'ರಾಘವೇಂದ್ರ ಸ್ಟೋರ್ಸ್' ನಂತರ ಹೊಂಬಾಳೆ ಸಂಸ್ಥೆಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧ
ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ರೂಪಾಯಿಯನ್ನು ಮನರಂಜನಾ ಕ್ಷೇತ್ರದಲ್ಲಿ ತೊಡಗಿಸುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಇದೀಗ ಹೊಂಬಾಳೆ ಸಂಸ್ಥೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಶೀಘ್ರದಲ್ಲೇ ಬಾಲಿವುಡ್ ಸಿನಿಮಾ ಆರಂಭಿಸುವ ಲೆಕ್ಕಾಚಾರವೂ ಇದೆ. ಇದೆಲ್ಲದರ ನಡುವೆ ಸಂಸ್ಥೆಯ ಮತ್ತೊಂದು ಚಿತ್ರದ ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ.
ತೆಲುಗಿನಲ್ಲಿ 'ಸಲಾರ್', ಮಲಯಾಳಂನಲ್ಲಿ 'ಟೈಸನ್' ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ಕೈಗೆತ್ತಿಕೊಂಡಿದೆ. ಕನ್ನಡದಲ್ಲಿ 'ಕಾಂತಾರ'- 2, 'ರಿಚರ್ಡ್ ಆಂಟನಿ', 'ಯುವ', 'ಧೂಮಂ', 'ಬಘೀರ' ಸೇರಿದಂತೆ ಒಂದಷ್ಟು ಸಿನಿಮಾಗಳು ಶುರುವಾಗಿದ್ದರೆ ಮತ್ತೊಂದಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಮುಂದೆ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲೂ ಸಿನಿಮಾಗಳು ಮೂಡಿ ಬರಲಿವೆ. ಭಾರತೀಯ ಚಿತ್ರರಂಗದಲ್ಲೇ ಬಹಳ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಅನ್ನಿಸಿಕೊಂಡಿದೆ.

ಇತ್ತೀಚೆಗಷ್ಟೆ 'ಧೂಮಂ' ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿತ್ತು. ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ನಟಿಸಿದ್ದಾರೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಪ್ರಭಾಸ್ ನಟನೆಯ 'ಸಲಾರ್' ಚಿತ್ರೀಕರಣ ಭರದಿಂದ ಸಾಗುತ್ತಿದೆ. 'ರಿಚರ್ಡ್ ಆಂಟನಿ' ಸಿನಿಮಾ ಕಥೆ ಬರೆಯಲು ರಕ್ಷಿತ್ ಶೆಟ್ಟಿ ಅಮೆರಿಕಾಗೆ ತೆರಳಿದ್ದಾರೆ. 'ಕಾಂತಾರ' ಪ್ರೀಕ್ವೆಲ್ ಕಥೆ ಫೈನಲ್ ಆಗಿದೆ.
'ರಘುತಾತ' ಚಿತ್ರೀಕರಣ ಮುಕ್ತಾಯ
ದೊಡ್ಡ ದೊಡ್ಡ ಸಿನಿಮಾಗಳ ನಡುವೆ ಕೆಲ ದಿನಗಳ ಹಿಂದೆ ಹೊಂಬಾಳೆ ಸಂಸ್ಥೆ ಒಂದು ಮಹಿಳಾ ಪ್ರಧಾನ ಸಿನಿಮಾ ಕೈಗೆತ್ತಿಕೊಂಡಿತ್ತು. ತಮಿಳಿನಲ್ಲಿ 'ರಘುತಾತ' ಎನ್ನುವ ಸಿನಿಮಾ ಆರಂಭಿಸಿತ್ತು. ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸದ್ದಿಲ್ಲದೇ ಈ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಕೊನೆ ದಿನ ಸೆಟ್‌ನಲ್ಲಿ ಕೇಕ್ ಕತ್ತರಿಸಿ ಚಿತ್ರತಂಡ ಖುಷಿಪಟ್ಟಿದೆ. ಆ ಫೋಟೊಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ.
'ರಘುತಾತ' ತಾರಾಗಣ
ಸುಮನ್ ಕುಮಾರ್ 'ರಘುತಾತ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕೀರ್ತಿ ಜೊತೆಗೆ ಎಂ. ಎಸ್ ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದಸಾಮಿ ಮತ್ತು ರಾಜೇಶ್ ಬಾಲಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯಾಮಿನಿ ಯಜ್ಞಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ಬಹಳ ಬೇಗ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಅಷ್ಟೇ ಬೇಗ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸಿನಿಮಾ ಪ್ರೇಕ್ಷಕರ ಮುಂದೆ ತರಲಿದೆ.

ಶಿವಣ್ಣ ಜೊತೆ ಹೊಂಬಾಳೆ ಸಿನಿಮಾ
ಇತ್ತೀಚೆಗೆ ಶಿವಣ್ಣ ನಟನೆಯ 'ಬೈರತಿ ರಣಗಲ್' ಸಿನಿಮಾ ಮುಹೂರ್ತ ನೆರವೇರಿತ್ತು. ಚಿತ್ರದ ಮುಹೂರ್ತ ಸಮಾರಂಭಕ್ಕೆ ನಿರ್ಮಾಪಕ ಕಾರ್ತಿಕ್ ಗೌಡ ಆಗಮಿಸಿದ್ದರು. ಈ ವೇಳೆ ಸೆಂಚುರಿ ಸ್ಟಾರ್ ಮತನಾಡುತ್ತಾ ಮುಂದೆ ಕಾರ್ತಿಕ್ ಅವರ ಬ್ಯಾನರ್‌ನಲ್ಲೂ ಒಂದು ಸಿನಿಮಾ ಮಾಡುತ್ತಿರುವುದಾಗಿ ಎಂದಿದ್ದಾರೆ. ಅದೊಂದು ಆಕ್ಷನ್ ಸಿನಿಮಾ ಎಂದು ಬಾಯಿತಪ್ಪಿ ಹೇಳಿಬಿಟ್ಟಿದ್ದರು.
ಕಿಚ್ಚನ ಜೊತೆಗೂ ಸಿನಿಮಾ
ಕನ್ನಡದ ಸ್ಟಾರ್ ನಟರ ಕಾಂಬಿನೇಷನ್‌ನಲ್ಲಿ ಹೊಂಬಾಳೆ ಸಂಸ್ಥೆ ಸಿನಿಮಾಗಳನ್ನು ಮಾಡ್ತಿದೆ. ಕೆಲ ದಿನಗಳ ಹಿಂದೆ ಸುದೀಪ್- ಕಾರ್ತಿಕ್ ಗೌಡ ಒಟ್ಟಿಗೆ ಕಾಣಿಸಿಕೊಂಡಿದ್ದ ಫೋಟೊ ವೈರಲ್ ಆಗಿತ್ತು. ಇದನ್ನು ನೋಡಿ ಸುದೀಪ್ ಹೊಂಬಾಳೆ ಬ್ಯಾನರ್ ಚಿತ್ರದಲ್ಲಿ ನಟಿಸ್ತಾರೆ ಎನ್ನಲಾಗಿತ್ತು. ಈಗಾಗಲೇ ಕಿಚ್ಚ 3 ಕಥೆಗಳನ್ನು ಫೈನಲ್ ಮಾಡಿದ್ದು ಅದರಲ್ಲಿ ಒಂದು ಹೊಂಬಾಳೆ ಸಂಸ್ಥೆ ಸಿನಿಮಾ ಆಗಿರುವ ಸಾಧ್ಯತೆಯಿದೆ. ತಮಿಳು ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನದಲ್ಲೂ ಒಂದು ಸಿನಿಮಾ ಘೋಷಣೆ ಆಗಿದೆ.


Click it and Unblock the Notifications











