ನಾಚಿಕೆಯಾಗಬೇಕು ; ಚಿತ್ರದ ಪಾತ್ರಕ್ಕಿಂತ ದೇಹದ ಗಾತ್ರದ ಮೇಲೆ ಕಣ್ಣು- ಕೆರಳಿ ಕೆಂಡವಾದ ನಟಿ
ಬಣ್ಣದ ಪ್ರಪಂಚದಲ್ಲಿ ಅನೇಕ ನಾಯಕಿಯರು ಸಹಜ ಸೌಂದರ್ಯಕ್ಕೆ ಸರಳ ಸಾಧನೆಗಳ ಮೊರೆ ಹೋಗುತ್ತಾರೆ. ಆದರೂ ಕೂಡ ಕೆಲವೊಮ್ಮೆ ಜೀವನ ಶೈಲಿ, ಆಹಾರ ಕ್ರಮದಲ್ಲಾಗುವ ವ್ಯತ್ಯಾಸ, ಕಾಲ ಕಾಲಕ್ಕೆ ದೇಹದಲ್ಲಿ ಆಗುವ ಹಾರ್ಮೋನ್‌ಗಳ ಏರುಪೇರಿಂದ ದೇಹದ ಸೌಂದರ್ಯದಲ್ಲಿ ವ್ಯತ್ಯಾಸ ಕಾಣಿಸುತ್ತೆ. ಇದನ್ನರಿಯದ ಅನೇಕರು ಸುಖಾ ಸುಮ್ಮನೆ ಸೆಲೆಬ್ರೀಟಿಗಳಿಗೆ ಪ್ರಶ್ನೆಗಳನ್ನು ಮಾಡುತ್ತಾರೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯವನ್ನು ಟೀಕಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ.
ಇನ್ನು ಕೆಲವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ ಎಂಬ ಪ್ರಶ್ನೆಯನ್ನು ಕೂಡ ಮಾಡುತ್ತಾರೆ. ಸಾಮಾನ್ಯವಾಗಿ ಈ ತರಹದ ಪ್ರಶ್ನೆಗಳು ಎದುರಾದಾಗ ಅನೇಕರು ಸುಮ್ಮನಾಗುತ್ತಾರೆ. ಯಾಕೆಂದರೆ ಮಾತನಾಡಿ ಪ್ರಯೋಜನ ಇಲ್ಲ ಎನ್ನುವುದು ಅವರ ಭಾವನೆ.ಆದರೆ, ಇನ್ನು ಕೆಲವರು ತಮ್ಮ ಬಗ್ಗೆ ಇಲ್ಲ ಸಲ್ಲದ ಮಾತು ಕೇಳಿ ಬಂದಾಗ ಪಿತ್ತ ನೆತ್ತಿಗೇರಿಸಿಕೊಂಡು ಕೆಂಡ ಕಾರುತ್ತಾರೆ. ಇದಕ್ಕೆ ಗೌರಿ ಕಿಶನ್ ಸದ್ಯದ ಉದಾಹರಣೆ.

ಹೌದು, ಗೌರಿ ಕಿಶನ್.. ''96''.. ''ಮಾಸ್ಟರ್''.. ''ಕರ್ಣನ್''.. ''ಲವ್ ಇನ್ಸುರೆನ್ಸ್ ಕಂಪನಿ'' ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಅಭಿಮಾನಿಗಳ ಹೃದಯ ಗೆದ್ದ ಗೌರಿ ಕಿಶನ್ ಸದ್ಯ ''ಅದರ್ಸ್'' ಎಂಬ ಚಿತ್ರವನ್ನು ಮಾಡಿದ್ದಾರೆ.
ಇಂದು (ನವೆಂಬರ್ 7 ) ಈ ಚಿತ್ರ ಬಿಡುಗಡೆಯಾಗಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರಾರ್ಥ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೌರಿ ಕಿಶನ್ ಭಾಗವಹಿಸಿದ್ದರು. ಚಿತ್ರದ ಕುರಿತು ಮಾತನಾಡುತ್ತಿದ್ದರು. ಇದೇ ಸಮಯದಲ್ಲಿ ಪತ್ರಕರ್ತನ ಸೋಗಿನಲ್ಲಿದ್ದ ವ್ಯಕ್ತಿಯೊಬ್ಬ ಗೌರಿ ಕಿಶನ್ ಅವರಿಗೆ ಅವರ ಪಾತ್ರದ ಕುರಿತು ಕೇಳುವ ಬದಲು ಅವರ ದೇಹದ ಗಾತ್ರದ ಬಗ್ಗೆ ಕೇಳಿದ್ದಾನೆ.
ಪತ್ರಕರ್ತ ಕೇಳಿದ ಈ ಪ್ರಶ್ನೆಗೆ ಗೌರಿ ಸಹಜವಾಗಿ ಕೆರಳಿದ್ದಾರೆ. ಎಲ್ಲರೆದುರು ದೇಹಾಕೃತಿಯ ಕುರಿತು ಪ್ರಶ್ನೆ ಮಾಡಿದ ಆ ಪತ್ರಕರ್ತನಿಗೆ ಅಲ್ಲಿಯೇ ಗ್ರಹಚಾರ ಬಿಡಿಸಿದ್ದಾರೆ. ಬಿಡುಗಡೆಯಾಗುತ್ತಿರುವ ನನ್ನ ಚಿತ್ರಕ್ಕೂ .. ನನ್ನ ತೂಕಕ್ಕೂ .. ಎಲ್ಲಿಂದ ಎಲ್ಲಿಗೆ ಸಂಬಂಧ ಎಂದು ಮರುಪ್ರಶ್ನೆ ಮಾಡಿರುವ ಗೌರಿ ಕಿಶನ್, ಪಾತ್ರಕ್ಕೆ ನಾನು ಹಾಕಿರುವ ಶ್ರಮದ ಕುರಿತು ಪ್ರಶ್ನೆಯನ್ನು ನೀವು ಕೇಳಬೇಕಿತ್ತು.. ಚಿತ್ರದ ಕುರಿತು ನೀವು ಮಾತನಾಡಬೇಕಿತ್ತು.. ಆದರೆ ನಿಮಗೆ ನನ್ನ ತೂಕದ ಚಿಂತೆ ಕಾಡುತ್ತಿದೆ ಎಂದು ಹೇಳಿದ್ದಾರೆ.ಮಹಿಳೆಯರು ಎಂದರೆ ನಿಮಗೆ ಆಟಿಕೆ ವಸ್ತುನಾ ಎಂದು ಕೆಂಡ ಕಾರಿದ್ದಾರೆ.
ಮುಂದುವರೆದು ಪ್ರತಿ ಮಹಿಳೆಯ ದೇಹದಾಕಾರ ವಿಭಿನ್ನವಾಗಿರುತ್ತೆ, ಹಾರ್ಮೋನಗಳ ಬದಲಾವಣೆಯಿಂದ ವ್ಯತ್ಯಾಸ ಕಂಡು ಬರುತ್ತೆ ಎಂದು ಹೇಳಿರುವ ಗೌರಿ ಕಿಶನ್, ನನ್ನ ತೂಕ ನನ್ನ ಚಿತ್ರಕ್ಕೆ ಸಮಸ್ಯೆಯಾದರೆ, ಅದರ ಕುರಿತು ಮಾತನಾಡುವ ಅಥವಾ ಪ್ರಶ್ನೆ ಮಾಡುವ ಹಕ್ಕು ನಿರ್ದೇಶಕರಿಗಿದೆ. ನಿಮಗೇನು ಕೆಲಸ..? ನೀವ್ಯಾರು ಪ್ರಶ್ನೆ ಮಾಡಲು ಎಂದು ಪ್ರಶ್ನೆ ಕೇಳಿದ್ಧಾರೆ.
ಚಿತ್ರರಂಗದಲ್ಲಿ ಹೀರೋಗಳಿಗೆ ಈ ರೀತಿಯ ಪ್ರಶ್ನೆಯನ್ನು ಕೇಳುವ ಧೈರ್ಯ ನಿಮಗೆ ಇದೆಯಾ ಎಂದು ಕೂಡ ಕಿಡಿ ಕಾರಿರುವ ಗೌರಿ ನೀವು ಮಾಡುತ್ತಿರುವುದು ಪತ್ರಿಕೋದ್ಯಮ ಅಲ್ಲ, ಪತ್ರಿಕೋದ್ಯಮಕ್ಕೆ ನಿಮ್ಮಂತವರು ಕಳಂಕ ಎಂದು ಹೇಳಿದ್ಧಾರೆ. ನಿಮ್ಮ ಈ ಮೂರ್ಖತನದ ಪ್ರಶ್ನೆಯಿಂದ ನನಗೆ ಮಾನಸಿಕ ಆಘಾತವಾಗಿದೆ ಎಂದು ಹೇಳಿದ್ಧಾರೆ ಗೌರಿ.
ಸದ್ಯ ಗೌರಿ ಕಿಶನ್ ಅವರ ಈ ಬೋಲ್ಡ್ ಅವತಾರಕ್ಕೆ ಹಲವರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಗೌರಿ ಅವರ ಈ ಧೈರ್ಯವನ್ನು ಮೆಚ್ಚಿಕೊಂಡಿರುವ ಗಾಯಕಿ ಚಿನ್ಮಯಿ ಶ್ರೀಪಾದ್ ಪ್ರಶ್ನೆ ಕೇಳಿದ ಪರ್ತಕರ್ತನಿಗೆ ತಪರಾಕಿ ಹಾಕಿದ್ದಾರೆ. ಹಿರಿಯ ನಟಿ ಖುಷ್ಬೂ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಎಂತಹ ನಾಚಿಕೆಗೇಡಿನ ಸಂಗತಿ, ತಮ್ಮ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಕೂಡ ಇದೇ ತರಹದ ಪ್ರಶ್ನೆಯನ್ನು ಇವರು ಕೇಳುತ್ತಾರಾ..? ಎಂದು ಪ್ರಶ್ನೆ ಮಾಡಿದ್ದಾರೆ. ಗೌರವ ಬೇಕು ಅಂದರೆ ಮೊದಲು ಬೇರೆಯವರನ್ನು ಗೌರವಿಸುವುದನ್ನು ಕಲಿಯಿರಿ ಎಂದು ಹೇಳಿದ್ಧಾರೆ.
ಕೇವಲ ಚಿನ್ಮಯಿ ಮತ್ತು ಖುಷ್ಬೂ ಮಾತ್ರವಲ್ಲ ಚಿತ್ರರಂಗದ ಹಲವು ನಟಿಯರು ಗೌರಿ ಕಿಶನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇಡೀ ಮಾತಿನ ಚಕಮಕಿ ನಡೆಯುವ ಸಮಯದಲ್ಲಿ ಗೊಂಬೆಯಂತೆ ಸುಮ್ಮನೆ ಕುಂತಿದ್ದ ಚಿತ್ರದ ನಿರ್ದೇಶಕ ಮತ್ತು ಚಿತ್ರದ ನಾಯಕ, ಇಬ್ಬರನ್ನು ಕೂಡ ಜನ ಸೋಶಿಯಲ್ ಮೀಡಿಯಾದಲ್ಲಿ ತರಾಟೆ ತೆಗೆದುಕೊಳ್ಳುತ್ತಿದ್ಧಾರೆ.


Click it and Unblock the Notifications











