ಅಜಿತ್ ತ್ರಿಬಲ್ ಧಮಾಕ; 'ಗುಡ್ ಬ್ಯಾಡ್ ಅಗ್ಲಿ' ಆಕ್ಷನ್ ಪ್ಯಾಕ್ಡ್ ಟೀಸರ್ ರಿಲೀಸ್
ಅಜಿತ್ ನಟಿಸಿದ 'ವಿಡಾಮುಯರ್ಚಿ' ಚಿತ್ರ ಇತ್ತೀಚೆಗೆ ಬಿಡುಗಡೆ ಆಗಿ ಸದ್ದು ಮಾಡಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಶೀಘ್ರದಲ್ಲೇ ಸಿನಿಮಾ ಓಟಿಟಿಗೂ ಬರ್ತಿದೆ. ಇದೆಲ್ಲದರ ನಡುವೆ ಅಜಿತ್ ಮುಂದಿನ ಸಿನಿಮಾ 'ಗುಡ್ ಬ್ಯಾಡ್ ಅಗ್ಲಿ' ಟೀಸರ್ ರಿಲೀಸ್ ಆಗಿದೆ.
ಅದಿಕ್ ರವಿಚಂದ್ರನ್ 'ಗುಡ್ ಬ್ಯಾಡ್ ಅಗ್ಲಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ತ್ರಿಷಾ ಮಿಂಚಿದ್ದಾರೆ. ಎಸ್. ಜೆ ಸೂರ್ಯ, ಪ್ರಭು, ಪ್ರಸನ್ನ, ಸುನಿಲ್, ಯೋಗಿಬಾಬು ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇದೊಂದು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಆಗಿದ್ದು ಮಾಸ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿರುವುದು ಗೊತ್ತಾಗುತ್ತಿದೆ.

ತೆಲುಗಿನ ಮೈತ್ರಿ ಮೂವಿಮೇಕರ್ಸ್ ಹಾಗೂ ಬಾಲಿವುಡ್‌ನ ಟೀ-ಸೀರಿಸ್ ಸಂಸ್ಥೆಗಳು ಜಂಟಿಯಾಗಿ ಚಿತ್ರ ನಿರ್ಮಾಣ ಮಾಡಿವೆ. ಏಪ್ರೊಲ್ 10ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಚಿತ್ರದಲ್ಲಿ ಅರವಿಂದ್ ಕರ್ತಾ ಎಂಬ ಪಾತ್ರದಲ್ಲಿ ಅಜಿತ್ ಅಬ್ಬರಿಸಿದ್ದಾರೆ. ಮೂರು ಬೇರೆ ಬೇರೆ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೇ ಪಾತ್ರನಾ ಅಥವಾ ತ್ರಿಪಾತ್ರದಲ್ಲಿ ನಟಿಸಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಗ್ಯಾಂಗ್‌ಸ್ಟರ್ AK ಆಗಿ ಅಜಿತ್ ದರ್ಬಾರ್ ನಡೆಸಿದ್ದಾರೆ.
ಟೀಸರ್ ನೋಡಿದರೆ ತಮ್ಮದೇ ವಿಭಿನ್ನ ಮ್ಯಾನರಿಸಂ, ಸ್ವ್ಯಾಗ್ ಹಾಗೂ ಡೈಲಾಗ್ ಡೆಲಿವರಿಯಿಂದ ಅಜಿತ್ ಮೋಡಿ ಮಾಡಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಮಾತ್ರವಲ್ಲೇ ಯಂಗ್ ಲುಕ್‌ನಲ್ಲಿ ಕೂಡ ಅಜಿತ್ ಅವರನ್ನು ನೋಡಬಹುದು. 'ವಾಲಿ', 'ಬಿಲ್ಲಾ', 'ಮಂಗಾತ' ಚಿತ್ರಗಳಲ್ಲಿ ಇದ್ದ ಅಜಿತ್ ಸ್ಟೈಲ್ ಇಲ್ಲಿ ನೋಡಲು ಸಿಗುತ್ತದೆ. ಟೀಸರ್ ನೋಡಿ ಅಭಿಮಾನಿಗಳಂತೂ ವಿಂಟೇಜ್ ಥಲಾ ಈಸ್ ಬ್ಯಾಕ್ ಎಂದು ಸಂಭ್ರಮಿಸುತ್ತಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದ 'ವಿಡಾಮುಯರ್ಚಿ' ಚಿತ್ರಕ್ಕೂ ಮುನ್ನ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ತಡವಾಗಿತ್ತು. ತಮಿಳು ಹೊಸ ವರ್ಷದ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಇಡೀ ಟೀಸರ್ ಅಜಿತ್ ಆವರಿಸಿಕೊಂಡಿದ್ದು ಬೇರೆ ಪಾತ್ರಗಳು ಅಷ್ಟಾಗಿ ನೋಡಲು ಸಿಗುವುದಿಲ್ಲ.
'KGF' ಅವಿನಾಶ್ ಆಂಡ್ರೂಸ್ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವಂತೆ ಕಾಣುತ್ತಿದೆ. ಟೀಸರ್‌ನಲ್ಲಿ ಅಜಿತ್ ಬಿಟ್ಟರೆ ಅವರಿಗೆ ಒಂದು ಖಡಕ್ ಡೈಲಾಗ್ ಸಿಕ್ಕಿದೆ. ತಮಿಳಿನಲ್ಲಿ ಕೂಡ ದೊಡ್ಡ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ 'ಇಂಡಿಯನ್'-2, 'ವೆಟ್ಟೆಯಾನ್', 'ಕಂಗುವ', 'ತಂಗಲಾನ್' ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದವು. ಈಗ ಅಜಿತ್ ಚಿತ್ರ ನಿರೀಕ್ಷೆ ಹುಟ್ಟಾಕ್ಕಿದೆ.
ಬಹಳ ಅದ್ಧೂರಿಯಾಗಿಯೇ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಮಾಡಿರುವುದು ಗೊತ್ತಾಗುತ್ತಿದೆ. ಅಂದಾಜು 250 ಕೋಟಿ ರೂ. ಬಜೆಟ್ ಸಿನಿಮಾ ಇದು ಎನ್ನಲಾಗ್ತಿದೆ. ಅಭಿನಂದನ್ ರಾಮಾನುಜಂ ಛಾಯಾಗ್ರಹಣ, ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿದೆ. 95 ಕೋಟಿ ರೂ.ಗೆ ನೆಟ್‌ಫ್ಲಿಕ್ಸ್ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ.
ರಜನಿಕಾಂತ್ ನಟನೆಯ 'ಕೂಲಿ', ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಬಳಿಕ ತಮಿಳಿನಲ್ಲಿ ಈ ವರ್ಷ 'ಗುಡ್ ಬ್ಯಾಡ್ ಅಗ್ಲಿ' ಹೈಪ್ ಕ್ರಿಯೇಟ್ ಮಾಡಿದೆ. ಆದರೆ 'ವಿಡಾಮುಯರ್ಚಿ' ಸೋಲು ಚಿತ್ರತಂಡಕ್ಕೆ ಆಘಾತ ತಂದಿದೆ. ಅಂದಹಾಗೆ ಆ ಚಿತ್ರದಲ್ಲಿ ಕೂಡ ಅಜಿತ್ ಜೋಡಿಯಾಗಿ ತ್ರಿಷಾ ನಟಿಸಿದ್ದರು.


Click it and Unblock the Notifications











