ನಾನು ಈ ಜನ್ಮದಲ್ಲಿಯೇ 'ಮದ್ವೆ'ಯಾಗಲ್ಲ ಏನೀವಾಗ - ಶ್ರುತಿ ಹಾಸನ್...!
ವಿಪರೀತವಾಗಿ ರೇಗಿಸಿ, ತೆಪ್ಪಗಿದ್ದವರನ್ನು ಪದೇ ಪದೇ ಕೆರೆದರೆ ಎಂತವರಿಗಾದರೂ ಪಿತ್ತ ನೆತ್ತಿಗೇರದೇ ಇರುವುದಿಲ್ಲ. ಕಮಲ್ ಹಾಸನ್ ಅವರ ಮುದ್ದಿನ ಮಗಳು ಶ್ರುತಿ ಹಾಸನ್ ವಿಚಾರದಲ್ಲೂ ಆಗಿದ್ದು ಇದೇ.
ಹೌದು, ನಿಮಗೆ ಗೊತ್ತು.. ಶ್ರುತಿ ಹಾಸನ್ ಸದ್ಯಕ್ಕೆ ವಿರಹ ವೇದನೆಯಲ್ಲಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಶಾಂತನು ಹಜಾರಿಕಾ ಅವರಿಂದ ದೂರವಾಗಿದ್ದಾರೆ. ಹೀಗಾಗಿ ಅವರದ್ದೇ ಆದ ಆತಂಕ.. ಭಾವನಾತ್ಮಕ ತಾಕಲಾಟಕ್ಕೆ ಶ್ರುತಿ ಹಾಸನ್ ಸಿಲುಕಿದ್ದಾರೆ. ಆದರೆ ಇವರ ಈ ಕಷ್ಟವನ್ನು ಅರ್ಥ ಮಾಡಿಕೊಳ್ಳದ ಅನೇಕರು, ಶ್ರುತಿ ಹಾಸನ್ ಅವರ ಕುರಿತು ಕಿಂಡಲ್ ಮಾತುಗಳನ್ನಾಡುತ್ತಿದ್ದಾರೆ. ಹೋದಲ್ಲಿ..ಬಂದಲ್ಲಿ.. ಮದುವೆಯ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ. ಇದೆಲ್ಲದರಿಂದ ಬೇಸತ್ತು ನಿರಾಳವಾಗಲು ಸಾಮಾಜಿಕ ಜಾಲತಾಣದ ಬಾಗಿಲು ತೆರೆದು ಬಂಧರೆ ಅಲ್ಲಿಯೂ ಕೂಡ ಮದುವೆಯ ಬಗ್ಗೆಯೇ ಪ್ರಶ್ನೆ ಎದುರಾಗುತ್ತಿದೆ. ಹೀಗಾಗಿ ರೋಸಿ ಹೋದ ಶ್ರುತಿ ಹಾಸನ್, ನಾನು ಈ ಜನ್ಮದಲ್ಲಿಯೇ ಮದ್ವೆಯಾಗಲ್ಲ ಏನೀವಾಗ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.

ಹೌದು, ಅಸಲಿಗೆ ಶ್ರುತಿ ಹಾಸನ್.. ಹೈದ್ರಾಬಾದ್‌ಗೆ ತೆರಳುತ್ತಿದ್ದರು. ಈ ಸಮಯದಲ್ಲಿ ವಿಮಾನ ನಿಲ್ದಾಣದಿಂದ ತಮ್ಮ ಅಭಿಮಾನಿಗಳ ಜೊತೆ ಇತ್ತೀಚೆಗೆ ಪ್ರಶ್ನೋತ್ತರ ಕಾರ್ಯಕ್ರಮವನ್ನು ಶ್ರುತಿ ಹಾಸನ್ ಹಮ್ಮಿಕೊಂಡಿದ್ದರು. ತಮ್ಮ ಸಿನಿಮಾ ಜೀವನದ ಬಗ್ಗೆ ಕುರಿತು ಪ್ರಶ್ನೆಗಳನ್ನು ನಿರೀಕ್ಷೆ ಮಾಡಿದ್ದರು. ಆದರೆ, ನಮ್ಮ ನಡುವೆ ಇರುವ ಕೆಲವರು ಹೆಂಗದ್ರೆ ಅವರು ಮದುವೆಯಾಗದೇ ಇದ್ದರೂ ಚಿಂತೆ ಇಲ್ಲ, ಮದುವೆ ವಯಸ್ಸು ತುಂಬಿದ್ರೆ ಸಾಕು, ಬೇರೆಯವರ ಮದುವೆ ಚಿಂತೆ ಮಾಡಲು ಶುರು ಮಾಡುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಶ್ರುತಿ ಹಾಸನ್ ಅವರಿಗೆ ಅಭಿಮಾನಿಯೊಬ್ಬರು ನಿಮ್ಮ ಮದ್ವೆ ಯಾವಾಗ ಮೇಡಂ ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಿಟ್ಟಾದ ಶ್ರುತಿ ಹಾಸನ್ ನಾನು ಮದುವೆಯಾಗಲ್ಲ ಎಂದಿದ್ದಾರೆ. ಇನ್ನೂ ಮತ್ತೊಬ್ಬ ಅಭಿಮಾನಿ ನೀವು ಯಾವ ರೀತಿಯ ವ್ಯಕ್ತಿಯನ್ನು ಮದುವೆಯಾಗುತ್ತೀರಿ..? ಎಂದು ಕೇಳಿದ್ದಾರೆ. ಇದಕ್ಕೆ ಇದು 2024..ಈ ಕಾಲದಲ್ಲಿ ಹುಡುಗಿಯರಿಗೆ ಇಂತಹ ಸಿಲ್ಲಿ ಪ್ರಶ್ನೆಗಳನ್ನೆಲ್ಲ ಕೇಳಬೇಡಿ ಎಂಬ ಉತ್ತರವನ್ನು ಕೊಟ್ಟಿದ್ದಾರೆ.
ಸದ್ಯಕ್ಕೆ ಶ್ರುತಿ ಹಾಸನ್ ಅವರ ಈ ರಿಪ್ಲೈ ಗೂಗಲ್‌ನಲ್ಲಿ ಸದ್ದು ಮಾಡುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಶ್ರುತಿ ಹಾಸನ್ ಮದುವೆ ವಿಚಾರ ಮತ್ತೊಮ್ಮೆ ಚರ್ಚೆಗೀಡಾಗಿದೆ. ಕೆಲವರು ಮದುವೆ ಶ್ರುತಿ ಹಾಸನ್ ಅವರ ವ್ಯೆಯಕ್ತಿಕ ನಿರ್ಧಾರ, ಸೆಲೆಬ್ರಿಟಿ ಅಂದ ಮಾತ್ರಕ್ಕೆ ಹೀಗೆಲ್ಲ ಕೆಣಕಬಾರದು ಎಂದರೆ, ಇನ್ನೂ ಕೆಲವರು ಅದರಲ್ಲಿ ತಪ್ಪೇನಿದೆ. ತಮ್ಮ ನೆಚ್ಚಿನ ನಾಯಕಿಯ ಕುರಿತು ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇರುತ್ತೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಕ್ಕೆಲ್ಲ ಕೋಪ ಮಾಡ್ಕೊಂಡ್ರೇ ಹೇಗೆ.? ಎಂಬ ಪ್ರಶ್ನೆಯನ್ನೂ ಕೇಳುತ್ತಿದ್ಧಾರೆ.

ಉಳಿದಂತೆ ಶ್ರುತಿ ಹಾಸನ್ ಸಲಾರ್ ಚಿತ್ರದ ಮುಂದುವರೆದ ಭಾಗದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಡಕಾಯಿತ್, ಚೆನ್ನೈ ಸ್ಟೋರಿ ಸಿನಿಮಾದಲ್ಲಿಯೂ ಕೂಡ ಅಭಿನಯಿಸುತ್ತಿದ್ಧಾರೆ. ಇನ್ನೂ ಯಶ್ ಅಭಿನಯದ ಟಾಕ್ಸಿಕ್ ಚಿತ್ರಕ್ಕೆ ಗಾಯಕಿಯಾಗಿ ಕೆಲಸ ಮಾಡಿರುವ ಶ್ರುತಿ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿಯೂ ಇದೆ.


Click it and Unblock the Notifications











