ಸುಧಾ ಕೊಂಗರ ನಿರ್ದೇಶನದಲ್ಲಿ ಧನಂಜಯ್; ಟ್ರೈಲರ್ ಬಂದ್ರು ಫ್ಯಾನ್ಸ್‌ಗೆ ಬೇಸರ
ಡಾಲಿ ಧನಂಜಯ್ ಈಗಾಗಲೇ ಪರಭಾಷಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಪುಷ್ಪ' ಸರಣಿ ಸಿನಿಮಾ ನಟಿಸಿ ಸೈ ಎನಿಸಿಕೊಂಡಿದ್ದರು. ತಮಿಳು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಇದೀಗ ಮತ್ತೊಂದು ತಮಿಳು ಚಿತ್ರದಲ್ಲಿ ಮಿಂಚಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರ್ತಿದೆ.
ಸುಧಾ ಕೊಂಗರ ನಿರ್ದೇಶನದಲ್ಲಿ ಶಿವ ಕಾರ್ತಿಕೇಯನ್ ಹಾಗೂ ಜಯಂ ರವಿ ನಟನೆಯ 'ಪರಾಶಕ್ತಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜನವರಿ 10ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಸದ್ಯ ಟ್ರೈಲರ್ ಬಿಡುಗಡೆ ಆಗಿ ಸದ್ದು ಮಾಡ್ತಿದ್ದು ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ನಟಿಸಿದ್ದಾರೆ. ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರುದ್ಧದ ಕಥೆ ಚಿತ್ರದಲ್ಲಿದೆ. ಐತಿಹಾಸಿಕ ಕಥಾಹಂದರ ಸಿನಿಮಾ ಬಹಳ ಕುತೂಹಲ ಮೂಡಿಸಿದೆ.

'ಪರಾಶಕ್ತಿ' ಚಿತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ. ಆದರೆ ಟ್ರೈಲರ್‌ನಲ್ಲಿ ಅವರನ್ನು ತೋರಿಸಿಲ್ಲ. ಚಿತ್ರದಲ್ಲಿ ಧನಂಜಯ್ ನಟಿಸಿರುವುದು ಖಚಿತವಾಗಿದೆ. ಡಾಲಿ ತಮ್ಮ ಅದ್ಭುತ ನಟನೆಯಿಂದ ಪರಭಾಷಾ ಫಿಲ್ಮ್ ಮೇಕರ್ಸ್ ಕಣ್ಣಿಗೆ ಬಿದ್ದಿದ್ದಾರೆ. ಹಾಗಾಗಿ ಅಲ್ಲಿನ ಸಿನಿಮಾಗಳಿಗೆ ಕರೆದು ಅವಕಾಶ ಕೊಡುತ್ತಾರೆ. ಅದೇ ರೀತಿ ಈಗ ಪರಾಶಕ್ತಿ ಚಿತ್ರದಲ್ಲಿ ನಟಿಸಿದ್ದಾರೆ. ಸಣ್ಣದೊಂದು ಪಾತ್ರದಲ್ಲಿ ಧನು ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಸಾಲು ಸಾಲು ಸಿನಿಮಾಗಳಲ್ಲಿ ಧನಂಜಯ್ ನಟಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಯಾವುದು ಬಿಡುಗಡೆ ಆಗ್ತಿಲ್ಲ. ಈ ವಾರ 'ಪರಾಶಕ್ತಿ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಕಳೆದ ವರ್ಷ 'ವಿದ್ಯಾಪತಿ' ಚಿತ್ರ ನಿರ್ಮಿಸಿ ಅತಿಥಿ ಪಾತ್ರದಲ್ಲಿ ಡಾಲಿ ನಟಿಸಿದ್ದರು. ಸದ್ಯ 'ಜಿಂಗೋ', 'ಉತ್ತರಕಾಂಡ', 'ಅಣ್ಣ ಫ್ರಮ್ ಮೆಕ್ಸಿಕೊ', 'ಹಲಗಲಿ', '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾಗಳು ಧನು ಕೈಯಲ್ಲಿವೆ.
'ಪರಾಶಕ್ತಿ' ಸಿನಿಮಾ ವಿಚಾರಕ್ಕೆ ಬಂದರೆ ಸುಧಾ ಕೊಂಗರ ಆಕ್ಷನ್ ಕಟ್ ಹೇಳಿದ್ದಾರೆ. 'ಸುರರೈ ಪೊಟ್ರು' ಬಳಿಕ ಸುಧಾ ನಿರ್ದೇಶನದ ಸಿನಿಮಾಗಳು ಸದ್ದು ಮಾಡಲಿಲ್ಲ. ಹಾಗಾಗಿ ಈ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಡಾವ್ನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಆಕಾಶ್ ಭಾಸ್ಕರನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಜಯಂ ರವಿ, ಶಿವ ಕಾರ್ತಿಕೇಯನ್ ಜೊತೆಗೆ ಅಥರ್ವ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
ಪ್ರಕಾಶ್ ಬೆಳವಾಡಿ, ಪೃಥ್ವಿ ರಾಜನ್, ಬಾಸಿಲ್ ಜೋಸೆಫ್, ಮಧುರ್ ಮಿಟ್ಟಲ್ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 60ರ ದಶಕದ ಹಿನ್ನೆಲೆಯಲ್ಲಿ 'ಪರಾಶಕ್ತಿ' ಸಿನಿಮಾ ಕಟ್ಟಿಕೊಡಲಾಗಿದೆ. ಅಂದಿನ ಕಾಲಘಟ್ಟ ತೆರೆಗೆ ತರಲು ಚಿತ್ರತಂಡ ಬಹಳ ಶ್ರಮಿಸಿದೆ. ಚೆನ್ನೈ, ಚಿದಂಬರಂ, ಕಾರೈಕುಡಿ, ಮಧುರೆ, ಕೊಲಂಬೊ ಹಾಗೂ ಪೊಲ್ಲಾಚ್ಚಿಯಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.
ಜಿ. ವಿ ಪ್ರಕಾಶ್ ಕುಮಾರ್ ಸಂಗೀತ 'ಪರಾಶಕ್ತಿ' ಚಿತ್ರಕ್ಕಿದೆ. ರೆಡ್ ಜೈಂಟ್ ಮೂವೀಸ್ ಸಂಸ್ಥೆ ಚಿತ್ರ ವಿತರಣೆ ಮಾಡುತ್ತಿದೆ. ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಜನವರಿ 9ರಂದು ತೆರೆಗೆ ಬರ್ತಿದೆ. ಅದಕ್ಕೆ ಎದುರಾಗಿ 'ಪರಾಶಕ್ತಿ' ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 'ಜನ ನಾಯಗನ್' ಚಿತ್ರ ನಿರ್ಮಿಸಿದೆ.
ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರದಲ್ಲಿದೆ. ಸದ್ಯ ವಿಜಯ್ ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗ ಪ್ರವೇಶಿಸಿದ್ದಾರೆ. 'ಜನ ನಾಯಗನ್' ಚಿತ್ರವನ್ನು ತಮ್ಮ ಪೊಲಿಟಿಕಲ್ ಜರ್ನಿಗೆ ವೇದಿಕೆ ಮಾಡಿಕೊಳ್ಳುತ್ತಿದ್ದಾರೆ. ಡಿಎಂಕೆ ಪಕ್ಷಕ್ಕೆ ಪರೋಕ್ಷವಾಗಿ ತಿರುಗೇಟು ನೀಡುತ್ತಿದ್ದಾರೆ. ಇದೀಗ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ 'ಪರಾಶಕ್ತಿ' ಚಿತ್ರವನ್ನು ಬೇಕೆಂದೇ ಈ ವಾರ ಬಿಡುಗಡೆ ಮಾಡುತ್ತಿದ್ದಾರೆ. 'ಜನ ನಾಯಗನ್' ಚಿತ್ರಕ್ಕೆ ಪೆಟ್ಟು ಕೊಡುವ ಸಾಹಸಕ್ಕೆ ಕೈ ಹಾಕಿದ್ದಾರೆ.


Click it and Unblock the Notifications











