ಧನುಷ್ ನಟಿಸಬೇಕಿದ್ದ ಇಳಯರಾಜ ಬಯೋಪಿಕ್ ಶುರುವಾಗುವ ಮುನ್ನವೇ ನಿಂತು ಹೋಯ್ತಾ ?
ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ನಟ ಧನುಷ್. ಕಮರ್ಷಿಯಲ್ ಹೀರೋ ಆಗಿ ತನ್ನದೇ ಆದ ಸ್ಥಾನವನ್ನ ಹೊಂದಿರುವ ಧನುಷ್, ಬೇರೆ ಸೂಪರ್ ಸ್ಟಾರ್ ಗಳು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.
ಜನಸಾಮಾನ್ಯರನ್ನ ಪ್ರತಿನಿಧಿಸುವಂತಹ, ಅಪರೂಪದ ಕಥೆಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನ ಮೊದಲಿಂದ ಮಾಡಿಕೊಂಡು ಬಂದ ಧನುಷ್ ವರ್ಷದ ಕೆಳಗೆ ಸಂಗೀತ ಸಂತ ಇಳಯರಾಜ ಅವರ ಜೀವನಾಧಾರಿತ ಚಿತ್ರವನ್ನು ಘೋಷಿಸಿದ್ದರು. ಚಿತ್ರದ ಫಸ್ಟ್ ಲುಕ್‌ಗಳನ್ನು ಕೂಡ ಬಿಡುಗಡೆ ಮಾಡಿದ್ದರು. ಆದರೆ ಆ ನಂತರ ಈ ಚಿತ್ರದ ಕುರಿತು ಯಾವ ಸುದ್ದಿಯೂ ಇಲ್ಲ. ಧನುಷ್ ಕೂಡ ಈ ಚಿತ್ರದ ಬಗ್ಗೆ ಮಾತನಾಡಲಿಲ್ಲ. ಹೀಗಾಗಿಯೇ ಇಳಯರಾಜ ಅವರ ಜೀವನಕಥೆಯನ್ನಾಧರಿಸಿದ ಚಿತ್ರ ಶುರುವಾಗುವ ಮುನ್ನವೇ ನಿಂತು ಹೋಗಿದೆ ಎನ್ನುವ ಮಾತು ಈಗ ಕೇಳಿ ಬರುತ್ತಿವೆ. ಇಳಯರಾಜಾ ಚಿತ್ರದಿಂದ ನಿರ್ಮಾಪಕರು ಹೊರ ನಡೆದಿದ್ದಾರೆ ಎಂಬ ಸುದ್ದಿ ಸದ್ಯ ಚೆನ್ನೈನಲ್ಲಿ ಗುಲ್ಲಾಗಿದೆ.

ಆದರೆ, ವಾಸ್ತವದಲ್ಲಿ ಹರಿದಾಡುತ್ತಿರುವ ಈ ಸುದ್ದಿಗಳೆಲ್ಲ ಸುಳ್ಳು ಎಂದು ಹಿಂದೂಸ್ತಾನ್ಟೈಮ್ಸ್ ವರದಿ ಮಾಡಿದೆ. ಹೌದು, ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಇಳಯರಾಜಾ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಎಜಿಎಸ್ ಎಂಟ್ರಟೈನ್ಮೆಂಟ್ ಸಂಸ್ಥೆ ಬೇರೆ ನಿರ್ಮಾಣ ಸಂಸ್ಥೆಯ ಜೊತೆ ಕೈ ಜೋಡಿಸಿದೆ. ಇನ್ನು ಚಿತ್ರದ ಕಥೆ ಸಂಪೂರ್ಣ ಸಿದ್ದವಾಗಿದ್ದು ಸದ್ಯ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿವೆ.
ಇನ್ನು ಧನುಷ್ ಒಂದಾದ ಮೇಲೊಂದು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಆ ಪೈಕಿ ತಮ್ಮದೇ ನಿರ್ದೇಶನದ ನಿಲವುಕು ಎನ್ ಮೇಲ್ ಎನ್ನದಿ ಕೋಬಂ ಚಿತ್ರವನ್ನು ಈ ಫೆಬ್ರವರಿ 21ರಂದು ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರದ ಪ್ರಚಾರದಲ್ಲಿ ಸದ್ಯ ಧನುಷ್ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಹೊರತು ಪಡಿಸಿದರೆ ಧನುಷ್ ಇಡ್ಲಿ ಕಡಾಯಿ ಚಿತ್ರವನ್ನು ಮಾಡುತ್ತಿದ್ದಾರೆ. ನಿತ್ಯಾ ಮೆನನ್ ಈ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಆ ನಂತರ ಧನುಷ್ ಅಭಿನಯದ ಕುಬೇರ ಚಿತ್ರ ತೆರೆಗೆ ಬರಲಿದೆ. ಧನುಷ್ ಜೊತೆ ಈ ಚಿತ್ರದಲ್ಲಿ ನಾಗಾರ್ಜುನ ಕೂಡ ಇದ್ದು ರಶ್ಮಿಕಾ ಮಂದಣ್ಣ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಎಲ್ಲ ಚಿತ್ರಗಳ ಜೊತೆ ಧನುಷ್ ವರ್ಷಗಳ ನಂತರ ಬಾಲಿವುಡ್‌ನತ್ತ ಮತ್ತೆ ಮುಖ ಮಾಡಿದ್ದಾರೆ. ರಾಂಜಾನ ಚಿತ್ರದ ನಿರ್ದೇಶಕ ಆನಂದ್ ಎಲ್ ರೈ ಜೊತೆ ಕೈ ಜೋಡಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನ ತೇರೆ ಇಷ್ಕ್ ಮೇ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದೆ. ಕೃತಿ ಸನೋನ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಹೀಗೆ ಒಂದಾದ ಮೇಲೊಂದು ಚಿತ್ರಗಳಲ್ಲಿ ಧನುಷ್ ಬ್ಯುಸಿಯಾಗಿರುವ ಹಿನ್ನೆಲೆ ಇಳಯರಾಜಾ ಚಿತ್ರ ಹಿಂದೆ ಬಿದ್ದಿದೆ. ಯಾಕೆಂದರೆ ಇಳಯರಾಜಾ ಸತ್ಯ ಕಥೆಗಳನ್ನಾಧರಿಸಿದ ಚಿತ್ರ. ಇಳಯರಾಜಾ ಅವರ ಬದುಕಿನ ಕೈಗನ್ನಡಿ. ಈ ಪಾತ್ರಕ್ಕೆ ಅದ್ರದ್ದೇ ಆದ ತಯಾರಿಗಳನ್ನು ಧನುಷ್ ಮಾಡಿಕೊಳ್ಳಬೇಕಿದೆ. ಹೀಗಾಗಿ ಇಳಯರಾಜ ಚಿತ್ರ ತಡವಾಗುತ್ತಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.
ಇನ್ನು ಇಳಯರಾಜ ಚಿತ್ರ ನಿಂತು ಹೋಗಿದೆ ಎನ್ನುವ ಸುದ್ದಿ ಕೇಳಿ ವಿಚಲಿತಗೊಂಡಿರುವ ಧನುಷ್ ಅವರ ಅಭಿಮಾನಿಗಳು ಚಿತ್ರದ ಕುರಿತು ಮಾಹಿತಿಯನ್ನು ನೀಡಿ ಎನ್ನುವ ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಹೊಸ ಫೋಸ್ಟರ್ ಬಿಡುಗಡೆ ಮಾಡಿ ಎನ್ನುತ್ತಿದ್ದಾರೆ. ಚಿತ್ರದ ಚಿತ್ರೀಕರಣದ ಕುರಿತು ಚಿತ್ರತಂಡ ಶೀಘ್ರವೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ


Click it and Unblock the Notifications











