ಕೇವಲ ₹9 ಕೋಟಿ ಬಜೆಟ್ ಸಿನಿಮಾ; 35 ದಿನಕ್ಕೆ ₹80 ಕೋಟಿ ಕಲೆಕ್ಷನ್; ಓಟಿಟಿ ಸ್ಟ್ರೀಮಿಂಗ್ ಯಾವಾಗ?
ದೊಡ್ಡ ಸಿನಿಮಾಗಳು ಮಾತ್ರವಲ್ಲ. ಕೆಲವೊಮ್ಮೆ ಯಾವುದೇ ನಿರೀಕ್ಷೆ ಇಲ್ಲದೇ ತೆರೆಗೆ ಬರುವ ಸಿನಿಮಾಗಳು ಬಾಕ್ಸಾಫೀಸ್ ಕೊಳ್ಳೆ ಹೊಡೆದುಬಿಡುತ್ತವೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಕಣ್ಣಮುಂದಿದೆ. ಕಳೆದ ವರ್ಷ ಕನ್ನಡದ 'ಸು ಫ್ರಮ್ ಸೋ' ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರದಿದ್ದು ಗೊತ್ತೇಯಿದೆ.
ಇದೀಗ ಮಹಿಳಾ ಪ್ರಧಾನ ಸಿನಿಮಾವೊಂದು ಇದೇ ರೀತಿ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 5ನೇ ವಾರವೂ ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಕೇವಲ 9 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಈವರೆಗೆ 80 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಹಳ್ಳಿ ಸೊಗಡಿನ ಸಿಂಪಲ್ ಕಥೆಯ ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಿದೆ.

ಸಿನಿಮಾಗಳು ಸ್ಟಾರ್‌ಕಾಸ್ಟ್, ಬಜೆಟ್ ಅಥವಾ ಪ್ರಚಾರದಿಂದ ಸದ್ದು ಮಾಡುವುದಲ್ಲ. ಕಂಟೆಂಟ್, ಸ್ಕ್ರೀನ್‌ಪ್ಲೇ, ಮೆಸೇಜ್, ಕಲಾವಿದರ ಅಭಿನಯದಿಂದ ಗಮನ ಸೆಳೆಯಬೇಕು. ಅಂತಾದೊಂದು ಮ್ಯಾಜಿಕ್ ತಮಿಳಿನ 'ಥಾಯ್ ಕಿಳವಿ' ಸಿನಿಮಾ ಮಾಡಿ ತೋರಿಸಿದೆ. ರಾಧಿಕಾ ಶರತ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ವರ್ಷದ ಕಾಲಿವುಡ್ ಮೊದಲ ಹಿಟ್ ಸಿನಿಮಾ ಪಟ್ಟಿ ಸೇರಿದೆ. ನಟ ಶಿವಕಾರ್ತಿಕೇಯನ್ ಸಿನಿಮಾ ನಿರ್ಮಾಣ ಮಾಡಿ ಗೆದ್ದಿದ್ದಾರೆ.
5ನೇ ವಾರವೂ ಸಿನಿಮಾ 150 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡದ ಸಂಭ್ರಮಕ್ಕೆ ಕಾರಣವಾಗಿದೆ. ಒಳ್ಳೆ ಸಿನಿಮಾ ಬಂದರೆ ಜನ ಕಂಡಿತ ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವುದನ್ನು 'ಥಾಯ್ ಕಿಳವಿ' ಸಿನಿಮಾ ಮತ್ತೊಮ್ಮೆ ಸಾಬೀತು ಮಾಡಿದೆ. ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಫಿಲ್ಮ್ ಮೇಕರ್ಸ್ ನಮ್ಮ ಮಣ್ಣಿನ ಕಥೆಗಳನ್ನು ಸಿನಿಮಾ ಮಾಡುವುದರಲ್ಲಿ ಹಿಂದೆ ಬಿದ್ದಿದ್ದಾರೆ. ನಮ್ಮ ನಡುವೆಯೇ ಸಾಕಷ್ಟು ಕಥೆಗಳಿವೆ. ಅದನ್ನು ತೆರೆಗೆ ತಂದರೆ ಜನ ಒಪ್ಪುತ್ತಾರೆ ಎನ್ನುವುದು ಸಿನಿಮಾ ಗೆಲುವಿನಿಂದ ಗೊತ್ತಾಗುತ್ತಿದೆ.
ಹಳ್ಳಿಯೊಂದರ ಗಟ್ಟಿಗಿತ್ತಿ ಮುದುಕಿ ಪವುನುತಾಯಿ(ರಾಧಿಕಾ ಕುಮಾರಸ್ವಾಮಿ). ಬಡ್ಡಿ ವ್ಯವಹಾರ ನಡೆಸುತ್ತಾ ಥೇಟ್ ರೌಡಿ ರೀತಿ ದರ್ಬಾರ್ ನಡೆಸುತ್ತಿರುತ್ತಾಳೆ. ಊರಿನವರಿಗೆಲ್ಲಾ ಆಕೆಯನ್ನು ಕಂಡರೆ ಭಯ.. ಆಕೆಗೆ ಏನಾದರೂ ಕೇಡಾಗಬಾರದಾ? ಎಂದು ಶಾಪ ಹಾಕುತ್ತಿರುತ್ತಾರೆ. ಇದ್ದಕ್ಕಿದಂತೆ ಆಕೆಗೆ ಪಾರ್ಶ್ವವಾಯು ತಗುಲಿ ಹಾಸಿಗೆ ಹಿಡಿಯುತ್ತಾಳೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಸಿನಿಮಾ ಕಥೆ.
ತಾಯಿ ಕೂಡಿಟ್ಟ ಗಂಟಿಗೆ ಆಸೆ ಬೀಳುವ ಮಕ್ಕಳು, ಸೊಸೆಯಂದಿರು ಆಕೆಯನ್ನು ಬದುಕಿಸಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡ್ತಾರೆ. ಮುಂದೆ ಏನಾಗುತ್ತದೆ ಎನ್ನುವುದನ್ನು ತೆರೆಮೇಲೆ ನೋಡಬೇಕು. ಶಿವಕುಮಾರ್ ಮುರುಗೇಶನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಗೆದ್ದಿದ್ದಾರೆ. ಎಜಿಎಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿ ಸಕ್ಸಸ್ ಕಂಡಿದೆ.
ಪಾತ್ರಕ್ಕಾಗಿ ಫಾಸ್ಥೆಟಿಕ್ ಮೇಕಪ್ ಹಾಕಿಕೊಂಡು ರಾಧಿಕಾ ಶರತ್‌ಕುಮಾರ್ ನಟಿಸಿದ್ದಾರೆ. ಆಕೆಯ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮಹಿಳಾ ಸಬಲೀಕರಣ, ಮಹಿಳಾ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಚಿತ್ರದಲ್ಲಿ ಚರ್ಚಿಸಿರುವುದು ಮಹಿಳಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಅದೇ ಕಾರಣಕ್ಕೆ ಫ್ಯಾಮಿಲಿ ಸಮೇತ ಪ್ರೇಕ್ಷಕರು ಸಿನಿಮಾ ನೋಡಿ ಗೆಲ್ಲಿಸಿದ್ದಾರೆ.
ಜಿಯೋ ಹಾಟ್‌ಸ್ಟರ್‌ಗೆ 'ಥಾಯ್ ಕಿಳವಿ' ಚಿತ್ರದ ಓಟಿಟಿ ರೈಟ್ಸ್ ಸೇಲ್ ಆಗಿದೆ. ಇತ್ತೀಚೆಗೆ ಸಿನಿಮಾ ತೆರೆಕಂಡು 2 ತಿಂಗಳ ಬಳಿಕ ಓಟಿಟಿಗೆ ಬಿಡಬೇಕು ಎನ್ನುವ ಚರ್ಚೆ ನಡೆದಿದೆ. ಹಾಗಾಗಿ ಸದ್ಯಕ್ಕೆ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುವುದಿಲ್ಲ. ಏಪ್ರಿಲ್ 14ಕ್ಕೆ ಸಿನಿಮಾ ಓಟಿಟಿಗೆ ಬರಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದಾರೆ.


Click it and Unblock the Notifications











