Ghost: ಶಿವಣ್ಣನ 'ಘೋಸ್ಟ್' ಬಿಡುಗಡೆ ದಿನಾಂಕ ಕಂಡು ವಿಜಯ್ 'ಲಿಯೋ' ಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿದ ನೆಟ್ಟಿಗರು!
2022ರಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿ ಭಾರತ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ಕನ್ನಡ ಚಿತ್ರರಂಗ ಈ ವರ್ಷದ ಮೊದಲಾರ್ಧದಲ್ಲಿ ಸೈಲೆಂಟ್ ಆಗಿಬಿಟ್ಟಿತ್ತು. ಹೌದು, 2023ರ ಮೊದಲ ಆರು ತಿಂಗಳುಗಳಲ್ಲಿ ಬಿಡುಗಡೆಗೊಂಡ ಕನ್ನಡದ ಯಾವ ಚಿತ್ರಗಳೂ ಸಹ ಐವತ್ತು ಕೋಟಿ ಕಲೆಕ್ಷನ್ ಮುಟ್ಟುವ ಸಾಹಸವನ್ನು ಮಾಡಿಲ್ಲ.
ಇನ್ನು ಈ ಮೊದಲ ಆರು ತಿಂಗಳುಗಳಲ್ಲಿ ಕನ್ನಡದ ಸ್ಟಾರ್ ನಟರ ಚಿತ್ರಗಳು ಹೆಚ್ಚೇನೂ ಬಿಡುಗಡೆಯಾಗದೇ ಇರುವುದು ಸ್ಯಾಂಡಲ್‌ವುಡ್ ಹಿನ್ನಡೆ ಅನುಭವಿಸಲು ಕಾರಣ ಎಂದು ಹೇಳಬಹುದಾಗಿದ್ದು, ವರ್ಷದ ದ್ವಿತೀಯಾರ್ಧದಲ್ಲಿ ಸಾಲು ಸಾಲು ಬಹು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವ ಕಾರಣ ಚಂದನವನ ಕಮ್‌ಬ್ಯಾಕ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.

ಸದ್ಯ ಹೊಸಬರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಹಿಟ್ ಆಗಿದ್ದು, ಮುಂಬರುವ ಸ್ಟಾರ್ ನಟರ ಚಿತ್ರಗಳು ಈ ಪಟ್ಟಿ ಸೇರುವ ನಿರೀಕ್ಷೆ ಇದೆ. ಅದರಲ್ಲಿ ಶಿವರಾಜ್‌ಕುಮಾರ್ ನಟನೆಯ ಘೋಸ್ಟ್ ಚಿತ್ರ ಸಹ ಒಂದು. ಹೌದು, ಶಿವಣ್ಣ ನಟನೆಯ ಘೋಸ್ಟ್ ಸಿನಿಮಾ ತನ್ನ ಪೋಸ್ಟರ್ ಹಾಗೂ ಶಿವಣ್ಣನ ಲುಕ್‌ಗಳಿಂದಲೇ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಈ ಚಿತ್ರದ ಬಿಗ್ ಡ್ಯಾಡಿ ಟೀಸರ್ ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಇನ್ನು ಈ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ( ಆಗಸ್ಟ್ 17 ) ಪ್ರಕಟಗೊಳಿಸಲಾಗಿದ್ದು, ಘೋಸ್ಟ್ ಅಕ್ಟೋಬರ್ 19ರಂದು ಬಿಡುಗಡೆಗೊಳ್ಳಲಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ಸಹ ಘೋಸ್ಟ್ ಬಿಡುಗಡೆಯಾಗಲಿದೆ.
ಹೀಗೆ ಘೋಸ್ಟ್ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆಯೇ ತಮಿಳು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ತಮಿಳು ನಟ ವಿಜಯ್ ನಟನೆಯ ಲಿಯೋ ಚಿತ್ರಕ್ಕೆ ಮುಂಚಿತವಾಗಿ ಶ್ರದ್ಧಾಂಜಲಿ ಎಂದು ಬರೆದುಕೊಳ್ಳಲು ಆರಂಭಿಸಿದ್ದಾರೆ. ಹೌದು, ಘೋಸ್ಟ್ ಚಿತ್ರ ಬಿಡುಗಡೆಯಾಗುವ ಸಮಯಕ್ಕೆ ಅಂದರೆ ದಸರಾ ಹಬ್ಬಕ್ಕೆ ವಿಜಯ್ ನಟನೆಯ ಲಿಯೋ ಚಿತ್ರವೂ ಸಹ ಬಿಡುಗಡೆಯಾಗಲಿದ್ದು, ಎರಡೂ ಚಿತ್ರಗಳು ಮುಖಾಮುಖಿಯಾಗಲಿವೆ ಮತ್ತು ಈ ಮುಖಾಮುಖಿಯಲ್ಲಿ ಶಿವಣ್ಣ ನಟನೆಯ ಘೋಸ್ಟ್ ಗೆಲ್ಲಲಿದೆ, ಹೀಗಾಗಿ ಲಿಯೋಗೆ ಮುಂಚತವಾಗಿ ಶ್ರದ್ಧಾಂಜಲಿ ಎಂದು ಟ್ವೀಟ್‌ಗಳು ಹರಿದುಬರುತ್ತಿವೆ.
ಇನ್ನು ಈ ಮಟ್ಟಿಗೆ ವಿಜಯ್ ಸಿನಿಮಾ ಜತೆ ಶಿವಣ್ಣ ನಟನೆಯ ಸಿನಿಮಾವನ್ನು ಹೋಲಿಸಿ ಟ್ರೋಲ್ ಮಾಡಲು ಕಾರಣ ಜೈಲರ್ ಚಿತ್ರದ ಮೂಲಕ ಶಿವಣ್ಣ ತಮಿಳುನಾಡಿನಲ್ಲಿ ಗಳಿಸಿರುವ ಜನಪ್ರಿಯತೆ. ಹೌದು, ಜೈಲರ್ ಚಿತ್ರದಲ್ಲಿ ನರಸಿಂಹ ಪಾತ್ರದಲ್ಲಿ ಶಿವಣ್ಣ ಹೆಚ್ಚೇನೂ ಡೈಲಾಗ್ ಇಲ್ಲದಿದ್ದರೂ ಸಹ ತಮ್ಮ ಮಾಸ್ ಲುಕ್ ಮೂಲಕವೇ ತಮಿಳು ಸಿನಿ ರಸಿಕರ ಮನ ಗೆದ್ದಿದ್ದಾರೆ. ಅಲ್ಲಿನ ಸಿನಿ ರಸಿಕರು ಶಿವಣ್ಣ ಅಭಿನಯದ ಮುಂದಿನ ಎಲ್ಲಾ ಚಿತ್ರಗಳನ್ನು ತಮಿಳಿಗೆ ಡಬ್ ಮಾಡಿ ಬಿಡುಗಡೆ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.


Click it and Unblock the Notifications










