Raghuthatha: ಹಿಂದಿ ಹೇರಿಕೆ ವಿರುದ್ಧ ಹೊಂಬಾಳೆ 'ರಘುತಥಾ': ಕನ್ನಡದಲ್ಲಿ ಸಿನಿಮಾ ಮಾಡಬೇಕಿತ್ತು ಎಂದು ಕನ್ನಡಿಗರ ಬೇಸರ
ಕನ್ನಡ ಮಾತ್ರವಲ್ಲದೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬೇರೆ ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಈಗಾಗಲೇ ಮಲಯಾಳಂನಲ್ಲಿ 'ಧೂಮಮ್' ಹಾಗೂ ತೆಲುಗಿನಲ್ಲಿ 'ಸಲಾರ್' ಸಿನಿಮಾಗಳು ಮೂಡಿ ಬಂದಿದ್ದವು. ಆದರೆ ಈ ಎರಡು ಸಿನಿಮಾಗಳು ಕನ್ನಡ ಸೇರಿದಂತೆ ಇತರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದವು.
ಹೊಂಬಾಳೆ ಸಂಸ್ಥೆ ನಿರ್ಮಾಣದ ತಮಿಳು ಸಿನಿಮಾ 'ರಘುತಥಾ' ಬಿಡುಗಡೆಗೆ ಸಜ್ಜಾಗಿದೆ. ಆದರೆ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ತಮಿಳಿನಲ್ಲಿ ಪಾತ್ರ ತೆರೆಕಾಣುವ ಲಕ್ಷಣಗಳು ಕಾಣುತ್ತಿದೆ. ಅದಕ್ಕೆ ಕಾರಣವೂ ಇದೆ ಎನ್ನಲಾಗ್ತಿದೆ. ಸುಮನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಲೀಡ್ ರೋಲ್‌ನಲ್ಲಿ ಮಿಂಚಿದ್ದಾರೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

'ರಘುತಥಾ' ಚಿತ್ರದಲ್ಲಿ ಕೀರ್ತಿ ಸುರೇಶ್ ಜೊತೆಗೆ ಎಂ. ಎಸ್ ಭಾಸ್ಕರ್, ರವೀಂದ್ರ ವಿಜಯ್, ದೇವದರ್ಶಿನಿ, ರಾಜೀವ್ ರವೀಂದ್ರನಾಥನ್, ಜಯಕುಮಾರ್, ಆನಂದ್‌ಸಾಮಿ ಸೇರಿದಂತೆ ಹಲವರು ನಟಿಸಿದ್ದಾರೆ. ಸೀನ್ ರೋಲ್ಡನ್ ಸಂಗೀತ, ಯಾಮಿನಿ ಯಜ್ಞಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.
ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC)ನಲ್ಲಿ ಕೆಡೆಟ್ ತರಬೇತಿ ಪಡೆಯುತ್ತಿರುವ ಕೀರ್ತಿ ಸುರೇಶ್ ಪಾತ್ರದೊಂದಿಗೆ 'ರಘುತಥಾ' ಟೀಸರ್ ಪ್ರಾರಂಭವಾಗುತ್ತದೆ. ಆದರೆ ಎನ್‌ಸಿಸಿ ಮಾಸ್ಟರ್ ಹಿಂದಿಯಲ್ಲಿ ತರಬೇತಿ ನೀಡುತ್ತಿರುವಾಗ ಕೀರ್ತಿ ಸುರೇಶ್ ನನಗೆ ಹಿಂದಿ ಬರುವುದಿಲ್ಲ, ತಮಿಳಿನಲ್ಲಿ ಹೇಳಿ ಸರ್ ಎನ್ನುತ್ತಾರೆ. ಅಲ್ಲಿಂದ ಟೀಸರ್ ಸಿನಿಮಾ ಕಥೆ ಏನು ಎನ್ನುವ ಸುಳಿವು ಕೊಡುತ್ತಾ ಸಾಗುತ್ತದೆ. ತಮಿಳು ಜನರ ಮೇಲೆ ಹಿಂದಿ ಹೇರಿಕೆಯ ಸುತ್ತ 'ರಘುತಥಾ' ಚಿತ್ರದ ಕಥೆ ಸುತ್ತುತ್ತದೆ ಅನ್ನೋದು ಗೊತ್ತಾಗುತ್ತದೆ.
ಹಿಂದಿ ಪರೀಕ್ಷೆ ಬರೆದರೆ ಮಾತ್ರ ಬಡ್ತಿ ಸಿಗುತ್ತಾ? ಎಂದು ನಾಯಕಿ ಹೇಳುವ ಮತ್ತೊಂದು ಸನ್ನಿವೇಶ ಕೂಡ ಟೀಸರ್‌ನಲ್ಲಿದೆ. ಹಲವು ವರ್ಷಗಳಿಂದ ತಮಿಳುನಾಡಿನ ಜನ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬರುತ್ತಿದ್ದಾರೆ. ತಮಿಳುನಾಡು ಸರ್ಕಾರಗಳು ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಇವೆ. ಶಾಲೆಗಳಲ್ಲಿ ಕೇಂದ್ರದ ತ್ರಿಭಾಷೆ ಶಿಕ್ಷಣ ನೀತಿಯನ್ನು ಕೂಡ ತಮಿಳುನಾಡು ಒಪ್ಪಲು ಸಿದ್ಧವಿಲ್ಲ. ಇಂತಹ ಸಮಯದಲ್ಲಿ 'ರಘುತಾಥ' ಸಿನಿಮಾ ಕಥೆ ಕುತೂಹಲ ಮೂಡಿಸಿದೆ.
ಕಳೆದ ವರ್ಷ ತಮಿಳುನಾಡು ವಿಧಾನಸಭೆಯಲ್ಲಿ ಹಿಂದೆ ಹೇರಿಕೆ ವಿರೋಧಿ ಗೊತ್ತುವಳಿಯನ್ನು ಅಂಗೀಕರಿಸಲಾಗಿತ್ತು. ಇದೆಲ್ಲದರ ನಡುವೆ ಹಿಂದಿ ಹೇರಿಕೆ ವಿಚಾರವನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ಮಿಸಿರುವ 'ರಘುತಥಾ' ಸಿನಿಮಾ ಮುಂದೆ ಯಾವ ರೀತಿ ಸಂಚಲನ ಸೃಷ್ಟಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಒಂದು ಗಂಭೀರ ವಿಚಾರವನ್ನು ಹಾಸ್ಯದ ಲೇಪನದೊಂದಿಗೆ ಚಿತ್ರತಂಡ ಮುಂದಾಗಿದೆ. 80ರ ದಶಕದಲ್ಲಿ ಈ ಸಿನಿಮಾ ಕಥೆ ಸಾಗುತ್ತದೆ.
ಚಿತ್ರದಲ್ಲಿ ಮಾತೃಭಾಷೆ ತಮಿಳು ಬಿಟ್ಟು ಬೇರೆ ಭಾಷೆ ಅರ್ಥವಾಗದೇ ಸಮಸ್ಯೆ ಎದುರಿಸುವ, ಅದರಲ್ಲೂ ಹಿಂದಿ ಹೇರಿಕೆ ವಿರುದ್ಧ ತಿರುಗಿ ಬೀಳುವ ನಾಯಕಿ ಕಯಲ್‌ವಿಳಿ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಸದ್ಯ ಹಿಂದಿ ಹೇರಿಕೆ ವಿರೋಧಿ ಕಥಾಹಂದರದ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಭಾಷಾ- ರಾಜಕೀಯ ಚರ್ಚೆ ಹುಟ್ಟಾಕ್ಕಿದೆ. ಕೆಲವರು ಇದು ಬರೀ ಸಿನಿಮಾ. 80ರ ದಶಕದ ಕಥೆ. ಇದನ್ನು ಕೇವಲ ಸಿನಿಮಾ ಆಗಿ ನೋಡಿ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಈ ಬಗ್ಗೆ ಚಕಾರ ಎತ್ತಿದ್ದಾರೆ.

ಸಾಕಷ್ಟು ಮಹಿಳಾ ತಂತ್ರಜ್ಞರು 'ರಘುತಥಾ' ಚಿತ್ರದಲ್ಲಿ ಕೆಲಸ ಮಾಡಿರುವುದು ವಿಶೇಷ. ಇನ್ನು ಕನ್ನಡದಲ್ಲಿ ಸಿನಿಮಾ ಬಿಡುಗಡೆ ಆಗುತ್ತಾ ಇಲ್ವಾ? ಎನ್ನುವ ಚರ್ಚೆ ಶುರುವಾಗಿದೆ. ಈ ಹಿಂದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬರುತ್ತದೆ ಎನ್ನಲಾಗಿತ್ತು. ಆದರೆ ಟೀಸರ್‌ನಲ್ಲಿ ಆ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಇನ್ನು ತಮಿಳು ನೇಟಿವಿಟಿ ಕಥೆ ಆಗಿರುವುದರಿಂದ ಬೇರೆ ಭಾಷೆಗೆ ಡಬ್ ಆಗುವುದು ಅನುಮಾನ ಎನ್ನುವ ಮಾತುಗಳು ಕೇಳಿಬರ್ತಿದೆ.
ಸದ್ಯ ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ಪ್ರಯತ್ನಗಳು ಹೆಚ್ಚಾಗಿದೆ. ಇದನ್ನು ಸಾಕಷ್ಟು ಜನ ವಿರೋಧಿಸುತ್ತಿದ್ದಾರೆ. ಹೊಂಬಾಳೆ ಸಂಸ್ಥೆ ಈ ಚಿತ್ರವನ್ನು ಕನ್ನಡದಲ್ಲಿ ಮಾಡಬೇಕಿತ್ತು. ಕೊನೆ ಪಕ್ಷ ಕನ್ನಡಕ್ಕೆ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ. ಈ ಕಥೆ ತಮಿಳುನಾಡಿಗಿಂತ ಕರ್ನಾಟಕಕ್ಕೆ ಈಗ ಪ್ರಸ್ತುತ ಎನಿಸುತ್ತಿದೆ ಎಂದು ಹೇಳುತ್ತಿದ್ದಾರೆ.


Click it and Unblock the Notifications