"ಇಬ್ಬರು ನಟಿಯರ ಹೆಸರು ಸೇರಿಸಿ ವಿಜಯ್ (TVK) ಪಕ್ಷಕ್ಕೆ ನಾಮಕರಣ"; DMK ಸಚಿವ
ತಮಿಳುನಾಡು ವಿಧಾನಸಭೆ ಚುನಾವಣೆಗೆ ತೆರೆಮರೆಯಲ್ಲಿ ಕಸರತ್ತು ನಡೀತಿದೆ. ಮುಂದಿನ ವರ್ಷ ಹೊಸ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ನಟ ವಿಜಯ್ ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ TVK ಪಕ್ಷ ಸ್ಥಾಪಿಸಿ ಸವಾಲು ಹಾಕಿದ್ದಾರೆ. ಆಡಳಿತ ಪಕ್ಷದ ವಿರುದ್ಧ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.
ದಳಪತಿ ವಿಜಯ್ ತಮಿಳು ಚಿತ್ರರಂಗದ ಸ್ಟಾರ್ ನಟನಾಗಿ ಮೆರೆಯುತ್ತಿದ್ದಾರೆ. ಅದೇ ಜನಪ್ರಿಯತೆಯಿಂದ ಈಗ ರಾಜಕೀಯರಂಗಕ್ಕೆ ಧುಮುಕಿದ್ದಾರೆ. ಮುಂದಿನ ಸಿಎಂ ನಾನೇ ಎನ್ನುವಂತೆ ಹವಾ ಸೃಷ್ಟಿಸಿದ್ದಾರೆ. ಆದರೆ ಆಡಳಿತದಲ್ಲಿರುವ ಡಿಎಂಕೆ ಪಕ್ಷ ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ. ವಿಜಯ್ ವಿರುದ್ಧ ಡಿಎಂಕೆ ಮುಖಂಡರು ಮುಗಿಬೀಳುತ್ತಿದ್ದಾರೆ.

ಕಳೆದ ವರ್ಷ ವಿಜಯ್ 'ತಮಿಳಗ ವೆಟ್ರಿ ಕಳಗಂ' ಹೆಸರಿನಲ್ಲಿ ಪಕ್ಷವನ್ನು ಘೋಷಿಸಿದ್ದಾರೆ. ಪಕ್ಷಕ್ಕೆ ಚಿಹ್ನೆ, ಬಾವುಟ ಎಲ್ಲವನ್ನು ಪ್ರದರ್ಶಿಸಿದ್ದರು. ಆಗಾಗ್ಗೆ ಸಮಾವೇಶ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಆಡಳಿತ ಪಕ್ಷದ ಭ್ರಷ್ಟಾಚಾರದ ಬಗ್ಗೆ ವಾಗ್ದಾಳಿ ನಡೆಸುತ್ತಾ ಬರುತ್ತಿದ್ದಾರೆ. ಸದ್ಯ ವಿಜಯ್ ಆರೋಪಗಳಿಗೆ ಡಿಎಂಕೆ ಪಕ್ಷದ ಸಚಿವ ಎಂಆರ್‌ಕೆ ಪನ್ನೀರುಸೆಲ್ವಂ ತಿರುಗೇಟು ನೀಡಿದ್ದಾರೆ.
ನಟ ವಿಜಯ್ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟ. ಚಿತ್ರವೊಂದಕ್ಕೆ ಸದ್ಯ 200 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಈ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆ ನಡೆದಿತ್ತು. ಆದರೆ ವಿಜಯ್ ಸಂಭಾವನೆಯನ್ನು ಬ್ಲ್ಯಾಕ್ ಮನಿ ರೂಪದಲ್ಲಿ ಪಡೆಯುತ್ತಾರೆ ಎಂದು ಪನ್ನೀರುಸೆಲ್ವಂ ಆರೋಪಿಸಿದ್ದಾರೆ. ಬ್ಲ್ಯಾಕ್ ಮನಿ ರೂಪದಲ್ಲಿ ಹಣ ಸಂಭಾವನೆ ಪಡೆಯುವ ವಿಜಯ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ನಟ ವಿಜಯ್ ಜೊತೆಗೆ ನಟಿಯರಾದ ತ್ರಿಶಾ ಹಾಗೂ ಕೀರ್ತಿ ಸುರೇಶ್ ಹೆಸರು ತಳುಕು ಹಾಕಿ ಒಂದಷ್ಟು ಸುದ್ದಿಗಳನ್ನು ಹಬ್ಬಿಸಲಾಗಿತ್ತು. ವಿಜಯ್ ತಮ್ಮ ಪಕ್ಷಕ್ಕೆ TVK ಎಂದು ನಾಮಕರಣ ಮಾಡುತ್ತಿದ್ದಂತೆ ಕಿಡಿಗೇಡಿಗಳು ವ್ಯಂಗ್ಯವಾಡಿದ್ದರು. TVK ಅಂದರೆ ಏನು? ತ್ರಿಶಾ ವಿಜಯ್ ಕೀರ್ತಿ ಇರಬಹುದು ಎಂದು ಅಣಕವಾಡಿದ್ದರು. ಇದೀಗ ಇದೇ ವಿಚಾರವನ್ನು ಸಚಿವ ಎಂಆರ್‌ಕೆ ಪನ್ನೀರುಸೆಲ್ವಂ ಹೇಳಿ ಮೂದಿಸಿದ್ದಾರೆ.
"ನಮ್ಮದು ಡಿಎಂಕೆ ಪಕ್ಷ. ದ್ರಾವಿಡ ಮುನ್ನೆಟ್ರ ಕಳಗಂ. ಹೆಸರು ಒಂದು ಸಮುದಾಯವನ್ನು ಪ್ರತಿನಿಧಿಸುತ್ತದೆ. TVK ಅಂದರೆ ಏನಪ್ಪಾ ಅರ್ಥ? 'T' ಅಂದ್ರೆ ಏನು? ನೀವೇ ಅರ್ಥ ಮಾಡ್ಕೊಳಿ" ಎಂದಿದ್ದಾರೆ. ಎದುರಿಗಿದ್ದ ಡಿಎಂಕೆ ಅಭಿಮಾನಿಗಳು 'T' ಅಂದ್ರೆ ತ್ರಿಶಾ, 'V' ವಿಜಯ್, 'K' ಅಂದ್ರೆ ಕೀರ್ತಿ ಎಂದು ಕೂಗಿದ್ದಾರೆ. ಇದನ್ನು ಹೇಳ್ತಿಲ್ಲ. ನೀವೇ ಹೇಳುತ್ತಿರುವರು ಎಂದು ಪರೋಕ್ಷವಾಗಿ ಪನ್ನೀರುಸೆಲ್ವಂ ವ್ಯಂಗ್ಯವಾಡಿದ್ದಾರೆ.
ರಾಜ್ಯವನ್ನು ರಕ್ಷಿಸುವ ಬಗ್ಗೆ ವಿಜಯ್ ಮಾತನಾಡುತ್ತಾರೆ. ಖುದ್ದು ಆತನೇ ತಮ್ಮ ಪೋಷಕರ ಜೊತೆ ಬದುಕುತ್ತಿಲ್ಲ ಎಂದು ಡಿಎಂಕೆ ಸಚಿವ ತಿರುಗೇಟು ನೀಡಿದ್ದಾರೆ. ಸರ್ಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾತೆ ಇದೇನು? ಸಿನಿಮಾದಲ್ಲಿ ನಟಿಸಿದಂತೆ ಎಂದುಕೊಂಡಿದ್ದಾರಾ? ಎಂದು ವ್ಯಂಗ್ಯವಾಡಿದ್ದಾರೆ ಒಟ್ಟಾರೆ ಸಚಿವ ಪನ್ನೀರುಸೆಲ್ವಂ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ನಟ ವಿಜಯ್ ಸದ್ಯ 'ಜನನಾಯಕನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿನೋದ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ. ಚಿತ್ರಕ್ಕಾಗಿ ವಿಜಯ್ 250 ಕೋಟಿ ರೂ ಸಂಭಾವನೆ ಪಡೆದಿರುವ ಅಂದಾಜಿದೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ತೆರೆಗೆ ಬರಲಿದೆ.
'ಜನನಾಯಕನ್' ಚಿತ್ರವನ್ನು ವಿಜಯ್ ತಮ್ಮ ಪೊಲಿಟಿಕಲ್ ಎಂಟ್ರಿಗೆ ವೇದಿಕೆ ಮಾಡಿಕೊಳ್ಳುತ್ತಿದ್ದಾರೆ. ಪೂಜಾ ಹೆಗ್ಡೆ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇದೇ ದಳಪತಿ ನಟಿಸುವ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ. ಆದರೆ ವಿಜಯ್ ಮಾತ್ರ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.


Click it and Unblock the Notifications











