ವಿಜಯ್ ಜೊತೆ ನಾನಿದ್ದೇನೆ, ಆದರೆ.. ; ದಳಪತಿ ಸರ್ಕಾರದ 30 ದಿನಗಳ ಆಡಳಿತದ ಬಗ್ಗೆ ಲತಾ ರಜನಿಕಾಂತ್ ಅಚ್ಚರಿಯ ಹೇಳಿಕೆ
ರಜನಿಕಾಂತ್ ಭಾರತದ ಸೂಪರ್ ಸ್ಟಾರ್. ಇಡೀ ವಿಶ್ವಕ್ಕೆ ಗೊತ್ತಿರುವ ಮಹಾನಾಯಕ. ಚೆನ್ನೈ-ಬೆಂಗಳೂರು ಸೇರಿದಂತೆ ಭಾರತದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ರಜನಿ ಒಡೆತನದ ಆಸ್ತಿಗಳಿವೆ. ಇಡೀ ಜಗತ್ತಿನಲ್ಲಿ ರಜನಿಗೆ ಹೊಂದಿರುವ ಅಗಣಿತ ಆಸ್ತಿಯ ಬಗ್ಗೆ ಸ್ವತಃ ಅವರಿಗೇ ಲೆಕ್ಕ ಗೊತ್ತಿದೆಯೋ ಇಲ್ಲವೋ? ಗೊತ್ತಿಲ್ಲ.
ಇಳಿ ವಯಸ್ಸಿನಲ್ಲಿಯೂ ಒಪ್ಪಿಕೊಂಡ ಪಾತ್ರ ಮತ್ತು ಚಿತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಇಂದಿನ ಹದಿ ಹರೆಯದ ಹೀರೋಗಳೂ ಕೂಡ ನಾಚುವಂತೆ ಅದ್ಭುತವಾಗಿ ಅಭಿನಯಿಸುವ ರಜನಿಕಾಂತ್ ಜೊತೆಗೆ ಹೋಲಿಕೆ ಮಾಡೋದಕ್ಕೆ ಬೇರಾವುದೇ ಸ್ಟಾರ್ ಗಳಿಗಿರಲಿ ಬೇರೆ ಚಿತ್ರೋದ್ಯಮಗಳಿಗೂ ಆಗೋದಿಲ್ಲ. ಒಂದು ಸಿನಿಮಾ ಇಂಡಸ್ಟ್ರಿ ಒಂದು ವರ್ಷವಿಡಿ ದುಡಿಯೋದನ್ನ ರಜನಿ ನಾಮಬಲದ ಒಂದೇ ಒಂದು ಸಿನಿಮಾ ದುಡಿಯುತ್ವೆ. ಅದು, ರಜನಿ ಎಂಬ ಹೆಸರಿಗಿರುವ ಶಕ್ತಿ.

ಇಂಥಾ ರಜನಿಕಾಂತ್ ತಮ್ಮ ಬದುಕಿನ ಪ್ರಯಾಣದಲ್ಲಿ ಎಲ್ಲವನ್ನೂ ಸಾಧಿಸಿ, ಭೇದಿಸಿದ್ದಾರೆ. ಆದರೆ.. ಇವರ ಪಾಲಿಗೆ ಅದೊಂದು ಕನಸು ಮಾತ್ರ ಹಾಗೇ ಉಳಿದುಕೊಂಡುಬಿಟ್ಟಿದೆ. ಅದು ರಜನಿ ಈಗ ಅಲ್ಲ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದಾಗಲೇ ಕಂಡ ಕನಸು. ತಮಿಳುನಾಡಿನ ಮುಖ್ಯಮಂತ್ರಿಯಾಗುವ ಕನಸು.
ಕೆಲ ವರ್ಷಗಳ ಹಿಂದೆ ತಮ್ಮ ಈ ಹಿಂದಿನ ಕನಸಿಗೆ ರಜನಿ ಮರು ಜೀವ ತುಂಬಿದ್ದರಾದ್ರೂ ಅದು ಅಷ್ಟೇ ಬೇಗ ಕೊನೆಯಾಯ್ತು. ಕನಸನ್ನ ನನಸು ಮಾಡಿಕೊಳ್ಳುವ ದಿಸೆಯಲ್ಲಿ ರಜನಿಕಾಂತ್ ಹೆಜ್ಜೆ ಇಟ್ಟಿದ್ದರಾದ್ರೂ ದೇಹ ಹಾಗೂ ಆರೋಗ್ಯ ರಜನಿಯ ಕನಸಿಗೆ ಬೆಂಬಲ ನೀಡಲಿಲ್ಲ. ಹೀಗಾಗಿಯೇ ರಾಜಕೀಯಕ್ಕೆ ಬಂದು ಇನ್ನೇನು ತಮಿಳುನಾಡು ಸಿ.ಎಂ ಆಗೇಬಿಡ್ತಾರೆ ಅಂತ ಭರವಸೆ ಮೂಡಿಸಿದ್ದ ರಜನಿ ಆಟ ಶುರುವಾಗುವ ಮುನ್ನವೇ ಸೋಲೊಪ್ಪಿಕೊಂಡರು.
ಎಲ್ಲರಿಗೆ ಗೊತ್ತಿರುವಂತೆ ರಜನಿಯ ಈ ಸೋಲು ವಿಜಯ್ ಗೆಲುವಿಗೆ ಕಾರಣವಾಯ್ತು. ಸದ್ಯ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಒಂದು ತಿಂಗಳ ಆಡಳಿತವನ್ನು ಕೂಡ ಪೂರ್ಣಗೊಳಿಸಿದ್ಧಾರೆ. ಹೀಗಿರುವಾಗ ರಜನಿಯ ಪತ್ನಿ ಲತಾ ಸಂದರ್ಶನವೊಂದರಲ್ಲಿ ವಿಜಯ್ ಸರ್ಕಾರದ ಕುರಿತು ಮಾತನಾಡಿದ್ದಾರೆ. ತುಂಬಾನೇ ಸೂಕ್ಷ್ಮವಾದ ವಿಚಾರ ಇದು ಎಂದು ಹೇಳುತ್ತಲೇ ವಿಜಯ್ ಬಳಿ ಮನವಿಯೊಂದನ್ನು ಕೂಡ ಮಾಡಿಕೊಂಡಿದ್ದಾರೆ.
ಹೌದು, ಅಸಲಿಗೆ ಕೆಲ ದಿನಗಳ ಹಿಂದೆ ರಜನಿಕಾಂತ್ ಅವರ ಪತ್ನಿ ಲತಾ ಸಾಮಾಜಿಕ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ''ಮಕ್ಕಳ್ ಮೇಡೈ'' (ಜನರ ವೇದಿಕೆ) ಎಂಬ ಹೊಸ ಜನತಾ ಸಂಘಟನೆಯನ್ನು ಆರಂಭಿಸಿದ್ದಾರೆ. ಇವರ ಈ ನಡೆಯಿಂದ ಹಲವರು ತಮ್ಮ ರಾಜಕೀಯದ ರಂಗ ಪ್ರವೇಶಕ್ಕೆ ಲತಾ ವೇದಿಕೆ ಸಿದ್ದ ಮಾಡಿಕೊಳ್ಳುತ್ತಿದ್ದಾರೆ ಎಂದುಕೊಂಡಿದ್ದರು. ಲತಾ ಅವರ ಈ ನಿರ್ಧಾರದ ಹಿಂದೆ ರಜನಿಕಾಂತ್ ಯೋಚನೆ-ಯೋಜನೆ ಇರಬಹುದು ಎಂದು ಭಾವಿಸಿದ್ದರು.

ಆದರೆ, ಲತಾ ಹೇಳುವುದೇ ಬೇರೆ. ಈ ಕುರಿತು ಹಿರಿಯ ಪತ್ರಕರ್ತರಂಗರಾಜ್ ಪಾಂಡೆ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲತಾ ತಮಗೆ ಯಾವುದೇ ರಾಜಕೀಯ ಹುದ್ದೆ ಅಥವಾ ಅಧಿಕಾರದ ಮೇಲೆ ಕಿಂಚಿತ್ತೂ ಆಸೆ ಇಲ್ಲ ಎಂದು ಹೇಳಿದ್ಧಾರೆ.
ರಾಜಕೀಯವನ್ನು ಮೀರಿ, ತಳಮಟ್ಟದ ಸಾಮಾಜಿಕ ಸುಧಾರಣೆಗಳಿಗೆ ಒತ್ತು ನೀಡುವುದಷ್ಟೇ ನನ್ನ ಆದ್ಯತೆ ಎಂದು ಹೇಳಿರುವ ಲತಾ ರಜನಿಕಾಂತ್ ಸುರಕ್ಷಿತ ಹಾಗೂ ಸಮಾನ ಸಮಾಜವನ್ನು ನಿರ್ಮಿಸುವುದು ಮಾತ್ರವೇ ''ಮಕ್ಕಳ್ ಮೇಡೈ'' ಯ ಮುಖ್ಯ ಉದ್ದೇಶ ಎಂದು ಹೇಳಿದ್ಧಾರೆ. ಮುಂದಿನ ತಲೆಮಾರಿನವರೇ ಈ ಪ್ರಯತ್ನವನ್ನು ಮುನ್ನಡೆಸಬೇಕು, ನಾನು ಕೇವಲ ಒಬ್ಬ ಮಾರ್ಗದರ್ಶಕಿಯಾಗಿ ಮಾತ್ರ ಇರುತ್ತೇನೆ ಎಂದು ಕೂಡ ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ವಿಜಯ್ ಆಡಳಿತ ವೈಖರಿ ಕುರಿತು ಕೇಳಲಾದ ಪ್ರಶ್ನೆಗೆ ತುಂಬಾನೇ ಚಾಣಾಕ್ಷತನದಿಂದ ಉತ್ತರ ನೀಡಿರುವ ಲತಾ ರಜನಿಕಾಂತ್, ಇಂದಿನ ಪರಿಸ್ಥಿತಿಯಲ್ಲಿ, ನಾನು ಅವರೊಂದಿಗಿದ್ದೇನೆ ಎಂದಿದ್ದಾರೆ. ಇದೇ ಸಮಯದಲ್ಲಿ ತಾವು ನೀಡುವ ಹೇಳಿಕೆ ತುಂಬಾನೇ ಸೂಕ್ಷ್ಮ ವಿಚಾರ ಆಗಿ ಬದಲಾಗುತ್ತೆ ಎಂದು ಹೇಳಿರುವ ಲತಾ, ಸರ್ಕಾರದ ಬಗ್ಗೆ ವಿಮರ್ಶೆ ಮಾಡಲು ನಿರಾಕರಿಸಿದ್ದಾರೆ. ಮುಗುಳು ನಗೆ ಬೀರಿ "ನೋ ಕಮೆಂಟ್ಸ್" ಎಂದು ಹೇಳಿ ಜಾರಿಕೊಂಡಿದ್ಧಾರೆ.
ಒಬ್ಬ ಸಾಮಾನ್ಯ ಪ್ರಜೆಯಾಗಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಯನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದು ಹೇಳಿರುವ ಲತಾ, ಕೇವಲ 30 ದಿನಗಳ ಅಲ್ಪಾವಧಿಯನ್ನು ನೋಡಿ ಹೊಸದಾಗಿ ರಚನೆಯಾದ ಸರ್ಕಾರದ ಸಾಮರ್ಥ್ಯ ಅಥವಾ ಭವಿಷ್ಯದ ಬಗ್ಗೆ ಯಾವುದೇ ಅಭಿಪ್ರಾಯವನ್ನು ನೀಡುವುದು ಸರಿಯಲ್ಲ ಎಂದಿದ್ದಾರೆ. ಇವರ ಈ ತಟಸ್ಥ ನಡೆ ರಾಜಕೀಯ ವಲಯದಲ್ಲಿ ಸದ್ಯ ಭಾರಿ ವಿಶ್ಲೇಷಣೆಗಳಿಗೆ ಕಾರಣವಾಗಿದೆ.
ಮುಂದುವರೆದು ಮಹಿಳೆಯರ ರಕ್ಷಣೆಗಾಗಿ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಜಾರಿಗೆ ತಂದಿರುವ ನೂತನ ''ಸಿಂಗಪ್ಪೆಣ್'' (ಸಿಂಹಿಣಿ) ಸುರಕ್ಷತಾ ಪಡೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಲತಾ ರಜನಿಕಾಂತ್, ಇಂದಿನ ಕಾಲಘಟ್ಟಕ್ಕೆ ಅತ್ಯಂತ ಪ್ರಮುಖವಾದ ಮತ್ತು ಅಷ್ಟೇ ಅಗತ್ಯವಿರುವ ಯೋಜನೆ ಅದು ಎಂದು ಹೇಳಿದ್ಧಾರೆ.
ಮಹಿಳೆಯರ ಸುರಕ್ಷತೆಗಾಗಿ ಸರ್ಕಾರವೇ ಮುಂಚೂಣಿಯಲ್ಲಿ ನಿಂತು ಈ ರೀತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದ ಲತಾ, ಈ ಕಾಲದಲ್ಲಿ ಬೀದಿ ಬೀದಿಯಲ್ಲೂ ನಿರಂತರವಾಗಿ ಕಾವಲು ಕಾಯುವುದು ತುಂಬಾನೇ ಅಗತ್ಯವಾಗಿದೆ ಎಂದಿದ್ದಾರೆ.
ಆದಾಗ್ಯೂ, ಅವರು ಕೇವಲ ಸರ್ಕಾರವನ್ನು ಹೊಗಳದ ಲತಾ ರಜನಿಕಾಂತ್, ಪ್ರಸ್ತುತ ಮಹಿಳೆಯರ ರಕ್ಷಣೆಗಾಗಿ ನಿಯೋಜಿಸಲಾಗಿರುವ ಗಸ್ತು ವಾಹನಗಳ ಸಂಖ್ಯೆ ತೀರಾ ಕಡಿಮೆಯಿದೆ, ತಮಿಳುನಾಡು ಸರ್ಕಾರವು ತಕ್ಷಣವೇ ಇಂತಹ ರಕ್ಷಣಾ ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ಧಾರೆ. ರಾತ್ರಿ ಹೊತ್ತು ಗಸ್ತು ತಿರುಗುವುದನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂಬ ಬೇಡಿಕೆಯನ್ನು ವಿಜಯ್ ಸರ್ಕಾರದ ಮುಂದಿಟ್ಟಿದ್ದಾರೆ.


Click it and Unblock the Notifications