"ಹಲ್ಲು ಉದುರಿ ಸಾಯೋ ಟೈಮಲ್ಲಿ ರಜನಿಕಾಂತ್ ನಟಿಸ್ತಿದ್ದಾರೆ": ಡಿಎಂಕೆ ಮುಖಂಡ ತಿರುಗೇಟು
ಸೂಪರ್ ಸ್ಟಾರ್ ರಜನಿಕಾಂತ್ ಕಾರ್ಯಕ್ರಮವೊಂದರಲ್ಲಿ ಡಿಎಂಕೆ ಮುಖಂಡ ದೊರೈ ಮುರುಗನ್ ಬಗ್ಗೆ ನೀಡಿದ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿದೆ. ತಲೈವಾ ಹೇಳಿಕೆಗೆ ದೊರೈ ಮುರುಗನ್ ತಿರುಗೇಟು ನೀಡಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಗುಣಗಾನ ಮಾಡುವ ಭರದಲ್ಲಿ ರಜನಿಕಾಂತ್ ನೀಡಿದ್ದ ಹೇಳಿಕೆ ಭಾರೀ ವೈರಲ್ ಆಗುತ್ತಿದೆ.
ಕಳೆದೆರಡು ದಿನಗಳಿಂದ ರಜನಿಕಾಂತ್ ಹಾಗೂ ಡಿಎಂಕೆ ಹಿರಿಯ ನಾಯಕ ದೊರೈ ಮುರುಗನ್ ವಾಕ್ಸಮರ ತಾರಕಕ್ಕೇರಿದೆ. ಚೆನ್ನೈನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ನಟ ರಜನಿಕಾಂತ್ ಮಾತನಾಡಿದ್ದರು. ಈ ವೇಳೆ ವೇದಿಕೆಯಲ್ಲೇ ಆಸೀನರಾಗಿದ್ದ ಸಿಎಂ ಸ್ಟಾಲಿನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಈ ವೇಳೆ ದೊರೆ ಮುರುಗನ್ ಬಗ್ಗೆ ರಜನಿಕಾಂತ್ ವ್ಯಂಗ್ಯ ಮಾಡಿದ್ದರು.

ತಂದೆ ಕರುಣಾನಿಧಿ ನಿಧನದ ಬಳಿಕ ಪುತ್ರ ಸ್ಟಾಲಿನ್ ಪಕ್ಷವನ್ನು ಮುನ್ನಡೆಸಿದ್ದು ನಿಜಕ್ಕೂ ಗ್ರೇಟ್. ಅಷ್ಟೇ ಅಲ್ಲ, ಪಕ್ಷ ಸಂಘಟಿಸಿ ಸಿಎಂ ಪಟ್ಟಕ್ಕೇರಿದ್ದಾರೆ. ರಾಜ್ಯವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಅದರಲ್ಲೂ ಪಕ್ಷದಲ್ಲಿರುವ ಹಿರಿಯ ಮುಖಂಡರ ಜೊತೆ ಉತ್ತಮ ರೀತಿಯ ಬಾಂಧವ್ಯ ಹೊಂದಿದ್ದು ಪರಸ್ಪರ ಸಹಕಾರದೊಂದಿಗೆ ಸರ್ಕಾರ ನಡೆಸುತ್ತಿದ್ದಾರೆ ಎಂದು ರಜನಿಕಾಂತ್ ಹೇಳಿದ್ದಾರೆ.
ಯಾವುದೇ ಶಿಕ್ಷಕರಿಗೆ ಹೊಸ ವಿದ್ಯಾರ್ಥಿಗಳನ್ನು ಸಂಭಾಳಿಸುವುದು ಸುಲಭ. ಆದರೆ ಹಿರಿಯ ವಿದ್ಯಾರ್ಥಿಗಳನ್ನು ನಿಯಂತ್ರಿಸುವುದು ಕಷ್ಟ. ಡಿಎಂಕೆ ಪಕ್ಷದಲ್ಲಿ ದೊರೆ ಮುರುಗನ್ ಎನ್ನುವವರು ಇದ್ದಾರೆ. ಅವರ ಬಹಳ ಚಾಲಾಕಿ. ಒಂದ್ಕಾಲದಲ್ಲಿ ಕರುಣಾನಿಧಿ ಅವರ ಕಣ್ಣುಗಳಿಗೆ ಬೆರಳಾಕಿ ಆಡಿಸಿದ್ದವರು ಎಂದು ವ್ಯಂಗ್ಯವಾಡಿದ್ದರು. ಅಂತಹವರ ಜೊತೆ ಸ್ಟಾಲಿನ್ ಏಗುವುದು, ಅವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುವುದು ಸವಾಲಿನ ಕೆಲಸ ಎಂದಿದ್ದರು.

ರಜನಿಕಾಂತ್ ವ್ಯಂಗ್ಯಭರಿತ ಮಾತಿಗೆ ಡಿಎಂಕೆ ಮುಖಂಡ ದೊರೆ ಮುರುಗನ್ ತಿರುಗೇಟು ನೀಡಿದ್ದಾರೆ. ತಮ್ಮನ್ನು ವಯಸ್ಸಾದವರು ಎಂದಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ. ರಜನಿಕಾಂತ್ ಅಂತಹವರು ವಯಸ್ಸಾಗಿ ಹಲ್ಲು ಉದುಕಿ ಗಡ್ಡಬಿಟ್ಟುಕೊಂಡು ಇನ್ನು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದೇ ಕಾರಣಕ್ಕೆ ಹೊಸ ಕಲಾವಿದರಿಗೆ ಅವಕಾಶಗಳು ಸಿಗುತ್ತಿಲ್ಲ ಎಂದು ಕುಟುಕಿದ್ದರು.
ಇನ್ನು ದೊರೆ ಮುರುಗನ್ ಮಾತಿಗೆ ಮತ್ತೆ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡುತ್ತಾ "ದೊರೆ ಮುರುಗನ್ ಅವ್ರು ಏನೇ ಹೇಳಿದರೂ ನನಗೆ ಬೇಸರವಿಲ್ಲ. ಅವರು ನನ್ನ ಬಹಳ ವರ್ಷಗಳ ಸ್ನೇಹಿತರು. ಅವರಂದ್ರೆ ನನಗೂ ಇಷ್ಟ. ನಮ್ಮಿಬ್ಬರ ಸ್ನೇಹ ಸದಾ ಮುಂದುವರೆಯುತ್ತದೆ" ಎಂದಿದ್ದಾರೆ.
ರಜನಿಕಾಂತ್ ಪ್ರತಿಕ್ರಿಯೆ ಬಗ್ಗೆ ದೊರೆ ಮುರುಗನ್ ಮಾತನಾಡಿದ್ದಾರೆ. "ನಾನು ಕೂಡ ಅದನ್ನೇ ಹೇಳುತ್ತೇನೆ. ನಮ್ಮಿಬ್ಬರ ಜೋಕ್ ಅನ್ನು ಹಗೆತನ ಎಂದುಕೊಳ್ಳಬಾರದು. ನಾವಿಬ್ಬರ ಸ್ನೇಹ ಹಿಂದೆ ಹೇಗಿತ್ತೋ ಅದೇ ರೀತಿ ಮುಂದುವರೆಯುತ್ತದೆ" ಎಂದು ಹೇಳಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಬಿಡುಗಡೆಗೆ ಸಜ್ಜಾಗಿದೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ. ಅದೇ ದಿನ ಸೂರ್ಯ ನಟನೆಯ 'ಕಂಗುವ' ಸಿನಿಮಾ ಕೂಡ ಬಿಡುಗಡೆ ಆಗಲಿದೆ. ಮರುದಿನ ಕನ್ನಡದ 'ಮಾರ್ಟಿನ್' ಸಿನಿಮಾ ತೆರೆಗೆ ಬರಲಿದೆ. ಧ್ರುವ ಸರ್ಜಾ ನಟನೆಯ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ಇದೀಗ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ. ಕನ್ನಡ ನಟ ಉಪೇಂದ್ರ ಚಿತ್ರದ ಮುಖ್ಯ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ. ಇತ್ತೀಚೆಗೆ ಅದು ಅಧಿಕೃತವಾಗಿ ಘೋಷಣೆ ಆಗಿದೆ. 'ಕೂಲಿ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸುಫರ್ ಸ್ಟಾರ್ ಜೊತೆ ನಟಿಸಲು ರಿಯಲ್ ಸ್ಟಾರ್ ಬಹಳ ಉತ್ಸುಕರಾಗಿದ್ದಾರೆ.


Click it and Unblock the Notifications











