ್ತಿದ್ದರು. ಕುಣಿಯುತ್ತಿದ್ದರು. ಹಾಗಂತ ಆಕೆ ಏನು ಬೇಕಾದರೂ ಮಾಡುತ್ತಾಳೆ, ದುಡ್ಡು ಕೊಟ್ಟರೆ ಎಲ್ಲಿಗೆ ಬೇಕಾದರೂ ಬರ್ತಾಳೆ ಎಂದು ಭಾವಿಸುತ್ತಿದ್ದವರಿಗೆ ಲೆಕ್ಕವಿಲ್ಲ.
ತಮಿಳು ನಿರ್ದೇಶಕ ವಿ. ಶೇಖರ್ ಕೆಲ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ನಟಿಸಿದ್ದರು. ಒಮ್ಮೆ ಹಳ್ಳಿಯೊಂದರಲ್ಲಿ ಒಂದಷ್ಟು ಜನ ಬಂದು ಸಿಲ್ಕ್ ಸ್ಮಿತಾ ರೇಟ್ ಎಷ್ಟು ಸರ್ ಎಂದು ನನ್ನ ಬಳಿ ಕೇಳಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಪಾಪ ಆಕೆ ಬಹಳ ಒಳ್ಳೆಯ ಹುಡುಗಿ. ಆದರೆ ಜನ ಏನೇನೋ ಅಂದುಕೊಂಡು ಹೀಗೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ನಿರ್ದೇಶಕ ಶೇಖರ್ ಮಾಹಿತಿ ಹಂಚಿಕೊಂಡಿದ್ದಾರೆ.
ನಿರ್ದೇಶಕ ಶೇಖರ್ ಮಾತನಾಡಿ "ಒಮ್ಮೆ ಸಿನಿಮಾ ಚಿತ್ರೀಕರಣ ಹಳ್ಳಿಯೊಂದರಲ್ಲಿ ನಡೆಯುತ್ತಿತ್ತು. ಹಳ್ಳಿಯ ಮನೆಯೊಂದರಲ್ಲಿ ಸಿಲ್ಕ್ ಸ್ಮಿತಾ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೆವು. ಒಮ್ಮೆ ನಾನು, ಸಹ ನಿರ್ದೇಶಕರೆಲ್ಲಾ ಕೂತು ಮಾತನಾಡುತ್ತಿದ್ದೆವು. ಆಗ ಹಳ್ಳಿಯ ಒಂದಷ್ಟು ಜನ ದೊಡ್ಡ ವ್ಯಕ್ತಿಗಳು ಅಲ್ಲಿಗೆ ಬಂದರು. ನಮ್ಮ ಸಹ ನಿರ್ದೇಶಕರೆಲ್ಲಾ ಆ ವ್ಯಕ್ತಿಗಳ ಬಗ್ಗೆ ದೊಡ್ಡದಾಗಿ ಹೇಳಿದರು. ಬಳಿಕ ಮಾತನಾಡುತ್ತಾ ಆ ಸಿಲ್ಕ್ ಸ್ಮಿತಾ ರೇಟ್ ಎಷ್ಟು? ಎಂದು ಕೇಳಿದರು" ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.
"ನಾನು ಸಿನಿಮಾ ನಿರ್ಮಾಣ ಮಾಡಲು ಸಿಲ್ಕ್ ಸ್ಮಿತಾ ಅವರನ್ನು ನಟಿಸೋಕೆ ಅವರೆಲ್ಲಾ ಕೇಳುತ್ತಿದ್ದಾರೆ ಎಂದುಕೊಂಡೆ. ಒಂದು ದಿನಕ್ಕೆ ಎಷ್ಟು, ನಮ್ಮವರೆಲ್ಲಾ ಬಹಳ ಆಸೆಪಡುತ್ತಿದ್ದಾರೆ ಎಂದರು. ನನ್ನನ್ನು ಬ್ರೋಕರ್ ಕೆಲಸಕ್ಕೆ ಕರೆಯುತ್ತಿದ್ದಾರಾ ಅನಿಸಿತು. ನನಗೆ ಯಾವುದೇ ಕೆಟ್ಟ ಅಭ್ಯಾಸ ಇಲ್ಲ, ಆದರೆ ಇವರು ಬಂದು ಎಷ್ಟು ರೇಟ್ ಎಂದು ಕೇಳ್ತಾರೆ. ಬಳಿಕ ನನ್ನ ಸಹಾಯಕ ನಿರ್ದೇಶಕನನ್ನು ಕರೆದು ಬೈದೆ. ಇವರೆಲ್ಲಾ ಸಿನಿಮಾ ಮಾಡುವವರನ್ನು ದುಡ್ಡು ಕೊಟ್ಟು ಕೆಟ್ಟದಾಗಿ ನಡೆದುಕೊಳ್ಳಲು ನೋಡ್ತಿದ್ದಾರೆ. ಇವರನ್ನು ಕರ್ಕೊಂಡು ಹೋಗು" ಎಂದು ಹೇಳಿದ್ದಾಗಿ ವಿ. ಶೇಖರ್ ವಿವರಿಸಿದ್ದಾರೆ.


Click it and Unblock the Notifications











