ಇಂಡಿಯನ್ 2 ಸೋಲು, ಕಾಲಿವುಡ್ ಕೈ ಹಿಡಿಯುತ್ತಾವಾ ಈ ಸಿನಿಮಾಗಳು...!
ಕನ್ನಡ ಚಿತ್ರರಂಗದ ಕಥೆ ಬಿಡಿ ಈ ವರ್ಷ ಕಾಲಿವುಡ್‌ನವರ ಹಣೆ ಬರಹ ಕೂಡ ಸರಿ ಇಲ್ಲ. ಮಾಡಿರುವ ಒಂದು ಸಿನಿಮಾ ಕೂಡ ಗೆಲ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಒಂದಾದ ಮೇಲೊಂದು ಸಿನಿಮಾಗಳ ಸೋಲುಗಳಿಂದ ಕಂಗಾಲಾಗಿದ್ದ ಕಾಲಿವುಡ್‌ಗೆ ಇಂಡಿಯನ್ 2 ಗಾಯದ ಮೇಲೆ ಬರೆ ಎಳೆದಿದೆ.
ಹೌದು, ನಿಮಗೆ ಗೊತ್ತಿರಲಿ.. 2024ರ ಆರಂಭದಿಂದ ಇಲ್ಲಿಯವರೆಗೆ ತಮಿಳಿನಲ್ಲಿ ಹೆಚ್ಚು ಕಡಿಮೆ 100-130 ಸಿನಿಮಾ ತೆರೆಗೆ ಬಂದಿವೆ. ಆದರೆ.. ಈ ಪೈಕಿ ಗೆದ್ದು ಕೇಕೆ ಹಾಕಿದವರು 08-09 ಜನ ಮಾತ್ರ. ಮಿಕ್ಕಂತೆ ಉಳಿದವರಿಗೆಲ್ಲ ಸಿಕ್ಕಿದ್ದು ಸೋಲೇ.

ಹೀಗಾಗಿಯೇ ಇಂಡಿಯನ್ 2 ಮೂಲಕವಾದರೂ ಶುಕ್ರದಸೆ ಆರಂಭವಾಗುತ್ತೆ ಎಂದು ತಮಿಳು ಚಿತ್ರೋದ್ಯಮ ಅಂದುಕೊಂಡಿತ್ತು. ಆದರೆ. ಆ ಆಸೆಗೆ ಕೂಡ ತಣ್ಣೀರು ಬಿದ್ದಿದೆ. ಈ ಕಾರಣಕ್ಕೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರತ್ತ ಆಸೆಗಣ್ಣಿಂದ ತಮಿಳು ಸಿನಿಮಾ ಪಂಡಿತರು ನೋಡುತ್ತಿದ್ದಾರೆ.
ಹೌದು, ನಿಮಗೆ ಗೊತ್ತಿರಲಿ.. ರಜಿನಿಕಾಂತ್ ಅಭಿನಯದ ವೆಟ್ಟೈಯನ್ ಇದೇ ಅಕ್ಟೋಬರ್ 10ರಂದು ಬಿಡುಗಡೆಯಾಗಲಿದೆ. ಇನ್ನೂ ಹೇಳಿ ಕೇಳಿ ಇದು ತಲೈವಾ ಸಿನಿಮಾ. ಹೀಗಾಗಿ ಈ ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿವೆ. ಚಿತ್ರ ಗೆಲ್ಲುತ್ತೆ ಎನ್ನುವ ವಿಶ್ವಾಸ ಕೂಡ ಎಲ್ಲರಲ್ಲಿ ಇದೆ. ಆದರೆ, ಇದು ಅಂದುಕೊಂಡಷ್ಟು ಸುಲಭ ಅಲ್ಲ. ಯಾಕೆಂದರೆ.. ಅವತ್ತು ಸೂರ್ಯ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕಂಗುವ ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಫಲಿತಾಂಶ ಏನು ಬೇಕಾದರೂ ಆಗಬಹುದು. ಇವೆರಡು ಸಿನಿಮಾಗಳಲ್ಲಿ ಒಂದು ಸಿನಿಮಾ ಸೋತರೂ ಸೋಲಬಹುದು.

ಇವೆರಡು ಸಿನಿಮಾಗಳನ್ನು ಹೊರತು ಪಡಿಸಿದರೆ, ಧನುಷ್ ಅಭಿನಯದ ರಾಯನ್ ಇನ್ನೇನು ಒಂದೆರಡು ವಾರದಲ್ಲಿ ತೆರೆಗೆ ಬರಲಿದೆ. ರಾಯನ್ ಬೆನ್ನಲ್ಲಿಯೇ ಇಳಯ ದಳಫತಿ ವಿಜಯ್ ಅಭಿನಯದ ದಿ ಗೋಟ್ ಸಿನಿಮಾ ಬಿಡುಡಗೆಯಾಗಲಿದೆ. ಆ ನಂತರ ಚಿಯಾನ್ ವಿಕ್ರಮ್ ಅಭಿನಯದ ತಂಗಾಲನ್ ಕೂಡ ಇದೆ. ಗೊತ್ತಿಲ್ಲ.. ತಂಗಾಲನ್ ಎಲ್ಲರಕ್ಕಿಂತ ಬೇಗ ಬರಬಹುದು ಅಥವಾ ಬಿಡುಗಡೆ ಮುಂದಿನ ವರ್ಷಕ್ಕೆ ಮುಂದೂಡಿದರು ಮುಂದೂಡಬಹುದು.
ಈ ಸಿನಿಮಾಗಳನ್ನು ಹೊರತು ಪಡಿಸಿದರೆ ಕಾಲಿವುಡ್‌ನವರ ಕನಸು ನನಸು ಮಾಡುವ ಶಕ್ತಿ ತಲಾ ಎಂದೇ ಕರೆಸಿಕೊಳ್ಳುವ ಅಜಿತ್ ಕುಮಾರ್‌ಗೆ ಇದೆ. ಆದರೆ.. ಅಜಿತ್ ಮತ್ತು ವಿಜಯ್ ದುಷ್ಮನಿ ಈ ಬಾರಿ ಕೂಡ ವಿದಾ ಮುಯರ್ಚಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಉಳಿದಂತೆ ಶಿವ ಕಾರ್ತಿಕೆಯನ್ ಅಭಿನಯದ ಅಮರನ್ ಮತ್ತು ಕಾರ್ತಿ ಅಭಿನಯದ ವಾ ವಾತಿಯಾರ್ ಸಿನಿಮಾಗಳ ಮೇಲೆ ತಮಿಳು ಸಿನಿಮಾ ಪ್ರೇಮಿಗಳಿಗೆ ಚೂರು ಪಾರು ನಿರೀಕ್ಷೆ ಇದೆ. ಆದರೆ ಇವೆರಡು ಸಿನಿಮಾಗಳೂ ಬಿಡುಗಡೆಯಾಗುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಅವರಲ್ಲಿಯೂ ಇಲ್ಲ.
ಹೀಗೆ ಮೊದಲಾರ್ಧದಲ್ಲಿ ಸೋತು ಕಂಗಾಲಾದ ಕಾಲಿವುಡ್ ದ್ವೀತಿಯಾರ್ಧದಲ್ಲಿ ಈ ಚಿತ್ರಗಳ ಮೇಲೆ ನಿರೀಕ್ಷೆಯನ್ನಿಟ್ಟುಕೊಂಡಿದೆ. ಇಂಡಿಯನ್ 2 ನಿರೀಕ್ಷೆಯನ್ನು ಹುಸಿ ಮಾಡಿದ ಕಾರಣ ಮುಂದೆ ಬರಲಿರುವ ಈ 07-08 ಸಿನಿಮಾಗಳ ಭವಿಷ್ಯವನ್ನೂ ಈಗಲೇ ಹೇಳುವುದು ಕಷ್ಟ, ಆದರೂ ಪವಾಡ ನಡೆಯುವ ಭರವಸೆ ಕಾಲಿವುಡ್ಡಿಗೆ ಇದ್ದೇ ಇದೆ. ಆ ಭರವಸೆಯಲ್ಲಿಯೇ ಸದ್ಯಕ್ಕೆ ಮುಂದುವರಿಯುತ್ತಿದ್ದೇವೆ ಎನ್ನುವುದು ತಮಿಳು ಸಿನಿಮಾ ರಂಗದ ಪರ್ತಕರ್ತರೊಬ್ಬರ ಮನದ ಮಾತು. ಅಂದ್ಹಾಗೇ ಸತತ ಸೋಲು ನೋಡಿದರೂ, ಸೋಲಿನ ಸುಳಿಯಲ್ಲಿ ಸಿಲುಕಿದರೂ ಕೂಡ ಅಲ್ಲಿ ನಮ್ಮಂತೆ ಹಾದಿ-ಬೀದಿಯಲ್ಲಿ ಸ್ಟಾರ್‌ಗಳ್ಯಾರು ಚಿತ್ರರಂಗದ ಮಾನ-ಮರ್ಯಾದೆಯನ್ನುಈ 06 ತಿಂಗಳಿನಲ್ಲಿ ಮೂರು ಕಾಸಿಗೆ ಹರಾಜು ಹಾಕಲಿಲ್ಲ ಅನ್ನುವುದೇ ಸಮಾಧಾನದ ಸಂಗತಿ.


Click it and Unblock the Notifications











