ಒಂಟಿತನ, ಖಾಲಿತನ ; 49ನೇ ವರ್ಷದಲ್ಲಿ ಎರಡನೇ ಮದುವೆಯಾಗ್ತಾರಾ ಮೀನಾ ? ಹೇಳಿದ್ದೇನು ಸ್ವಾತಿಮುತ್ತು ನಟಿ ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್‌ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್‌ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್‌ನಲ್ಲಿ ತಲುಪಿ ಬಿಡುತ್ತಾವೆ.
ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್‌ಗೆ ತಳ್ಳಿ ತನ್ನ ಕಂಬಂಧ ಬಾಹುಗಳಿಂದ ಜನರನ್ನು ಆಕ್ರಮಿಸಿಕೊಂಡಿದೆ. ಆದರೆ, ಈ ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಅರಿಯುವಷ್ಟರಲ್ಲಿ ಆ ಸುಳ್ಳು ಸುದ್ದಿ ಎಲ್ಲಿಂದ ಎಲ್ಲೆಲ್ಲಿಗೋ ತಲುಪಿ ಮತ್ಯಾವುದೋ ಪ್ರಮಾದವನ್ನು ಸೃಷ್ಟಿಸಿರುತ್ತೆ. ವೈರಲ್ ಆಗಿರುತ್ತೆ. ವೈರಲ್ ಆದ ಈ ಸುದ್ದಿಗಳನ್ನೇ ಜನ ನಿಜಾ ಎಂದುಕೊಳ್ಳುತ್ತಾರೆ. ಚರ್ಚೆ ಮಾಡಲು ಶುರುಮಾಡುತ್ತಾರೆ. ಮೀನಾ ವಿಚಾರದಲ್ಲಿ ಸದ್ಯ ಇದೇ ಆಗಿದೆ. ಮೀನಾ ಎರಡನೇ ಮದುವೆ ಕುರಿತು ಸುಳ್ಳು ಸುದ್ದಿಗಳು ಹಬ್ಬುತ್ತಲೇ ಇವೆ.

ಹೌದು, ಮೀನಾ.. ಹೆಚ್ಚು ಕಡಿಮೆ ಎರಡು ವರ್ಷ ದಕ್ಷಿಣ ಭಾರತ ಚಿತ್ರರಂಗದಲ್ಲಿ ಆಳ್ವಿಕೆ ನಡೆಸಿದ ನಾಯಕಿ. ಕೇವಲ ಕಾಲಿವುಡ್ ಮಾತ್ರ ಅಲ್ಲದೇ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಕೂಡ ಅಂದಕಾಲತ್ತಿಲ್ ತಮ್ಮ ಅಭಿನಯದಿಂದ ಎಲ್ಲರ ಹೃದಯಕ್ಕೆ ಕನ್ನ ಹಾಕಿದ್ದವರು ಮೀನಾ.
ಕನ್ನಡದಲ್ಲಿ ''ಪುಟ್ನಂಜ''.. ''ಮೊಮ್ಮಗ''.. ''ಚೆಲುವ''.. ''ಶ್ರೀ ಮಂಜುನಾಥ''.. ''ಗ್ರಾಮದೇವತೆ''.. ''ಸಿಂಹಾದ್ರಿಯ ಸಿಂಹ''.. ''ಸ್ವಾತಿ ಮುತ್ತು''.. ''ಮೈ ಆಟೋಗ್ರಾಫ್''.. ಹೀಗೆ ಹಲವಾರು ಚಿತ್ರಗಳಲ್ಲಿ ಮೀನಾ ಅಭಿನಯಿಸಿದ್ದರು. ಕನ್ನಡಿಗರ ಹೃದಯವನ್ನೂ ಗೆದ್ದಿದ್ದರು.
ಆ ನಂತರ 2009ರಲ್ಲಿ ವಿದ್ಯಾ ಸಾಗರ್ ಅವರ ಜೊತೆ ಮದುವೆಯಾಗಿ ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಮೀನಾ 2022ರಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರು. ಇಂಥಾ ಮೀನಾಗೆ ಈಗ 48ರ ಹರೆಯ. ಇವರಿಗೆ ಎದೆಯೆತ್ತರಕ್ಕೆ ಬೆಳೆದ ಮಗಳಿದ್ದಾಳೆ. ಹೀಗಿರುವಾಗ ಕಳೆದ ಎರಡು ವರ್ಷಗಳಿಂದ ಮೀನಾ ಎರಡನೇ ಮದುವೆ ಕುರಿತು ಹಲವರು ಚರ್ಚೆ ಮಾಡಲು ಶುರು ಮಾಡಿದ್ದಾರೆ. ಹಾಗಂತೆ-ಹೀಗಂತೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೀನಾ ಸ್ಪಷ್ಟೀಕರಣ ನೀಡಿದರೂ ಕೂಡ ಹಲವರಿಗೆ ಸಮಾಧಾನ ಆಗ್ತಿಲ್ಲ. ಮೀನಾ ಮಾತುಗಳನ್ನು ಹಲವರು ನಂಬ್ತಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಇಂದಿಗೂ ಈ ಕ್ಷಣಕ್ಕೂ ಕೂಡ ಮೀನಾ ಎರಡನೇ ಮದುವೆ ಕುರಿತು ಚರ್ಚೆಗಳಾಗುತ್ತಲೇ ಇವೆ. ಇದೆಲ್ಲವನ್ನೂ ಗಮನಿಸುತ್ತಿರುವ ಮೀನಾ ಇದೀಗ ಮತ್ತೊಮ್ಮೆ ತಮ್ಮ ಎರಡನೇ ಮದುವೆ ಕುರಿತು ಮಾತನಾಡಿದ್ದಾರೆ.

ಈ ಕುರಿತು ''ಗಲಾಟಾ'' ತಮಿಳು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೀನಾ ಇಂತಹ ವದಂತಿಗಳು ಯಾಕೆ ಹರಡುತ್ತವೆ, ಹೇಗೆ ಹರಡುತ್ತವೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನಿಜವಾಗಿಯೂ ಯಾರಾದರೂ ಇದ್ದಿದ್ದರೆ ತೊಂದರೆ ಇಲ್ಲ ಎಂದು ಹೇಳಿರುವ ಮೀನಾ ಯಾರು ಇಲ್ಲದಿದ್ದಾಗ, ಸುದ್ದಿಗಳಲ್ಲಿ ಸತ್ಯ ಇಲ್ಲದಿದ್ದಾಗ ಈ ತರಹದ ಅಪಪ್ರಚಾರ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಮಹಿಳೆ, ಒಂಟಿಯಾಗಿ ಬದುಕುತ್ತಿದ್ದೇನೆ, ಎಲ್ಲಕ್ಕಿಂತ ಮುಖ್ಯವಾಗಿ ನಾನು ಸೆಲೆಬ್ರಿಟಿ, ಹೀಗಾಗಿ ಕೆಲವರು ನನ್ನ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ ಎನ್ನುವುದು ನನ್ನ ಭಾವನೆ ಎಂದು ಹೇಳಿರಯವ ಮೀನಾ ಇದೆಲ್ಲದರಿಂದ ನನಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ನನ್ನ ಕುರಿತು ಹಬ್ಬುವ ಈ ಸುಳ್ಳು ಸುದ್ದಿಗಳಿಂದ ನನಗೆ ತುಂಬಾನೇ ಕಿರಿಕಿರಿ ಮತ್ತು ಹಿಂಸೆಯಾಗುತ್ತಿದೆ.. ನನ್ನ ಸಹನೆಯ ಕಟ್ಟೆ ಯಾವತ್ತು ಒಡೆಯುತ್ತೋ ಗೊತ್ತಿಲ್ಲ, ಸದ್ಯಕ್ಕೆ ನಾನು ಎಲ್ಲರನ್ನೂ ಸುಮ್ಮನೆ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ. ನನ್ನ ಮೌನ ನನ್ನ ದೌರ್ಬಲ್ಯವಲ್ಲ ಎಂದಿದ್ದಾರೆ.
ನಾನು ನೆಗೆಟಿವ್ ವಿಚಾರಗಳತ್ತ ಹೆಚ್ಚು ಗಮನ ಕೊಡಲ್ಲ ಎಂದು ಹೇಳಿರುವ ಮೀನಾ ನಾನು ತುಂಬಾನೇ ಪಾಸಿಟಿವ್ ಆದ ವ್ಯಕ್ತಿ, ನನಗೆ ಸಂತೋಷ ಮುಖ್ಯ ಎಂದು ಹೇಳಿದ್ದಾರೆ. ನನ್ನ ಅಮೂಲ್ಯವಾದ ಸಮಯ, ಆರೋಗ್ಯವನ್ನು ಪ್ರಯೋಜನಕ್ಕೆ ಬಾರದ ವಿಚಾರಗಳ ಕುರಿತು ಮಾತನಾಡಿ ಹಾಳು ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ ಎಂದಿದ್ದಾರೆ.
ಮುಂದುವರೆದು ಮದುವೆಯಾದ ನಂತರವೇ ನನ್ನ ಅಮ್ಮ ಎಷ್ಟು ಶಕ್ತಿಶಾಲಿ ಎಂದು ನನಗೆ ಅರ್ಥವಾಯಿತು ಎಂದು ಹೇಳಿರುವ ಮೀನಾ ತಾಯಿಯ ಪಾತ್ರಕ್ಕೂ, ನಿಜ ಜೀವನದಲ್ಲಿ ತಾಯಿಯಾಗುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ನನ್ನ ತಾಯಿ ನನ್ನನ್ನು ಸ್ನೇಹಿತರೊಂದಿಗೆ ಪಾರ್ಟಿಗಳಿಗೆ ಹೋಗಲು ಬಿಡುತ್ತಿರಲಿಲ್ಲ ಎಂದು ಹೇಳಿರುವ ಮೀನಾ, ಹೇಗೂ ನಾನು ಬರುವುದಿಲ್ಲ ಎನ್ನುವುದು ನನ್ನ ಸ್ನೇಹಿತರಿಗೂ ಕೂಡ ಗೊತ್ತಿರುತ್ತಿತ್ತು ಆದರೂ ಕೂಡ ಸುಮ್ಮನೆ ನಾಮಕಾ ವಾಸ್ತೆ ಅವರು ನನ್ನನ್ನೂ ಕರೆಯುತ್ತಿದ್ದರು ಎಂದು ಮೀನಾ ನೆನಪು ಮಾಡಿಕೊಂಡಿದ್ದಾರೆ.
ಇದೇ ಸಮಯದಲ್ಲಿ ನನಗೆ ಮತ್ತೊಂದು ಮದುವೆಯಾಗುವ ಯಾವ ಆಸಕ್ತಿ ಮತ್ತು ಆಸೆಯೂ ಇಲ್ಲ ಎಂದು ಹೇಳಿರುವ ಮೀನಾ ನನ್ನ ಮದುವೆಯ ವಿಚಾರ ಮರೆತು ನನ್ನ ಚಿತ್ರಗಳ ಬಗ್ಗೆ ನನ್ನ ಸಾಧನೆಗಳ ಬಗ್ಗೆ ಮಾತನಾಡಿ ಎಂದು ಕೂಡ ಇದೇ ಸಮಯದಲ್ಲಿ ಹೇಳಿದ್ದಾರೆ. ಎರಡನೇ ಮದುವೆಯ ಕುರಿತ ಸುದ್ದಿಗಳಿಗೆ ಈ ಮೂಲಕ ತೆರೆ ಎಳೆಯುವ ಪ್ರಯತ್ನವನ್ನು ಮತ್ತೊಮ್ಮೆ ಮಾಡಿದ್ದಾರೆ.


Click it and Unblock the Notifications











