ಅಣ್ಣಾವ್ರ ಸರಳತೆಯನ್ನು ನಾನು ನಟ ಅಜಿತ್ ಅವರಲ್ಲಿ ಕಂಡೆ- ತಮಿಳು ನಿರ್ದೇಶಕನ ಹೇಳಿಕೆ ವೈರಲ್
ವರನಟ ಡಾ. ರಾಜ್‌ಕುಮಾರ್ ದೈಹಿಕವಾಗಿ ನಮ್ಮೊಡನೆ ಇಲ್ಲದೇ ಇದ್ದರೂ ತಮ್ಮ ಸಿನಿಮಾಗಳು, ಆದರ್ಶ ಗುಣಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಅಣ್ಣಾವ್ರ ಸರಳ, ಸಜ್ಜನ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಜನ ಮಾತನಾಡಿದ್ದಾರೆ. ನಟಸಾರ್ವಭೌಮನ ಗುಣಗಾನ ಮಾಡಿದ್ದಾರೆ. ಇದೀಗ ತಮಿಳು ನಿರ್ದೇಶಕ ಕೆ. ವಿ ಶರವಣನ್ ಹೇಳಿಕೆ ವೈರಲ್ ಆಗುತ್ತಿದೆ.
ಕೆ. ಬಾಲಚಂದರ್ ಗರಡಿಯಲ್ಲಿ ಪಳಗಿದ ನಿರ್ದೇಶಕ ಕೆ. ವಿ ಶರವಣನ್ ಬಳಿಕ ಸ್ವತಂತ್ರ ನಿರ್ದೇಶಕರಾಗಿ ಒಂದಷ್ಟು ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ನಿರ್ಮಾಪಕರಾಗಿಯೂ 3 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ವಿಕ್ರಮ್, ಅಜಿತ್, ಕಮಲ್ ಹಾಸನ್ ಸೇರಿ ಸ್ಟಾರ್ ನಟರನ್ನು ನಿರ್ದೇಶಿಸಿ ಗೆದ್ದಿದ್ದಾರೆ.

ಅಜಿತ್ ನಟನೆಯ ಹೊಸ ಚಿತ್ರಕ್ಕೆ ಬರಹಗಾರರಾಗಿ ಶರವಣನ್ ಕೆಲಸ ಮಾಡುತ್ತಿದ್ದಾರೆ. Swan Studios ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಶರವಣನ್ ಮಾತನಾಡಿದ್ದಾರೆ. ತಮ್ಮ ಸಿನಿಮಾ ಜರ್ನಿ, ಸ್ಟಾರ್ ನಟರ ಜೊತೆಗಿನ ಒಡನಾಟ ಹೀಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಜಿತ್ ತಮ್ಮ ನೆಚ್ಚಿನ ನಟ ಎಂದು ಮೆಚ್ಚಿಕೊಂಡಿದ್ದಾರೆ. ಅಜಿತ್ ಅವರನ್ನು ನೋಡಿದ್ರೆ, ನನಗೆ ಕನ್ನಡ ನಟ ಡಾ. ರಾಜ್‌ಕುಮಾರ್ ನೆನೆಪಾಗುತ್ತಾರೆ. ಅಷ್ಟು ಸರಳ, ಸಜ್ಜನ ವ್ಯಕ್ತಿತ್ವ ಎಂದು ವಿವರಿಸಿದ್ದಾರೆ.
ಡಾ. ರಾಜ್‌ಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತ್ತು. ಆಗ ಕೆ. ಬಾಲಚಂದರ್ ಜೊತೆ ನಾನು ಹೋಗಿ ಅಣ್ಣಾವ್ರವನ್ನು ಭೇಟಿ ಮಾಡಿದ್ದೆ. ಅಂದು ಅವರ ವ್ಯಕ್ತಿತ್ವ ಕಂಡು ಬೆರಗಾಗಿದ್ದೆ. ಅದನ್ನು ಈಗ ಅಜಿತ್ ಅವರಲ್ಲಿ ನೋಡುತ್ತಿದ್ದೇನೆ. ಅಷ್ಟೇ ಸೌಮ್ಯ, ಸರಳ ಸಜ್ಜನಿಕೆ ಅವರಲ್ಲಿದೆ ಎಂದು ಶರವಣನ್ ಹೇಳಿದ್ದಾರೆ.
ನಿರ್ದೇಶಕ ಶರವಣನ್ ಮಾತನಾಡಿ "ಡಾ. ರಾಜ್‌ಕುಮಾರ್ ಅವರಲ್ಲಿದ್ದ ಗುಣಗಳು ಅಜಿತ್ ಅವರಲ್ಲಿದೆ. ನಾನು ಡಾ. ರಾಜ್‌ಕುಮಾರ್ ಸರ್ ಅವರನ್ನು ನೋಡಿ ಬಹಳ ಪ್ರಭಾವಿತನಾಗಿದ್ದೆ. ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ ಲಭಿಸಿತ್ತು. ಕೆ. ಬಾಲಚಂದರ್ ಸರ್, ನಾನು, ಅವರ ಮಗಳು ಅಂದು ಅಣ್ಣಾವ್ರ ಭೇಟಿಗೆ ಹೋಗಿದ್ದೆವು. ನಾನು ಆಗ ಇನ್ನು ಸಹ ನಿರ್ದೇಶಕನಾಗಿದ್ದೆ. ಮನೆ ಒಳಗೆ ಹೋಗಿ ರಾಜ್‌ಕುಮಾರ್ ಸರ್ ಅವರನ್ನು ಭೇಟಿ ಮಾಡಿ ಮಾತನಾಡಿದೆವು. ನನ್ನ ಜೊತೆಗೂ ಬಹಳ ಸರಳವಾಗಿ ಮಾತನಾಡಿದ್ದರು. ಬಳಿಕ ಹೊರಗೆ ಬಂದೆವು. ಸರಿ ನೀನು ಬಾ ಎಂದು ಹೇಳಿ ಬಾಲಚಂದರ್ ಸರ್ ಮಗಳ ಜೊತೆ ಹೊರಟರು" ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.
ನಾನು ಅಲ್ಲಿಂದ ಗೇಟ್ ಬಳಿ ಇದ್ದ ಕಾರ್ ಹತ್ತಿರಕ್ಕೆ ಬಂದೆ. ಹಿಂದೆ ತಿರುಗಿ ನೋಡಿದ್ರೆ, ನನಗೆ ಬೈಬೈ ಹೇಳಿ ಬೀಳ್ಕೊಡಲು ಗೇಟ್ ಬಳಿ ಡಾ. ರಾಜ್‌ಕುಮಾರ್ ಸರ್ ನಿಂತಿದ್ರು. ನನಗೆ ಅಚ್ಚರಿಯಾಯಿತು, ನಾನು ಯಾರು, ಅವರ ಹೆಗ್ಗಳಿಕೆ ಏನು? ನನಗಾಗಿ ಬಂದ್ರು.. ಅತಿಥಿಗಳನ್ನು ಸತ್ಕರಿಸುವ ಅವರ ಗುಣದ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿ. ಈಗ ಅಜಿತ್ ಸರ್ ಬಳಿಕ ಅದೇ ಗುಣಗಳಿವೆ" ಎಂದು ಶರವಣನ್ ತಿಳಿಸಿದ್ದಾರೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾಗಳನ್ನು ಶರವಣನ್ ಮೆಚ್ಚಿಕೊಂಡಿದ್ದಾರೆ. 'ಕಾಂತಾರ' ಸರಣಿ ಸಿನಿಮಾಗಳ ಗುಣಗಾನ ಮಾಡಿದ್ದಾರೆ. ಪಾರ್ಟ್ 1 ನೋಡುವಾಗ ಎಷ್ಟು ರೋಚಕವಾಗಿತ್ತೋ ಅದೇ ರೀತಿ ಪಾರ್ಟ್-2 ಸಿನಿಮಾ ಮೂಡಿ ಬಂದಿತ್ತು. ಪ್ರೇಕ್ಷಕರನ್ನು ನಿರೀಕ್ಷೆಗೆ ತಕ್ಕಂತೆ ಬಹಳ ಕುತೂಹಲವಾಗಿ ಸಿನಿಮಾ ಕಟ್ಟಿಕೊಟ್ಟಿದ್ದರು. ಅಷ್ಟು ಗಂಭೀರವಾದ ಕಥೆಯಲ್ಲಿ ಅಲ್ಲಲ್ಲಿ ಕಾಮಿಡಿಯನ್ನು ಸೇರಿಸಿರುವ ರೀತಿ ಸೊಗಸಾಗಿದೆ. ಅಂತಹ ಸಿನಿಮಾಗಳನ್ನು ಮಾಡಬೇಕು ಎಂದು ಶರವಣನ್ ಹೇಳಿದ್ದಾರೆ.


Click it and Unblock the Notifications











