ಸ್ಟುಡಿಯೋದಲ್ಲಿ ಖ್ಯಾತ ಸಂಗೀತ ನಿರ್ದೇಶಕನಿಂದ ಲೈಂ*ಗಿಕ ಕಿರುಕುಳ ; 7 ವರ್ಷದ ನಂತರ ಕಾನೂನು ಹೋರಾಟಕ್ಕೆ ಮುಂದಾದ ಗಾಯಕಿ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂ*ಗಿಕ ಹಿಂಸೆ ಅನುಭವಿಸುತ್ತಲೇ ಇದ್ಧಾರೆ. ಬದಲಾದ ಈ ಕಾಲದಲ್ಲಿ ಮಹಿಳಾ ಸಬಲೀಕರಣದ ಕುರಿತು ಭಾಷಣಗಳನ್ನು ಮಾಡಲಾಗುತ್ತೆ ಆದರೂ, ವಾಸ್ತವದಲ್ಲಿ ಮಹಿಳೆಯ ಸಾಧನೆ.. ಶ್ರಮ ಮತ್ತು ಪ್ರತಿಭೆಗಿಂತ ಭೋಗದ ವಸ್ತು ಎಂದುಕೊಂಡ ವಿಕೃತ ಮನಸ್ಥಿತಿಗಳು ಇಂದಿಗೂ ಕೂಡ ಇವೆ.
ಕೇವಲ ಚಿತ್ರರಂಗ ಮಾತ್ರ ಅಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಾನಸಿಕ ನೆಮ್ಮದಿ ಹಾಳು ಮಾಡಲು ಈ ಕಾ*ಮಾಂಧರು ಇದ್ದೇ ಇರುತ್ತಾರೆ. ಆದರೆ ಚಿತ್ರರಂಗದಲ್ಲಿ ಈ ಸಂಖ್ಯೆ ತುಸು ಹೆಚ್ಚೇ ಇದೆ. ಇದಕ್ಕೆ ಪುರಾವೆ ಎಂಬಂತೆ ಹಲವರು ಇಲ್ಲಿಯವರೆಗೆ ತಮ್ಮ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಚಿತ್ರರಂಗದಲ್ಲಿ ಹೇಗೆ ಹಲವರು ಮುಖವಾಡದ ಬದುಕು ಬದುಕುತ್ತಿದ್ದಾರೆ ಎನ್ನುವುದನ್ನು ಹೇಳಿದ್ದಾರೆ. ಈ ಸಾಲಿಗೆ ಈಗ ಸ್ವಾಗತಾ ಕೃಷ್ಣನ್ ಕೂಡ ಸೇರಿಕೊಂಡಿದ್ದಾರೆ.

ಹೌದು, ಸ್ವಾಗತಾ ಕೃಷ್ಣನ್ .. ಮಧುರೈನ ಮನ ಮೋಹಕ ಗಾಯಕಿ. ''ಬಿಗ್ ಬಾಸ್'' ಖ್ಯಾತಿಯ ಮಾಯಾ ಕೃಷ್ಣನ್ ಸಹೋದರಿ. ಕೇವಲ ಗಾಯಕಿ ಮಾತ್ರ ಅಲ್ಲ ಅತ್ಯುತ್ತಮವಾದ ವಯಲಿನ್ ವಾದಕಿ ಮತ್ತು ಸಂಗೀತ ನಿರ್ದೇಶಕಿಯೂ ಹೌದು ಸ್ವಾಗತಾ ಕೃಷ್ಣನ್.
ಶಾಸ್ತ್ರೀಯ ಸಂಗೀತದಲ್ಲಿಯೂ ಪರಿಣಿತಿ ಪಡೆದಿರುವ ಸ್ವಾಗತಾ 2017ರಲ್ಲಿ ಚಿತ್ರರಂಗಕ್ಕೆ ಬಂದರು. ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನದ ''ಮೇಯಾದ ಮಾನ'' ಚಿತ್ರದ ಹಾಡೊಂದಕ್ಕೆ ಧ್ವನಿಯಾಗುವ ಮೂಲಕ ಗಾಯಕಿಯಾಗಿ ತಮ್ಮ ವೃತ್ತಿ ಬದುಕು ಶುರು ಮಾಡಿದರು.
''ಐನೋ ನಿನ್ನಯ''.. ''ಮಧುರೈ ಫ್ಲೇವರ್''.. ''ಸಿಂಗಾರಿ ಸರಿಗಮ''.. ''ಪೊಣ್ಣು ಪಾರ್ಕ''.. ''ಎಂದುಂ ನಗೈಪ್ಪೋಂ''.. ಇವರ ಕೆಲ ಜನಪ್ರಿಯ ಹಾಡುಗಳು. ಚಿತ್ರರಂಗದಲ್ಲಿ ಇಲ್ಲಿಯವರೆಗೆ 50ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಸ್ವಾಗತಾ ತಮ್ಮದೇ ಆದ ಮ್ಯೂಸಿಕ್ ಸ್ಟುಡಿಯೋವನ್ನು ಕೂಡ ಹೊಂದಿದ್ದಾರೆ. ಕೆಲ ಆಲ್ಬಂಗಳನ್ನು ಕೂಡ ಹೊರ ತಂದಿದ್ದಾರೆ.
ಇಂಥಾ ಸ್ವಾಗತಾ ಕೃಷ್ಣನ್ ಈಗ ಖ್ಯಾತ ನಿರ್ದೇಶಕನಿಂದ ತಾವು ಲೈಂ*ಗಿಕ ಕಿರುಕುಳಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾರೆ. ಬೆಚ್ಚಿ ಬೀಳಿಸುವಂತಹ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಈ ಕುರಿತು ''ಸಿವರಂಜನಿ ಟಾಕ್ಸ್'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸ್ವಾಗತಾ ಕೃಷ್ಣನ್, ಆರಂಭದಲ್ಲಿ ನಾನು ಒಬ್ಬ ಖ್ಯಾತ ಸಂಗೀತ ನಿರ್ದೇಶಕರ ಬಳಿ ಕೆಲ ವರ್ಷ ಕೆಲಸ ಮಾಡಿದ್ದೇ ಎಂದು ಹೇಳಿದ್ದಾರೆ. ಆರಂಭದಲ್ಲಿ ಸಭ್ಯ ಮತ್ತು ಗುಣವಂತನಂತೆ ಕಂಡು ಬಂದ ಆ ವ್ಯಕ್ತಿ ಆ ನಂತರ ತನ್ನ ಬುದ್ದಿ ತೋರಿಸಲು ಶುರು ಮಾಡಿದ ಎಂದು ಹೇಳಿರುವ ಸ್ವಾಗತಾ ಖರ್ಚಿಗೆ ನನ್ನ ಬಳಿ ಆತ ಹಣ ಕೇಳಲು ಶುರು ಮಾಡಿದ ಎಂದಿದ್ದಾರೆ.
ನನ್ನಿಂದ ಲಕ್ಷಾಂತರ ಹಣವನ್ನು ಆ ಖ್ಯಾತ ಸಂಗೀತ ನಿರ್ದೇಶಕ ಪಡೆದ ಎಂದು ಹೇಳಿರುವ ಸ್ವಾಗತಾ ಅದೊಂದು ದಿನ ತನ್ನ ಸ್ಟುಡಿಯೋದಲ್ಲಿ ನನಗೆ ಲೈಂ*ಗಿಕ ಕಿರುಕುಳವನ್ನು ಕೂಡ ಆ ವ್ಯಕ್ತಿ ನೀಡಿದ ಎಂದು ಹೇಳಿದ್ಧಾರೆ. ಭಾವುಕರಾಗಿದ್ದಾರೆ.
7 ವರ್ಷಗಳ ಹಿಂದೆ ನಡೆದ ಘಟನೆ ಇದು. ಆಗ ನಾನು ಇನ್ನೂ ಚಿಕ್ಕವಳು, ಆದರೆ ಆತ ಇಂಡಸ್ಟ್ರೀಯಲ್ಲಿ ದೊಡ್ಡ ಪ್ರಭಾವಿ ವ್ಯಕ್ತಿ ಎಂದು ಹೇಳಿರುವ ಸ್ವಾಗತಾ ಈ ಕಾರಣಕ್ಕೆ ನಾನು ಪೊಲೀಸ್ ಕಂಪ್ಲೇಂಟ್ ಕೊಟ್ಟರೂ ಕೂಡ ಯಾರೂ ಆತನನ್ನು ಏನೂ ಮಾಡಲ್ಲ ಎಂಬ ಭಯ ನನ್ನಲ್ಲಿತ್ತು ಎಂದು ಹೇಳಿದ್ದಾರೆ. ಹೀಗಾಗಿಯೇ ನಾನು ಕಂಪ್ಲೇಟ್ ಕೊಡಲಿಲ್ಲ ಎಂದು ಕಣ್ಣೀರು ಹಾಕಿದ್ಧಾರೆ.
ಆತನಲ್ಲಿ ವಿಕೃತಿ ಎಷ್ಟಿತ್ತು ಅಂದರೆ ಲೈಂ*ಗಿಕ ಕಿರುಕುಳ ನೀಡಿದ ಸಿಸಿಟಿವಿ ದೃಶ್ಯಗಳನ್ನು ನನಗೆ ತೋರಿಸಿ ಆತ ಬ್ಲಾಕ್ ಮೇಲ್ ಮಾಡಲು ಕೂಡ ಶುರು ಮಾಡಿದ ಎಂದು ಹೇಳಿರುವ ಸ್ವಾಗತಾ, ಒಂದು ವೇಳೆ ನಾನು ಈ ವಿಡಿಯೋ ಬಿಡುಗಡೆ ಮಾಡಿದರೆ ನಿನ್ನ ಮಾನ ಮೂರು ಕಾಸಿಗೆ ಹರಾಜು ಆಗುತ್ತೆ ಎಂದು ಬೆದರಿಕೆ ಹಾಕಿದ್ದ ಎಂದು ಹೇಳಿದ್ದಾರೆ.

ಆದರೆ ನಾನು ಅವನ ಈ ಬೆದರಿಕೆಗೆ ಬಗ್ಗಲಿಲ್ಲ ಎಂದು ಹೇಳಿರುವ ಸ್ವಾಗತಾ, ಪರವಾಗಿಲ್ಲ ನೀವು ವಿಡಿಯೋ ಲೀಕ್ ಮಾಡಿ ನಾನು ಪೊಲೀಸರ ಬಳಿ ಹೋಗುತ್ತೇನೆ ಎಂದು ಹೇಳಿದ್ದೇ, ಇದಕ್ಕೆ ಭಯ ಬಿದ್ದ ಆ ವ್ಯಕ್ತಿ ಆ ನಂತರ ನನ್ನ ಕಾಲಿಗೆ ಬಿದ್ದ ಎಂದು ಹೇಳಿದ್ಧಾರೆ. ಇಷ್ಟೇ ಅಲ್ಲ ನನ್ನ ಮನೆಗೆ ಬಂದು ನನ್ನ ಅಕ್ಕ ಮಾಯಾ ಮತ್ತು ನನ್ನ ಸ್ನೇಹಿತರ ಎದುರು ಕೂಡ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಎಂದಿದ್ದಾರೆ.
ಹಾಗಂಥ ಇದು ಇಲ್ಲಿಗೆ ನಿಲ್ಲಲಿಲ್ಲ, ಅವನು ಕ್ಷಮೆ ಕೇಳಿ ಸುಮ್ಮನಾಗಲಿಲ್ಲ ಎಂದು ಹೇಳಿರುವ ಸ್ವಾಗತಾ ತನ್ನ ತಪ್ಪು ಮರೆಮಾಚಲು ಆತ ಸ್ವಾಗತಾಗೆ ಹುಚ್ಚು ಹಿಡಿದಿದೆ, ಆಕೆ ನನ್ನ ಮ್ಯೂಸಿಕ್ ಕಾರ್ಡ್ ಕದ್ದಿದ್ದಾಳೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಿದ, ಸುಳ್ಳು ಹೇಳಿದ ಎಂದು ಹೇಳಿದ್ದಾರೆ. ಇದರಿಂದ ಹೆದರಿದ ನನ್ನ ಪೋಷಕರು ನನಗೆ ಮದುವೆ ಮಾಡಲು ಮುಂದಾದರು ಎಂದು ಹೇಳಿರುವ ಸ್ವಾಗತಾ ಈ ಸಮಯದಲ್ಲಿ ನನ್ನ ಅಕ್ಕ ಮಾಯಾ ನನಗೆ ಧೈರ್ಯ ತುಂಬಿ ಸ್ವಲ್ಪ ದಿನ ಋಷಿಕೇಶಕ್ಕೆ ಕಳುಹಿಸಿಕೊಟ್ಟಿದ್ದರು ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ಈಗ ನಾನು ಈಗ ಸುಮ್ಮನಿರಲ್ಲ ಎಂದು ಕೂಡ ಹೇಳಿರುವ ಸ್ವಾಗತಾ ಕೃಷ್ಣನ್, ಆ ಸಂಗೀತ ನಿರ್ದೇಶಕ ಯಾರು ಅನ್ನೋದಕ್ಕೆ ಉತ್ತರ ನಾನು ಕಾನೂನಿನ ಮೂಲಕವೇ ನಿಮ್ಮೆಲ್ಲರಿಗೆ ಕೊಡುತ್ತೇನೆ, ಆತನ ಮುಖವಾಡ ನಿಮ್ಮೆಲ್ಲರ ಎದುರು ಕಳಚುತ್ತೇನೆ ಎಂದು ಹೇಳಿದ್ಧಾರೆ. ಆ ಖ್ಯಾತ ಸಂಗೀತ ನಿರ್ದೇಶಕ ಚೆನ್ನೈನ ಎಪ್ಸ್ಟೀನ್ ಎಂದು ಹೇಳಿದ್ದಾರೆ.
ಸ್ವಾಗತಾ ಅವರ ಈ ಸಂದರ್ಶನದಿಂದಾಗಿ ತಮಿಳು ಚಿತ್ರರಂಗದಲ್ಲಿ ಈಗ ಬೆಂಕಿ ಬಿದ್ದಂತಾಗಿದ್ದು, ಸ್ವಾಗತಾಗೆ ಕಿರುಕುಳ ನೀಡಿದ ಆ ಖ್ಯಾತ ಸಂಗೀತ ನಿರ್ದೇಶಕ ಯಾರು ಎನ್ನುವ ಚರ್ಚೆ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ಈ ಕುರಿತು ಚರ್ಚೆ ಕಾವೇರಿದ್ದು ಹಲವರು ತಮ್ಮ ತಮ್ಮ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications