ಸೂರ್ಯ, ಜ್ಯೋತಿಕಾ ಕಪಲ್ ವರ್ಕೌಟ್ ನೋಡಿ ವಾಹ್ ಎಂದ ಫ್ಯಾನ್ಸ್
ಎಲ್ಲಾ ವಿಚಾರದಲ್ಲಿ ಪತಿಗೆ ಪತ್ನಿ ಜೊತೆಯಾಗಿ ನಿಂತರೆ ಅವರ ವೈವಾಹಿಕ ಜೀವನ ಅನ್ಯೋನ್ಯತೆಯಿಂದ ಕೂಡಿರುತ್ತದೆ. ಇಬ್ಬರ ನಡುವಿನ ಸಂಬಂಧ ಸದಾ ಪ್ರೀತಿಯಿಂದ ಕೂಡಿರಬೇಕು. ತಮಿಳು ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಪ್ರೀತಿಸಿ ಮದುವೆ ಆದವರು. ತಮ್ಮ ಬಾಂಡಿಂಗ್‌ನಿಂದ ದಂಪತಿ ಸದಾ ಎಲ್ಲರ ಗಮನ ಸೆಳೆಯುತ್ತಾರೆ. ಸದ್ಯ ಪತಿ, ಪತ್ನಿ ಇಬ್ಬರೂ ಜಿಮ್‌ನಲ್ಲಿ ಒಟ್ಟಿಗೆ ಕಸರತ್ತು ನಡೆಸುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.
ಫಿಟ್ನೆಸ್ ವಿಚಾರದಲ್ಲಿ ಸೂರ್ಯ ಬಹಳ ಕಟ್ಟುನಿಟ್ಟು. 'ಏಳಾಂ ಅರಿವು' ಚಿತ್ರದಲ್ಲಿ ಸಿಕ್ಸ್‌ಪ್ಯಾಕ್ ಮಾಡಿ ಅಭಿಮಾನಿಗಳ ಪ್ರೀತಿಯ ನಡಿಪ್ಪಿನ್ ನಾಯಗನ್ ಮೋಡಿ ಮಾಡಿದ್ದರು. ಆ ಬಳಿಕ ಕೂಡ ಹಲವು ಸಿನಿಮಾಗಳನ್ನು ಶರ್ಟ್ ಲೆಸ್ ಆಗಿ ದರ್ಶನ ಕೊಟ್ಟು ಅಭಿಮಾನಿಗಳ ಮನಗೆದ್ದಿದ್ದರು. ಡಯೆಟ್, ವರ್ಕೌಟ್ ವಿಚಾರದಲ್ಲಿ ಸೂರ್ಯ ಎಂದೂ ರಾಜಿ ಆಗುವುದಿಲ್ಲ. 'ಸುರರೈಪೊಟ್ರು', 'ಜೈಭೀಮ್' ಸಿನಿಮಾಗಳ ಬಳಿಕ ಸೂರ್ಯ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಹೊಸ ಹೊಸ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಒಂದ್ಕಾಲದಲ್ಲಿ ಬಹುಭಾಷಾ ತಾರೆಯಾಗಿ ಮಿಂಚಿದ ಜ್ಯೋತಿಕಾ ಮದುವೆ ಬಳಿಕ ಚಿತ್ರರಂಗದಿಂದ ಕೊಂಚ ಬಿಡುವು ಪಡೆದುಕೊಂಡಿದ್ದರು. ಮಕ್ಕಳು, ಫ್ಯಾಮಿಲಿ ಅಂತೆಲ್ಲಾ ಬಹಳ ಬ್ಯುಸಿಯಾಗಿಬಿಟ್ಟರು. ಬಳಿಕ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಈ ನಡುವೆ ದೇಹದ ತೂಕ ಹೆಚ್ಚಾಗಿತ್ತು. ಇದೀಗ ಮತ್ತೆ ತೂಕ ಇಳಿಸಿ ಸಿನಿಮಾಗಳಲ್ಲಿ ಮಿಂಚಲು ಜ್ಯೋತಿಕಾ ಮನಸ್ಸು ಮಾಡಿದಂತೆ ಕಾಣುತ್ತಿದೆ. ಈ ಹಿಂದೆ ಕೂಡ ವರ್ಕೌಟ್ ವೀಡಿಯೋಗಳನ್ನು ಆಕೆ ಶೇರ್ ಮಾಡಿದ್ದರು.
ಸದ್ಯ ಹೊಸ ವರ್ಕೌಟ್ ವೀಡಿಯೊದಲ್ಲಿ ಕಾಲಿವುಡ್ ಹಾಟ್ ಕಪಲ್ ಕಸರತ್ತು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಸದ್ಯ ವೀಡಿಯೋ ಸಖತ್ ವೈರಲ್ ಆಗುತ್ತಿದೆ. 'ಕಂಗುವ' ಚಿತ್ರದಲ್ಲಿ ಸೂರ್ಯ ನಟಿಸಿದ್ದಾರೆ. ಬಹಳ ಪವರ್‌ಫುಲ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅದಕ್ಕಾಗಿ ಮಾಂಸಖಂಡಗಳನ್ನು ಬಲಗೊಳಿಸಿ, ವಜ್ರದೇಹಿಯಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಜಿಮ್‌ನಲ್ಲಿ ಬಹಳ ಬೆವರಿಳಿಸಿದ್ದಾರೆ. ಪತ್ನಿ ಜ್ಯೋತಿಕಾ ಕೂಡ ಜೊತೆಯಾಗಿ ಜೋಶ್ ತುಂಬಿ ಕರಸತ್ತು ಮಾಡಿರುವುದನ್ನು ನೋಡಬಹುದು.
ಅಭಿಮಾನಿಗಳು ಸೂರ್ಯ- ಜ್ಯೋತಿಕಾ ವರ್ಕೌಟ್ ನೋಡಿ 'ವಾಹ್' ಎನ್ನುತ್ತಿದ್ದಾರೆ. 'ಪರ್ಫೆಕ್ಟ್ ಕಪಲ್ ಗೋಲ್' ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಡಬಲ್ ಸ್ವೆಟ್, ಡಬಲ್ ಫನ್' ಎಂದು ಬರೆದು ಜ್ಯೋತಿಕಾ ವೀಡಿಯೋ ಶೇರ್ ಮಾಡಿದ್ದಾರೆ. ಕಾರ್ಡಿಯೊ, ಟ್ರೆಂಡ್‌ಮಿಲ್ ಮೇಲೆ ನಡಿಗೆ, ಬ್ಯಾಟಲ್ ರೋಪ್, ಫುಶ್‌ಅಪ್ಸ್, ಸ್ಕಿಪ್ಪಿಂಗ್, ಮೌಂಟೇನ್ ಕ್ಲೈಂಬಿಂಗ್, ಕ್ರಂಚಸ್ ಹೀಗೆ ನಾನಾ ರೀತಿಯ ವರ್ಕೌಟ್ ಮಾಡಿದ್ದಾರೆ.
ಜ್ಯೋತಿಕಾ ಕೂಡ ಕೆಲ ಕಷ್ಟದ ವ್ಯಾಯಾಮಗಳನ್ನು ಮಾಡಿ ಹುಬ್ಬೇರಿಸಿದ್ದಾರೆ. ಅಭಿಮಾನಿಗಳು ನಿಮ್ಮಿಬ್ಬರ ಎನರ್ಜಿ ಸೂಪರ್ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. 'ಕಂಗುವ' ಬಳಿಕ ಸೂರ್ಯ 'ಸರ್‌ಫಿರಾ' ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಸುರರೈಪೋಟ್ರು' ಸಿನಿಮಾ ಕಟ್ಟಿಕೊಟ್ಟಿದ್ದ ಸುಧಾ ಕೊಂಗರ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ ಬಾಲಿವುಡ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇನ್ನು ಇತ್ತೀಚೆಗೆ ಜ್ಯೋತಿಕಾ ನಟಿಸಿದ ಬಾಲಿವುಡ್ ಸಿನಿಮಾ 'ಸೈತಾನ್' ಬಿಡುಗಡೆ ಆಗಿತ್ತು. ಮತ್ತೆರಡು ಹಿಂದಿ ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ.
ಪತಿ, ಪತ್ನಿ ಇಬ್ಬರೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವುದರಿಂದ ಮುಂಬೈನಲ್ಲಿ ಬಂಗಲೆ ಖರೀದಿಸಿ ವಾಸಿಸಲು ನಿರ್ಧರಿಸಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಭಾರೀ ಚರ್ಚೆ ಹುಟ್ಟುಹಾಕಿತ್ತು. ಚೆನ್ನೈ ಬಿಟ್ಟು ಸೂರ್ಯ- ಜ್ಯೋತಿಕಾ ಮುಂಬೈನಲ್ಲೇ ಸೆಟ್ಲ್ ಆಗ್ತಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಇಬ್ಬರೂ ಮಾತನಾಡುವ ಗೋಜಿಗೆ ಹೋಗಲಿಲ್ಲ.


Click it and Unblock the Notifications










