ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್‌ಗೆ ಕೋರ್ಟ್ ನೋಟಿಸ್
ಪ್ರೀತಿಸಿ ಮದುವೆ ಆಗಿದ್ದ ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಡಿವೋರ್ಸ್ ಪಡೆಯಲು ಮುಂದಾಗಿರುವುದು ಗೊತ್ತೇಯಿದೆ. ಕಳೆದೆರಡು ವರ್ಷಗಳಿಂದ ಇಬ್ಬರೂ ದೂರಾಗಿ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಡಿವೋರ್ಸ್ ಕೋರಿ ಚೆನ್ನೈ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು.
2022, ಜನವರಿ 17ರಂದು ಇಬ್ಬರೂ ಬೇರಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೇ ಏಪ್ರಿಲ್ 8ರಂದು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ - ಸೆಕ್ಷನ್ 13 ಬಿ ಅಡಿಯಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 7ರಂದು ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಈ ಸಂಬಂಧ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ.

ಧನುಷ್- ಐಶ್ವರ್ಯ ದೂರಾಗುವುದು ಬೇಡ ಎಂದು ಅಭಿಮಾನಿಗಳು, ಆಪ್ತರು ಬಯಸಿದ್ದರು. ಖುದ್ದು ರಜನಿಕಾಂತ್ ಇಬ್ಬರ ಜೊತೆ ಮಾತನಾಡಿ ಡಿವೋರ್ಸ್ ಪಡೆಯದಂತೆ ಮನವೊಲಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಪರಿಸ್ಥಿತಿ ಕೈ ಮೀರಿದ್ದು ಇಬ್ಬರೂ ತಮ್ಮ ನಿರ್ಧಾರ ಬದಲಿಸದಿರಲು ತೀರ್ಮಾನಿಸಿದ್ದಾರೆ. ಸದ್ಯದಲ್ಲೇ ಇವರ ವಿಚ್ಛೇದನ ಅಂತಿಮಗೊಳ್ಳಲಿದೆ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಸದ್ಯ ಧನುಷ್ ತಮಿಳಿನ ಸ್ಟಾರ್ ಹೀರೊ ಆಗಿ ಕಣ್ಮುಂದೆ ಇದ್ದಾರೆ. ಆದರೆ ಆರಂಭದಲ್ಲಿ ರಜನಿಕಾಂತ್ ಅಳಿಯ ಅಂತ್ಲೇ ಹೆಚ್ಚು ಜನಪ್ರಿಯರಾಗಿದ್ದರು. ಧನುಷ್ ನಟನೆಯ 'ಕಾದಲ್ ಕೊಂಡೇನ್' ಸಿನಿಮಾ ನೋಡಿ ಐಶ್ವರ್ಯ ಮೆಚ್ಚಿಕೊಂಡಿದ್ದರು. ಆ ಸಮಯದಲ್ಲೇ ಇಬ್ಬರ ನಡುವೆ ಪರಿಚಯ ಶುರುವಾಗಿತ್ತು. ಬಳಿಕ ಅದು ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿತ್ತು.

ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಶುರುವಾಗಿತ್ತು. ಈ ವಿಚಾರ ರಜನಿಕಾಂತ್‌ಗೂ ಗೊತ್ತಾಗಿ ಮಗಳ ಮದುವೆ ಮಾಡಲು ಮುಂದಾಗಿದ್ದರು. ಆದ ಧನುಷ್ ವಯಸ್ಸು 21 ವರ್ಷವಾಗಿದ್ದರೆ ಐಶ್ವರ್ಯ ವಯಸ್ಸು 23 ವರ್ಷ. ಧನುಷ್ ಸಹೋದರಿ ಹಾಗೂ ಐಶ್ವರ್ಯ ಸ್ನೇಹಿತರಾಗಿದ್ದರು. ಹಾಗಾಗಿ ಧನುಷ್ ಜೊತೆ ಪರಿಚಯ ಇತ್ತು. ನಾವೇನು ಪ್ರೀತಿ ಗೀತಿ ಅಂತ ಸುತ್ತಾಡಿಲ್ಲ. ನಮ್ಮದು ಅರೇಂಜ್ಡ್ ಮ್ಯಾರೇಜ್ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಇಬ್ಬರೂ ಡಿವೋರ್ಸ್ ಪಡೆದು ದೂರಾಗಲು ನಿರ್ಧರಿಸಿದ ಬಳಿಕವೂ ಮಕ್ಕಳ ಶಾಲಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇದನ್ನು ನೋಡಿ ಮತ್ತೆ ಇಬ್ಬರು ಒಂದಾಗುತ್ತಾರೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಡಿವೋರ್ಸ್‌ಗೆ ಪಟ್ಟು ಹಿಡಿದು ಕೋರ್ಟ್ ಅನ್ನು ಆಶ್ರಯಿಸಿದ್ದಾರೆ.
ಮದುವೆ ಬಳಿಕ ಐಶ್ವರ್ಯ ನಿರ್ದೇಶನದ '3' ಚಿತ್ರದಲ್ಲಿ ಧನುಷ್ ನಟಿಸಿದ್ದರು. ಪತಿ ಚಿತ್ರರಂಗದಲ್ಲಿ ಬೆಳೆಯಲು ಪತ್ನಿ ಬೆಂಬಲವಾಗಿ ನಿಂತಿದ್ದರು. 18 ವರ್ಷಗಳ ಕಾಲ ಸಂತೋಷವಾಗಿ ಒಟ್ಟಿಗೆ ಜೀವನ ಸಾಗಿಸಿದ ದಂಪತಿ ಇದೀಗ ದೂರಾಗಲು ಮುಂದಾಗಿದ್ದಾರೆ. ಧನುಷ್ ಜೊತೆ ಕೆಲ ನಟಿಯರ ಹೆಸರುಗಳು ತಳುಕು ಹಾಕಿಕೊಂಡು ಸಾಕಷ್ಟು ಚರ್ಚೆ ನಡೀತು. ಆಗ ಕೂಡ ಐಶ್ವರ್ಯ ಸೈಲೆಂಟ್ ಆಗಿದ್ದರು. ಆದರೆ ಈಗ ಇಂತಹ ನಿರ್ಧಾರಕ್ಕೆ ಕಾರಣ ಏನು ಎನ್ನುವುದು ಗೊತ್ತಿಲ್ಲ.
ತಾವಿಬ್ಬರು ದೂರಾಗುತ್ತಿರುವ ಬಗ್ಗೆ ಧನುಷ್ "18 ವರ್ಷಗಳ ಕಾಲ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಹಾಗೂ ಪರಸ್ಪರ ಹಿತೈಷಿಗಳಾಗಿ ಬಾಳ್ವೆ ನಡೆಸಿದ್ದೆವು. ಈ ಪಯಣ ನಮ್ಮಿಬ್ಬರ ಪ್ರಗತಿ, ತಿಳಿವಳಿಕೆ, ಹೊಂದಾಣಿಕೆ ಮತ್ತು ಪರಸ್ಪರ ಸ್ವೀಕಾರದ ಹಾದಿಯಾಗಿತ್ತು. ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಹಾಗೂ ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯಲಿದೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಅಗತ್ಯವಿರುವ ಖಾಸಗಿತನ ನೀಡಿ. ಓಂ ನಮಶಿವಾಯ" ಎಂದು ಬರೆದುಕೊಂಡಿದ್ದರು.


Click it and Unblock the Notifications











