ಕರುಣಾನಿಧಿ ಹಿಂದೆ ನಿಂತಿದ್ದ ಹುಡುಗ ಅವರ ಪಕ್ಷವನ್ನೇ ಮುಗಿಸಿದ ಎಂದ ಆರ್ಜಿವಿ ವಿರುದ್ಧ ಡಿಎಂಕೆ ಬೆಂಬಲಿಗರ ಆಕ್ರೋಶ
ವಿಜಯ್ ಹೊಡೆದ ವಿಶಲ್‌ಗೆ ದ್ರಾವಿಡ ಕೋಟೆ ಬೆಚ್ಚಿ ಬಿದ್ದಿದೆ. ಭಾರತದ ರಾಜಕೀಯ ಇತಿಹಾಸದಲ್ಲೇ ಹೊಸದೊಂದು ಕ್ರಾಂತಿಯ ಅಲೆ ಎದ್ದಿದೆ. ಹಿಂದೆ ಕೇವಲ ಬಾಕ್ಸಾಫೀಸ್ ಕಿಂಗ್ ಆಗಿದ್ದ ದಳಪತಿ ಈಗ ಅಖಂಡ ತಮಿಳುನಾಡಿನ ಅಧಿಪತಿಯಾಗಿ ಹೊರ ಹೊಮ್ಮಿದ್ದಾರೆ. ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇನ್ನೂ ವಿಜಯ್ ಪಕ್ಷಕ್ಕೆ ಓಂಕಾರ ಹಾಕಿದ್ದು ಕೇವಲ ಎರಡು ವರ್ಷದ ಹಿಂದೆಯಷ್ಟೇ. ಎರಡೇ ವರ್ಷದಲ್ಲಿ ಈ ಹಂತಕ್ಕೆ ವಿಜಯ್ ತಲುಪಿದ್ದನ್ನು ಕಂಡು ಹಲವರು ಬೆಕ್ಕಸ ಬೆರಗಾಗಿದ್ದಾರೆ. ಮತ್ತೊಂದು ಕಡೆ ಫಲಿತಾಂಶ ಬರುವ ಮುನ್ನ ''ಗಿಲ್ಲಿ''ಯನ್ನು ಗೇಲಿ ಮಾಡುತ್ತಿದ್ದವರೆಲ್ಲ ಸದ್ಯ ಕಣ್ಮರೆಯಾಗಿದ್ದಾರೆ.

ಚಿತ್ರರಂಗ ಕೂಡ ವಿಜಯ್ ಅವರ ಈ ಅಭೂತಪೂರ್ವ ಗೆಲುವನ್ನು ಸಂಭ್ರಮಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಯ ಮಹಾಪೂರ ಕೂಡ ಹರಿದು ಬಂದಿದೆ. ಆದರೆ, ಹಲವರ ಕಣ್ಣು ಕುಕ್ಕಿದ್ದು ಮತ್ತೆ ಚರ್ಚೆಗೀಡಾಗಿದ್ದು ರಾಮ್ ಗೋಪಾಲ್ ವರ್ಮಾ ಹಂಚಿಕೊಂಡ ಫೋಟೊ ಮತ್ತು ಬರೆದುಕೊಂಡ ಸಾಲುಗಳು.
ರಾಮ್ ಗೋಪಾಲ್ ವರ್ಮಾ ಟ್ವಿಟ್‌ನಲ್ಲೇನಿದೆ ?
ಹೌದು, ದಳಪತಿಯ ವಿಜಯೋತ್ಸವವನ್ನು ರಾಮ್ ಗೋಪಾಲ್ ವರ್ಮಾ ತಮ್ಮದೇ ಶೈಲಿಯಲ್ಲಿ ಬಣ್ಣಿಸಿದ್ದಾರೆ. ಪುರುಸೊತ್ತಾಗಿ ಕುಂತು ವಿಜಯ್ ಅವರ ಗತಕಾಲದ ಫೋಟೊವೊಂದನ್ನು ಹೆಕ್ಕಿ ತೆಗೆದಿದ್ದಾರೆ. ವರ್ಮಾ ಕೈಗೆ ಸಿಕ್ಕ ಈ ಫೋಟೊದಲ್ಲಿ ಡಿಎಂಕೆ ನಾಯಕ ಮತ್ತು ತಮಿಳುನಾಡು ರಾಜಕೀಯದ ದಂತಕತೆ ಎಂ ಕರುಣಾನಿಧಿ ಯಾವುದೋ ಕಚೇರಿ ಅಥವಾ ಮಳಿಗೆಯ ಉದ್ಘಾಟನೆ ಮಾಡುತ್ತಿದ್ದಾರೆ. ವಿಶೇಷ ಅಂದರೆ ಇದೇ ಫೋಟೊದಲ್ಲಿ ಬಾಲಕನಾಗಿದ್ದ ವಿಜಯ್ ಇದ್ದಾರೆ.
ಈ ಅಪರೂಪದ ಫೋಟೊ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ತನ್ನ ಹಿಂದೆ ನಿಂತ ಈ ಪುಟ್ಟ ಹುಡುಗ ಮುಂದೆ ಒಂದು ದಿನ ತನ್ನ ಪಕ್ಷವನ್ನೇ ಧೂಳಿಪಟ ಮಾಡ್ತಾನೆ ಎಂದು ಕರುಣಾನಿಧಿ ಕನಸಿನಲ್ಲಿಯೂ ಯೋಚನೆ ಮಾಡಿರಲಿಕ್ಕಿಲ್ಲ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಸದ್ಯ ವರ್ಮಾ ಅವರ ಈ ಟ್ವಿಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡಿಎಂಕೆ ಅಭಿಮಾನಿಗಳನ್ನು ಕೆರಳಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ರಾಮ್ ಗೋಪಾಲ್ ವರ್ಮಾ ವಿರುದ್ಧ ಕಿಡಿ ಕಾರಿದ್ದಾರೆ.

ಆರ್ಜಿವಿ ಪೋಸ್ಟ್ ಗೆ ಡಿಎಂಕೆ ಬೆಂಬಲಿಗರ ಆಕ್ರೋಶ
| ವಿಭಾಗ (Category) | ಡಿಎಂಕೆ ಬೆಂಬಲಿಗರ ಪ್ರತಿಕ್ರಿಯೆ (DMK Supporters Response) |
|---|---|
| ಸಿದ್ಧಾಂತದ ಬಲ | ದ್ರಾವಿಡ ಸಿದ್ಧಾಂತವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಹೊಸಬರು ರಾಜಕೀಯಕ್ಕೆ ಬರಬಹುದು, ಆದರೆ ಅವರು ದ್ರಾವಿಡ ಸಿದ್ಧಾಂತದ ಹೊರತಾಗಿ ಏನೂ ಮಾಡಲು ಸಾಧ್ಯವಿಲ್ಲ. |
| ಇತಿಹಾಸ ಮತ್ತು ಸೋಲು | ಪಕ್ಷ ನಾಶವಾಯ್ತು ಅನ್ನೋದೆಲ್ಲಾ ಸುಳ್ಳು. ಮೊದಲು ಡಿಎಂಕೆ ಇತಿಹಾಸ ಓದ್ಕೊಂಡು ಬನ್ನಿ ಸರ್. ಕಳೆದ 75 ವರ್ಷಗಳಿಂದ ಈ ಪಕ್ಷ ಬೆಳೆದು ಬಂದಿದೆ. ರಾಜಕೀಯದಲ್ಲಿ ಗೆಲುವು-ಸೋಲು ಅನ್ನೋದು ಮಾಮೂಲಿ. |
| ಪಕ್ಷದ ಅಸ್ತಿತ್ವ | ಡಿಎಂಕೆಯನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಕೈಯಲ್ಲಿ ಆಗಲಿ ಅಥವಾ ಆ ದೇವರಿಂದಲೂ ಇದು ಸಾಧ್ಯವಿಲ್ಲ, ನೆನಪಿಡಿ. |
| ನಟ Vs ಅಭಿವೃದ್ಧಿ | ಖಂಡಿತ, ಕಲೈಂಜರ್ ಅವರು ಇದನ್ನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಯಾಕಂದ್ರೆ, ಜನ ಅಭಿವೃದ್ಧಿಯನ್ನು ಬಿಟ್ಟು ಬರಿ ಸಿನಿಮಾ ನಟನನ್ನು ಆಯ್ಕೆ ಮಾಡ್ತಾರೆ ಅಂತ ಅವರಿಗೆ ಗೊತ್ತಿರಲಿಲ್ಲ. |
| ವಾಸ್ತವದ ನೆಲೆಗಟ್ಟು | ಯಾವುದೂ ನಾಶವಾಗಿಲ್ಲ, ಸುಮ್ಮನೆ ಸೆನ್ಸೇಷನಲ್ ಮಾಡಬೇಡಿ. ಡಿಎಂಕೆ ಇದಕ್ಕಿಂತ ಕೆಟ್ಟ ದಿನಗಳನ್ನು ನೋಡಿದೆ ಮತ್ತು ಮತ್ತೆ ಎದ್ದು ಬಂದಿದೆ. ಇದು ಕೇವಲ ಒಂದು ಚುನಾವಣೆ ಅಷ್ಟೇ. ಅವರು ತಮ್ಮ ತಪ್ಪು ತಿದ್ದಿಕೊಂಡು ಮತ್ತೆ ಬರ್ತಾರೆ. |
| ಚಳವಳಿಯ ಬುನಾದಿ | ಕಲೈಂಜರ್ ಕಟ್ಟಿದ ಈ ಪಕ್ಷ ಕೇವಲ ಒಬ್ಬ ವ್ಯಕ್ತಿಯ ಸುತ್ತ ಸುತ್ತುವಂಥದ್ದಲ್ಲ. ಇದು ದಶಕಗಳ ಕಾಲ ವಿಚಾರಗಳು, ತತ್ವಗಳು ಮತ್ತು ಜನರ ನಂಬಿಕೆಯ ಮೇಲೆ ಬೆಳೆದಿರೋ ಒಂದು ದೊಡ್ಡ ಚಳವಳಿ. ಇಂತಹ ಗಟ್ಟಿಯಾದ ಬುನಾದಿಯನ್ನು ಯಾರೋ ಒಬ್ಬ ವ್ಯಕ್ತಿ ಬಂದು ನಾಶ ಮಾಡಲು ಸಾಧ್ಯವೇ ಇಲ್ಲ. |
| ಚುನಾವಣಾ ಲೆಕ್ಕಾಚಾರ | ತಮಿಳುನಾಡು ರಾಜಕೀಯದಲ್ಲಿ ಸತತವಾಗಿ ಎರಡು ಬಾರಿ ಅಧಿಕಾರ ನಡೆಸಿದ ಮೇಲೆ, ಮೂರನೇ ಬಾರಿಯೂ ಗೆಲ್ಲೋದು ಅಷ್ಟು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಮೈತ್ರಿಕೂಟ 72 ಸ್ಥಾನಗಳನ್ನು ಗೆದ್ದಿದೆ ಅಂದ್ರೆ ಅದು ಸಾಮಾನ್ಯ ವಿಷಯವಲ್ಲ. ಹಾಗಾಗಿ ಯಾರೋ ಒಬ್ಬರು ಪಕ್ಷವನ್ನೇ ಮುಗಿಸಿಬಿಟ್ಟರು ಅನ್ನೋದು ಬರಿ ಎಮೋಷನಲ್ ಮಾತಷ್ಟೇ. |
| ಪ್ರಜಾಪ್ರಭುತ್ವದ ಹಾದಿ | ರಾಜಕೀಯದಲ್ಲಿ ಒಬ್ಬರನ್ನ ಸೋಲಿಸುವುದು ಅಂದ್ರೆ ಅವರನ್ನ ನಾಶ ಮಾಡುವುದು ಅಂತಲ್ಲ. ಇದು ಪ್ರಜಾಪ್ರಭುತ್ವದ ಒಂದು ಭಾಗವಷ್ಟೇ. ಒಂದು ಪಕ್ಷದ ಉದ್ದೇಶ ಮತ್ತು ಸಿದ್ಧಾಂತ ಇಂತಹ ಹಿನ್ನಡೆಗಳನ್ನು ಮೀರಿ ಬೆಳೆಯುತ್ತೆ. ಇವತ್ತು TVK ಮೇಲೆ ಬರಬಹುದು, ನಾಳೆ ಕೆಳಗೆ ಬೀಳಬಹುದು. |
| ಖಡಕ್ ಎಚ್ಚರಿಕೆ | ಲೋ ದಡ್ಡ, ಡಿಎಂಕೆಯನ್ನು ನಾಶ ಮಾಡೋಕೆ ಹುಟ್ಟಿರೋನು ಈ ಭೂಮಿ ಮೇಲೆ ಇನ್ನೂ ಯಾರೂ ಇಲ್ಲ. ನೀನೇನಾದ್ರೂ ನಮ್ಮನ್ನು ನಾಶ ಮಾಡೋಕೆ ಬಂದ್ರೆ, ನೀನೇ ನಿನ್ನನ್ನು ನಾಶ ಮಾಡಿಕೊಂಡಂತೆ. ಇದು ಶಕ್ತಿಶಾಲಿ ಪಕ್ಷ, ಡಿಎಂಕೆಯನ್ನು ಅಷ್ಟು ಸುಲಭವಾಗಿ ಕಡೆಗಣಿಸಬೇಡ. |
ಹೀಗೆ ಹಲವರು ರಾಮ್ ಗೋಪಾಲ್ ವರ್ಮಾ ವಿರುದ್ಧ ತಿರುಗಿ ಬಿದ್ದಿದ್ಧಾರೆ. ತಮ್ಮ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ಧಾರೆ. ಡಿಎಂಕೆ ಸೋತಿರಬಹುದು ಆದರೆ ನೀವು ಹೇಳಿದಂತೆ ಸರ್ವನಾಶವಾಗಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಇನ್ನುಳಿದಂತೆ ಸದ್ಯ ವಿಜಯ್ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಆದರೆ ವಿಜಯ್ ಹಕ್ಕು ಮಂಡನೆಗೆ ರಾಜ್ಯಪಾಲರು ತೃಪ್ತಿಯಾಗಿಲ್ಲ. ಯಾಕೆಂದರೆ ಸರ್ಕಾರದ ರಚನೆಗೆ ಮ್ಯಾಜಿಕ್ ನಂಬರ್ 118 ಇದೆ. ಆದರೆ ವಿಜಯ್ ಹತ್ತಿರ ಇರುವುದು ಸದ್ಯ ಕೇವಲ 112 ಸಂಖ್ಯಾಬಲ ಅಷ್ಟೇ. ಸರ್ಕಾರ ರಚನೆಗೆ ಆರು ಶಾಸಕರ ಬೆಂಬಲದ ಅವಶ್ಯಕತೆ ವಿಜಯ್ ಗೆ ಇನ್ನೂ ಬೇಕಿದೆ. ಹೀಗಾಗಿ ವಿಜಯ್ ಮುಂದಿನ ಹೆಜ್ಜೆಯ ಮೇಲೀಗ ಎಲ್ಲರ ಕಣ್ಣಿದೆ. ಮತ್ಯಾರ ಬೆಂಬಲವನ್ನು ವಿಜಯ್ ಪಡೆಯುತ್ತಾರೆ ಎನ್ನುವ ಕುತೂಹಲ ಈಗ ತಮಿಳುನಾಡಿನಲ್ಲಿ ಮನೆ ಮಾಡಿದೆ.


Click it and Unblock the Notifications