ವಿಜಯ್ 'GOAT' ಚಿತ್ರದ ಬಜೆಟ್ ಎಷ್ಟು? ಫಸ್ಟ್ ಡೇ ಎಷ್ಟು ಕಲೆಕ್ಷನ್ ಮಾಡಬಹುದು?
ದಳಪತಿ ವಿಜಯ್ ನಟನೆಯ 'ಗೋಟ್'(GOAT) ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ವೆಂಕಟ್ ಪ್ರಭು ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ವಿಜಯ್ ಅಬ್ಬರಿಸಿದ್ದಾರೆ. ಬಹುಕೋಟಿ ವೆಚ್ಚದ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.
ಸ್ವತಂ ಪಕ್ಷ ಕಟ್ಟಿ ವಿಜಯ್ ರಾಜಕೀಯರಂಗ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಹಾಗಾಗಿ ಹೆಚ್ಚು ಕಮ್ಮಿ 'ಗೋಟ್' ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ. ಹಾಗಾಗಿ ಅಭಿಮಾನಿಗಳು ಈ ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ದೇಶ ವಿದೇಶದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕಾಗಿ ವಿಜಯ್ 200 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

ಸೈನ್ಸ್ ಫಿಕ್ಷನ್ ಆಕ್ಷನ್ ಎಂಟರ್‌ಟೈನರ್ 'ಗೋಟ್' ಚಿತ್ರದಲ್ಲಿ ಸ್ನೇಹಾ, ಪ್ರಶಾಂತ್, ಪ್ರಭುದೇವಾ ಸೇರಿ ದೊಡ್ಡ ತಾರಾಗಣವಿದೆ. ತಂದೆ-ಮಗ ಗಾಂಧಿ ಹಾಗೂ ಜೀವನ್ ಆಗಿ ದಳಪತಿ ವಿಜಯ್ ನಟಿಸಿದ್ದಾರೆ. ಈಗಾಗಲೇ ಚಿತ್ರದ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಅಡ್ವಾನ್ಸ್ ಬುಕ್ಕಿಂಗ್‌ಗೆ ಕೂಡ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕರ್ನಾಟಕದಲ್ಲಿ ನಾಳೆ(ಸೆಪ್ಟೆಂಬರ್ 5) ಬೆಳ್ಳಂಬೆಳ್ಳಗ್ಗೆ 4 ಗಂಟೆಗೆ ಮೊದಲ ಶೋ ಆರಂಭವಾಗಲಿದೆ.
ವಿಜಯ್ ನಟಿಸಿದ ಹಿಂದಿನ ಸಿನಿಮಾಗಳು ಅಷ್ಟಾಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಆದರೂ ಕ್ರೇಜ್ ಕಮ್ಮಿ ಆಗಿಲ್ಲ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಬೆಂಗಳೂರಿನ ಕೆಲವೆಡೆ ಬೆಳಗ್ಗೆ 4 ಗಂಟೆ ಶೋ ಟಿಕೆಟ್ 1000 ರೂಪಾಯಿಗೆ ಮಾರಾಟವಾಗಿದೆ. ಭಾರೀ ಮೊತ್ತ ತೆತ್ತು ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ. ತಮಿಳುನಾಡಿನಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಮೊದಲ ಪ್ರದರ್ಶನ ಶುರುವಾಗುವ ಸಾಧ್ಯತೆಯಿದೆ.

'ಗೋಟ್' ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಆಗಬಹುದು? ಎನ್ನುವ ಚರ್ಚೆ ಆರಂಭವಾಗಿದೆ. ಕೆಲ ಬಾಕ್ಸಾಫೀಸ್ ಪಂಡಿತರು ಚಿತ್ರ ರಿಲೀಸ್ ದಿನವೇ 100 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಚಿತ್ರದ ಸಾಂಗ್ಸ್ ನಿರಾಸೆ ಮೂಡಿಸಿತ್ತು. ಆದರೆ ಆಕ್ಷನ್ ಪ್ಯಾಕ್ಡ್ ಟ್ರೈಲರ್ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಹಾಗಾಗಿ ಸಹಜವಾಗಿಯೇ ಹೈಪ್ ಕ್ರಿಯೇಟ್ ಆಗಿದೆ.
ವಿಜಯ್ ನಟಿಸಿದ ಹಿಂದಿನ ಸಿನಿಮಾ 'ಲಿಯೋ' ಮೊದಲ ದಿನ 150 ಕೋಟಿ ರೂ. ಕೊಳ್ಳೆ ಹೊಡೆದಿತ್ತು. ವಿಶ್ವದಾದ್ಯಂತ ಆ ಸಿನಿಮಾ 148.5 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ನಿರ್ಮಾಪಕರು ಘೋಷಿಸಿದ್ದರು. ಆದರೆ ಲಿಯೋ ಚಿತ್ರಕ್ಕೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದರು. ಅವರಿಬ್ಬರ ಕಾಂಬಿನೇಷನ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಆದರೆ 'ಗೋಟ್' ಸಿನಿಮಾ 'ಲಿಯೋ' ಚಿತ್ರದ ಮೊದಲ ದಿನದ ಕಲೆಕ್ಷನ್ ದಾಖಲೆ ಮುರಿಯುವುದು ಕಷ್ಟವಿದೆ.
'ಲಿಯೋ'ಗೆ ಹೋಲಿಸಿದರೆ 'ಗೋಟ್' ಹೈಪ್ ಕಮ್ಮಿಇದೆ. ಇನ್ನು ಗಣೇಶ ಹಬ್ಬ ವೀಕೆಂಡ್‌ನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದು ಪ್ಲಸ್ ಆಗುವ ನಿರೀಕ್ಷೆಯಿದೆ. ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ 'ಗೋಟ್' ಸೋತರೂ ಒಟ್ಟಾರೆ ಕಲೆಕ್ಷನ್ ದೊಡ್ಡದಾಗಿರುತ್ತದೆ ಎನ್ನುವ ಅಂದಾಜಿದೆ. ಹಬ್ಬದ ರಜಾ ಸಮಯದಲ್ಲಿ ಜನ ಫ್ಯಾಮಿಲಿ ಸಮೇತ ಚಿತ್ರಮಂದಿರಕ್ಕೆ ಬರ್ತಾರೆ. ಹಾಗಾಗಿ ಹೆಚ್ಚು ಗಳಿಕೆ ಆಗುತ್ತದೆ ಎಂದು ಬಾಕ್ಸಾಫೀಸ್ ಪಂಡಿತರು ಹೇಳ್ತಿದ್ದಾರೆ.
ಹೆಚ್ಚು ಕಮ್ಮಿ 400 ಕೋಟಿ ರೂ. ಬಜೆಟ್‌ನಲ್ಲಿ 'ಗೋಟ್' ಸಿನಿಮಾ ನಿರ್ಮಾಣವಾಗಿದೆ. ಕಳೆದ 5 ವರ್ಷಗಳಲ್ಲಿ ವಿಜಯ್ ನಟನೆಯ ಸಿನಿಮಾಗಳ ಮಾರ್ಕೆಟ್ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಓವರ್‌ಸೀಸ್‌ನಲ್ಲಿ ಹೆಚ್ಚು ಗಳಿಕೆ ಕಾಣುತ್ತದೆ. ಹಾಗಾಗಿ 400 ಕೋಟಿ ರೂ. ಬಂಡವಾಳ ವಾಪಸ್ ಬರುವ ನಿರೀಕ್ಷೆಯಲ್ಲಿರುವುದಾಗಿ ನಿರ್ಮಾಪಕರು ಹೇಳಿದ್ದಾರೆ.
ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಮೈಸೂರಿನಲ್ಲಿ 'ಗೋಟ್' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಒಳ್ಳೆ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ. ಆಂಧ್ರ, ತೆಲಂಗಾಣದಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಚಿತ್ರದ ಗಳಿಕೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.


Click it and Unblock the Notifications











