ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟ ಜನಪ್ರಿಯ ನಟ; ಪಾದಯಾತ್ರೆಗೆ ಭರದ ಸಿದ್ಧತೆ!
ಸಿನಿಮಾ ಕಲಾವಿದರು ರಾಜಕೀಯರಂಗಕ್ಕೆ ಬಂದು ಗೆಲ್ಲುವುದು ಅಷ್ಟು ಸುಲಭವಲ್ಲ. ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಮತಗಳಾಗಿ ಪರಿವರ್ತನೆ ಆಗುವುದು ಅಷ್ಟು ಸುಲಭವೂ ಅಲ್ಲ. ಅದೇ ಕಾರಣಕ್ಕೆ ಸಾಕಷ್ಟು ಜನಪ್ರಿಯ ನಟರು ಪೊಲಿಟಿಕಲ್ ಎಂಟ್ರಿ ಹಿಂದೇಟು ಹಾಕುತ್ತಿದ್ದಾರೆ. ಮೊದಲಿಗೆ ಸ್ವಂತ ಪಕ್ಷ ಕಟ್ಟಿ ಜನಸೇವೆ ಮುಂದಾಗಿದ್ದ ರಜನಿಕಾಂತ್ ನಂತರ ಸೈಲೆಂಟ್ ಆಗಿದ್ದರು.
ತೆಲುಗು ನಟ ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಕಟ್ಟಿ ಹೀನಾಯವಾಗಿ ಸೋಲುಂಡರು. ಬಳಿಕ ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದರು. ಬಳಿಕ ರಾಜಕೀಯ ಬೇಡ ಎಂದು ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿಬಿಟ್ಟರು. ಪವನ್ ಕಲ್ಯಾಣ್ ಸಹ ಮೊದಲ ಬಾರಿ ಸ್ಪರ್ಧಿಸಿದ್ದಾಗ ಸೋತು ಸುಣ್ಣವಾಗಿದ್ದರು. ಪಕ್ಷ ಕಟ್ಟಿ 10 ವರ್ಷಗಳ ಬಳಿಕ ಗೆದ್ದು ಆಂಧ್ರ ಡಿಸಿಎಂ ಆಗಿದ್ದಾರೆ.

ಕಮಲ್ ಹಾಸನ್ ಕೂಡ 'ಮಕ್ಕಳ್ ನೀದಿಮಯ್ಯಂ' ಪಕ್ಷ ಕಟ್ಟಿ ಅಷ್ಟೇನು ಸಾಧಿಸಲಿಲ್ಲ. ಸದ್ಯ ತಮಿಳು ನಟ ದಳಪತಿ ವಿಜಯ್ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಈಗಾಗಲೇ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಆದರೆ ಸಕ್ರಿಯ ರಾಜಕಾರಣಕ್ಕೆ ಜಿಗಿದಿಲ್ಲ. ತೆರೆಮರೆಯಲ್ಲಿ ಜನರನ್ನು ತಲುಪುವ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ. ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಲ್ಲಿ 10ನೇ ತರಗತಿ ಮತ್ತು ಸೆಕೆಂಡ್ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರ್ತಿಸಿ ಸನ್ಮಾನಿಸುವ ಕೆಲಸ ಮಾಡುತ್ತಿದ್ದಾರೆ.
ತಮ್ಮ ಅಭಿಮಾನಿ ಸಂಘವನ್ನು ಭಧ್ರಗೊಳಿಸಿ ಆ ಮೂಲ ಸಮಾಜಮುಖಿ ಕೆಲಸಗಳನ್ನು ಆರಂಭಿಸಿದ್ದಾರೆ. 'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ಬೇರುಮಟ್ಟದಿಂದ ಕಟ್ಟಲು ಮನಸ್ಸು ಮಾಡಿದ್ದಾರೆ. 2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆ ವೇಳೆಗೆ ಪಕ್ಷವನ್ನು ಕಟ್ಟಿ ಬೆಳೆಸಲು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. ಅದಕ್ಕೂ ಮುನ್ನ ಒಂದೆರಡು ಸಿನಿಮಾಗಳಲ್ಲಿ ನಟಿಸಿ ಬಳಿಕ ಚಿತ್ರರಂಗಕ್ಕೆ ದಳಪತಿ ಗುಡ್ ಬೈ ಹೇಳುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.
ತಮಿಳುನಾಡು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದಳಪತಿ ವಿಜಯ್ ರಾಜ್ಯಾದ್ಯಂತ ಪಾದಯಾತ್ರೆ ಮಾಡಲು ಸಜ್ಜಾಗುತ್ತಿದ್ದಾರೆ ಎನ್ನಲಾಗ್ತಿದೆ. ಅದಕ್ಕಾಗೀ ಈಗಾಗಲೇ ನೀಲಿನಕ್ಷೆ ಸಿದ್ಧಪಡಿಸುವ ಕೆಲಸ ಆರಂಭಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಕಾಲಿವುಡ್‌ನಲ್ಲಿ ರಜನಿಕಾಂತ್ ಬಳಿಕ ಆ ಮಟ್ಟಿಗಿನ ಕ್ರೇಜ್ ಸೃಷ್ಟಿಸಿಕೊಂಡಿರುವ ನಟ ವಿಜಯ್. ಈಗಾಗಲೇ ರಾಜಕೀಯ ಪಕ್ಷದ ಚಿಹ್ನೆ, ಬಾವುಟಕ್ಕೆ ಅನುಮತಿ ಕೋರಿ ಚುನಾವಣೆ ಆಯೋಗದ ಮೆಟ್ಟಿಲೇರಿದ್ದಾರೆ. ಆಯೋಗದಿಂದ ಕ್ಲಿಯರೆನ್ಸ್ ಸಿಕ್ಕಿದ ಕೂಡಲೇ ವಿಜಯ್ ಅಖಾಡಕ್ಕೆ ಇಳಿಯುತ್ತಾರೆ ಎನ್ನಲಾಗ್ತಿದೆ.

ಈ ವರ್ಷ ಸೆಪ್ಟೆಂಬರ್, ನವೆಂಬರ್ ವೇಳೆಗೆ ವಿಜಯ್ ಪೊಲಿಟಿಕಲ್ ಜರ್ನಿ ಶುರುವಾಗುತ್ತದೆ ಎನ್ನುವ ಚರ್ಚೆ ನಡೆಯುತ್ತಿದೆ. ತಿರುಚ್ಚಿಯಲ್ಲಿ ಮೊದಲ ಸಮಾವೇಶ ನಡೆಸಿ ದಳಪತಿ ಮುಂದುವರೆಯುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ವಿಜಯ್ ಯಾವುದಾದರೂ ಪಕ್ಷವನ್ನು ಬೆಂಬಲಿಸುತ್ತಾರಾ? ಇಲ್ಲ ಏಕಾಂಗಿಯಾಗಿ ಚುನಾವಣೆ ಅಖಾಡಕ್ಕೆ ಇಳಿಯುತ್ತಾರಾ? ಎನ್ನುವ ಕುತೂಹಲವೂ ಅಭಿಮಾನಿಗಳಲ್ಲಿದೆ.
ಮುಖ್ಯವಾಗಿ ರಾಜ್ಯದ 100 ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಲು ವಿಜಯ್ ತೀರ್ಮಾನಿಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಪಾದಯಾತ್ರೆ ವೇಳೆ ವಿಜಯ್ ತಮಿಳುನಾಡಿನ ಭ್ರಷ್ಟಾಚಾರ, ಜಾತಿ-ಧರ್ಮ ವಿಭಜನೆ ಮತ್ತು ಭ್ರಷ್ಟತನದಂತಹ ಸಮಸ್ಯೆಗಳ ವಿರುದ್ಧ ಹೋರಾಡುವ ಅಜೆಂಡಾದೊಂದಿಗೆ ಜನರ ಬಳಿಗೆ ಹೋಗಲಿದ್ದಾರೆ. ಈ ಹಿಂದೆ ಎನ್‌ಟಿಆರ್, ವೈ.ಎಸ್ ರಾಜಶೇಖರ್ ರೆಡ್ಡಿ ರೀತಿಯ ನಾಯಕರು ಪಾದಯಾತ್ರೆ ಮಾಡಿ ಸಿಎಂ ಪಟ್ಟ ಅಲಂಕರಿಸಿದ್ದರು.
ಇನ್ನು ವೆಂಕಟ್ ಪ್ರಭು ನಿರ್ದೇಶನದ 'ಗೋಟ್'(GOAT) ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ. ದ್ವಿಪಾತ್ರ ನಟಿಸಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಸೆಪ್ಟೆಂಬರ್ 5ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಮುಂದೆ ಯಾವ ಚಿತ್ರದಲ್ಲಿ ನಟಿಸುತ್ತಾರೆ? ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.


Click it and Unblock the Notifications











