ದುಬೈ ಉದ್ಯಮಿಯ ಜೊತೆ ಸಪ್ತಪದಿ ತುಳಿಯಲು ರೆಡಿಯಾದ ಖ್ಯಾತ ನಟಿ, ಈ ವರ್ಷಾಂತ್ಯದಲ್ಲಿ ನಡೆಯಲಿದೆ ಅದ್ಧೂರಿ ಮದುವೆ
ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ. ಇವರ ಈ ಟಾರ್ಚರ್ ತಡೆಯಲು ಆಗಲಾರದೇ..
ಮದುವೆಯಾಗುವ ಯೋಚನೆಯನ್ನು ಕೂಡ ಮಾಡದ ಕೆಲವರು ಏಕಾಏಕಿ ಮದುವೆಯ ಸುದ್ದಿಯನ್ನು ಹಂಚಿಕೊಳ್ಳುತ್ತಾರೆ. ತಮ್ಮ ಸಂಗಾತಿಯನ್ನು ಒಮ್ಮಿಂದೊಮ್ಮೆಲೆ ಪರಿಚಯಿಸಿ ತಮ್ಮ ಅಭಿಮಾನಿಗಳನ್ನು ಅಚ್ಚರಿಗೆ ದೂಡುತ್ತಾರೆ. ಇದಕ್ಕೆ ನಿವೇತಾ ಪೆತುರಾಜ್ ಸದ್ಯದ ಉದಾಹರಣೆ.

ಹೌದು, ನಿವೇತಾ ಪೆತುರಾಜ್.. ಕಾಲಿವುಡ್ ಮತ್ತು ಟಾಲಿವುಡ್‌ನ ಚೆಲುವೆ. ''ಒರು ನಾಲ್ ಕೂತು'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನಿವೇತಾ ಆ ನಂತರ ''ಟಿಕ್ ಟಿಕ್ ಟಿಕ್''.. ''ಚಿತ್ರ ಲಹರಿ''.. ''ಸಂಗತ ತಮಿಳನ್''.. ''ಅಲಾ ವೈಕುಂಡಪುರಂಲೊ''.. ''ರೆಡ್ ''.. ''ಪಾಗಲ್''.. ''ದಸ್ ಕಾ ಧಮ್ಕಿ''.. ''ಪಾರ್ಟಿ''.. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಅಭಿನಯದಲ್ಲಿ ಆಂಧ್ರ ಮತ್ತು ತಮಿಳುನಾಡು ಪ್ರೇಕ್ಷಕರ ಹೃದಯವನ್ನು ಗೆದ್ದರು.
ಇಂಥಾ ನಿವೇತಾ ಪೆತುರಾಜ್ ಸದ್ಯ ಮದುವೆಯಾಗಲು ಸಿದ್ಧರಾಗಿದ್ಧಾರೆ. ತಮ್ಮ ಹುಡುಗನನ್ನು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಸದ್ಯ ನಿವೇತಾ ಅವರಿಗೆ ಹಲವಾರು ಜನ ಶುಭ ಕೋರುತ್ತಿದ್ದಾರೆ. ಮದುವೆ ಯಾವಾಗ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಮದುವೆಯ ನಂತರ ಚಿತ್ರರಂಗದಲ್ಲಿ ಮುಂದುವರೆಯುತ್ತೀರಾ ಅಥವಾ ಇಲ್ಲವಾ ? ಎಂಬ ಪ್ರಶ್ನೆಯನ್ನು ಕೂಡ ಇವರ ಅಭಿಮಾನಿಗಳು ಸದ್ಯ ಕೇಳುತ್ತಿದ್ದಾರೆ.
ಅಂದ್ಹಾಗೇ ನಿವೇತಾ ಪೆತುರಾಜ್ ಮದುವೆಯಾಗುತ್ತಿರುವ ಹುಡುಗನ ಹೆಸರು ರಜಿತ್ ಇಬ್ರಾನ್. ಇವರಿಬ್ಬರದ್ದು ಲವ್ ಮ್ಯಾರೇಜಾ..? ಅಥವಾ ಅರೆಂಜ್ ಮ್ಯಾರೇಜಾ..? ಎನ್ನುವುದು ಸದ್ಯ ಗೊತ್ತಿಲ್ಲವಾದರೂ ರಜಿತ್ ಇಬ್ರಾನ್ ದುಬೈನಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇದಲ್ಲದೇ ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಈ ಹಿಂದೆ ರಜಿತ್ ಮಿಂಚಿದ್ದಾರೆ.

ಇನ್ನು ತಮ್ಮ ಮದುವೆಯ ದಿನವನ್ನು ನಿವೇತಾ ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ.. ''123 ತೆಲುಗು'' ವೆಬ್ ಸೈಟ್ ನಿವೇತಾ ಮತ್ತು ರಜಿತ್ ಮದುವೆ ಈ ವರ್ಷದ ಕೊನೆಯಲ್ಲಿ ನಡೆಯಲಿದೆ ಎಂದು ವರದಿಯನ್ನು ಮಾಡಿದೆ. ಕೇವಲ ತಮ್ಮ ಕುಟುಂಬಸ್ಥರನ್ನು ಹೊರತು ಪಡಿಸಿದರೆ ಕೇವಲ ಆಪ್ತ ಸ್ನೇಹಿತರನ್ನು ಮಾತ್ರ ಕರೆಯಲು ಇಬ್ಬರು ಉದ್ದೇಶಿಸಿದ್ದಾರೆ ಎಂದು ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನುಳಿದಂತೆ ನಿವೇತಾ ಕೇವಲ ನಾಯಕಿ ಮಾತ್ರ ಅಲ್ಲ ಬದಲಿಗೆ ಬಹುಮುಖ ಪ್ರತಿಭೆ. ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದವರು ಇವರು. ಇಷ್ಟೇ ಅಲ್ಲದೇ ಫಾರ್ಮುಲಾ ಒನ್ ರೇಸಿಂಗ್‌ನಲ್ಲಿ ತರಬೇತಿಯನ್ನು ಕೂಡ ಇವರು ಪಡೆದಿದ್ದಾರೆ.
ಇನ್ನೂ ಆಗಾಗ ವಿವಾದಗಳಿಂದ ಕೂಡ ಸುದ್ದಿಯಾಗುವ ನಿವೇತಾ ಅವರಿಗಾಗಿ ಖ್ಯಾತ ನಟನೊಬ್ಬ ದುಬೈನಲ್ಲಿ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ಈ ಹಿಂದೆ ಯೂಟ್ಯೂಬರ್ ಒಬ್ಬರು ಆರೋಪ ಮಾಡಿದ್ದರು. ಈ ವಿಚಾರಕ್ಕೆ ನಿವೇತಾ ಪ್ರತಿಕ್ರಿಯೆಯನ್ನು ನೀಡದಿದ್ದರೂ ಈ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಈಗ ದುಬೈನಲ್ಲಿಯೇ ನೆಲೆಸಿರುವ ವ್ಯಕ್ತಿಯ ಜೊತೆ ನಿವೇತಾ ಸಪ್ತಪದಿಯನ್ನು ತುಳಿಯಲು ಸಿದ್ಧರಾಗಿದ್ದಾರೆ. ನಿವೇತಾ ಮತ್ತು ರಜಿತ್ ಇಬ್ರಾನ್ ನಡುವೆ ಪ್ರೇಮಾಂಕುರವಾಗಿದ್ಹೇಗೆ ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದ್ದು ಈ ವಿಚಾರವನ್ನು ಪತ್ತೆ ಹಚ್ಚಲು ಸದ್ಯ ಸೋಶಿಯಲ್ ಮೀಡಿಯಾ ಪ್ರವೀಣರು ಕಾರ್ಯೋನ್ಮುಖರಾಗಿದ್ದಾರೆ.


Click it and Unblock the Notifications











