ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ, ಬೆದರಿಕೆ: ರಾಜಕಾರಣಿ ಬಂಧನ
ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ, ಬೆದರಿಕೆ ಹಾಕಿದ್ದ ಆರೋಪದಲ್ಲಿ ಪನಂಗಕಟ್ಟು ಪದೈ ಕಚ್ಚಿ ಸಂಘಟನೆಯ ಹರಿ ನದಾರ್ ಅನ್ನು ತಮಿಳುನಾಡಿನ ತಿರುವನ್ಮಿಯೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
2020ರಲ್ಲಿ ಫೇಸ್‌ಬುಕ್ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ನಟಿ ವಿಜಯಲಕ್ಷ್ಮಿ, ತಮಗೆ ಪನಂಗಕಟ್ಟು ಪದೈ ಕಚ್ಚಿ ಸಂಘಟನೆಯ ಹರಿ ನದಾರ್ ಲೈಂಗಿಕ ಕಿರುಕುಳ ನೀಡಿದ್ದಾನೆಂದು, ಬೆದರಿಕೆ ಹಾಕಿದ್ದಾನೆಂದು ಆರೋಪಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ತಿರುವನ್ಮಿಯೂರು ಪೊಲೀಸರು ಪ್ರಕರಣದ ಮತ್ತೊಬ್ಬ ಆರೋಪಿ ನಾಮ್ ತಮಿಳರ್ ಕಚ್ಚಿ ಪಕ್ಷದ ಮುಖಂಡ ಸಿಮನ್, ವಿಜಯಲಕ್ಷ್ಮಿಗೆ ಕಿರುಕುಳ ನೀಡಲೆಂದು, ಬೆದರಿಕೆ ಹಾಕಲೆಂದು ಹರಿ ನದಾರ್‌ಗೆ ಸೂಚಿಸಿದ್ದು ಬೆಳಕಿಗೆ ಬಂದಿದೆ.

ಹರಿ ನದಾರ್ ಅನ್ನು 2021 ಮೇ ತಿಂಗಳಲ್ಲಿ ಬೆಂಗಳೂರು ಪೊಲೀಸರು ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಬೆಂಗಳೂರಿನ ಉದ್ಯಮಿಯೊಬ್ಬನಿಗೆ 320 ಕೋಟಿ ಸಾಲ ಕೊಡಿಸುವುದಾಗಿ ಹೇಳಿ ಅವರಿಂದ 7 ಕೋಟಿ ಸಾಲ ಪಡೆದು ವಂಚನೆ ಮಾಡಿದ್ದ ಪ್ರಕರಣದಲ್ಲಿ ಹರಿ ನದಾರ್ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಕೆಲವು ದಿನಗಳ ಹಿಂದಷ್ಟೆ ಜಾಮೀನಿನ ಮೇಲೆ ಹೊರಬಂದ ಆತನನ್ನು ಇದೀಗ ಚೆನ್ನೈ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.
2020 ರ ಜುಲೈ ತಿಂಗಳಲ್ಲಿ ಫೇಸ್‌ಬುಕ್ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿಜಯಲಕ್ಷ್ಮಿ ತಮಗೆ ನಾಮ್ ತಮಿಳರ್ ಕಚ್ಚಿ ಪಕ್ಷದ ಮುಖಂಡ ಸಿಮನ್ ಇಂದ ಅನ್ಯಾಯವಾಗಿದೆ ಎಂದು ಆರೋಪಿಸಿದ್ದರು. ಸಿಮನ್ ಹಾಗೂ ತಮಗೂ ಆತ್ಮೀಯ ಸಂಬಂಧವಿತ್ತೆಂದು ಆದರೆ ಈಗ ಆತನು ತನಗೆ ಮೋಸ ಮಾಡಿದ್ದಾನೆಂದು ವಿಜಯಲಕ್ಷ್ಮಿ ಆರೋಪಿಸಿದ್ದರು. ಸಿಮನ್ ಆದೇಶದ ಮೇರೆಗೆ ಹರಿ ನದಾರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದರು.
ವಿಜಯಲಕ್ಷ್ಮಿ ಅವರನ್ನು ಆಗ ಚೆನ್ನೈನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಅವರು ಬೆಂಗಳೂರಿಗೆ ವಾಸ್ತವ್ಯ ಬದಲಾಯಿಸಿದರು.
ಇದೀಗ ಬಂಧನಕ್ಕೆ ಒಳಗಾಗಿರುವ ಹರಿ ನಾದರ್ 2019 ರಲ್ಲಿ ತಮಿಳುನಾಡಿನ ನಂಗುನೇರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಆಗಲೇ ತನ್ನ ಮೇಲೆ 9 ಕ್ರಿಮಿನಲ್ ಪ್ರಕರಣ ಇರುವುದಾಗಿ ಅಫಿಡವಿಟ್ ಸಲ್ಲಿಸಿದ್ದ ಹರಿ ನಾದರ್ ತನ್ನ ಬಳಿ 4.5 ಕೆಜಿ ಚಿನ್ನ, ಪತ್ನಿ ಶಾಲಿನಿ ಬಳಿ 3 ಕೆಜಿ ಚಿನ್ನವಿರುವುದಾಗಿಯೂ, ದಂಪತಿಗಳಿಬ್ಬರ ಬಳಿ 2.80 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿದ್ದ.


Click it and Unblock the Notifications











