Vijay Antony: "ನನ್ನ ಮಗಳ ಜೊತೆ ನಾನು ಸತ್ತುಹೋದೆ": ವಿಜಯ್ ಆಂಟೋನಿ ಭಾವನಾತ್ಮಕ ಪತ್ರ
ತಮಿಳು ನಟ ವಿಜಯ್ ಆಂಟೋನಿ ಹಿರಿಯ ಪುತ್ರಿ ಮೀರಾ ಆಂಟೋನಿ(16) ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತೇ ಇದೆ. ಸೆಪ್ಟೆಂಬರ್ 19ರಂದು ಚೆನ್ನೈನ ತನ್ನ ನಿವಾಸದಲ್ಲಿ ಆಕೆ ಮುಂಜಾನೆ 3 ಗಂಟೆಗೆ ನೇಣು ಬಿಗಿದುಕೊಂಡಿದ್ದಳು. ಮಾನಸಿಕ ಒತ್ತಡದಿಂದ ಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಮಗಳ ಆತ್ಮಹತ್ಯೆಯಿಂದ ವಿಜಯ್ ಆಂಟೋನಿ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಚಿತ್ರರಂಗದವರು, ಅಭಿಮಾನಿಗಳು ವಿಜಯ್ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಮಗಳ ಸಾವಿನ ಬಳಿಕ ವಿಜಯ್ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. "ಮಗಳ ಜೊತೆಗೆ ನಾನು ಸತ್ತೇ ಹೋದೆ" ಎಂದು ಭಾವುಕರಾಗಿದ್ದಾರೆ. ಇನ್ನು ಮುಂದೆ ತಾನು ಮಾಡಲಿರುವ ಒಳ್ಳೆಯ ಕೆಲಸಕ್ಕೆ ಮಗಳ ಹೆಸರಿಡುತ್ತೇನೆ ಎಂದಿದ್ದಾರೆ.

"ನನ್ನ ಹಿರಿಯ ಮಗಳು ಈ ಪ್ರಪಂಚಕ್ಕಿಂತ ಉತ್ತಮವಾದ ಸ್ಥಳಕ್ಕೆ ಹೋಗಿದ್ದಾಳೆ. ಮೀರಾ ಎಲ್ಲರನ್ನು ಪ್ರೀತಿಯಿಂದ ನೋಡುತ್ತಿದ್ದಳು. ಧೈರ್ಯಶಾಲಿ ಆಗಿದ್ದಳು. ಜಾತಿ, ಧರ್ಮ, ಹಣ, ಹೊಟ್ಟೆಕಿಚ್ಚು, ನೋವು, ಬಡತನ, ದ್ವೇಷ ಇಲ್ಲದ ಶಾಂತಿಯುತ ಜಾಗಕ್ಕೆ ಆಕೆ ಈಗ ಹೋಗಿದ್ದಾಳೆ. ನನ್ನ ಮಗಳು ಮೀರಾ ಈಗಲೂ ನನ್ನೊಂದಿಗೆ ಮಾತನಾಡುತ್ತಾಳೆ. ನಾನು ಅವಳೊಂದಿಗೆ ಸತ್ತುಹೋದೆ. ಇನ್ನು ಮುಂದೆ ನಾನು ಅವರ ಹೆಸರಿನಲ್ಲೇ ಪ್ರತಿಯೊಂದು ಸೇವಾ ಕಾರ್ಯಕ್ರಮ ಆರಂಭಿಸುತ್ತೇನೆ" ಎಂದು ವಿಜಯ್ ಆಂಟೋನಿ ಪತ್ರ ಬರೆದಿದ್ದಾರೆ.
ಇನ್ನು ಮೀರಾ ಆತ್ಮಹತ್ಯೆ ತಮಿಳು ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಮಾನಸಿಕ ಒತ್ತಡದಿಂದ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಘಾತ ತಂದಿದೆ. ಮೀರಾಳ ಅಂತ್ಯಕ್ರಿಯೆಯನ್ನು ಸೆಪ್ಟೆಂಬರ್ 20 ರಂದು ಚೆನ್ನೈನಲ್ಲಿ ನಡೆಸಲಾಯಿತು. ಆಕೆ ಚೆನ್ನೈನ ಸೇಕ್ರೆಡ್ ಹಾರ್ಟ್ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಳು.
ವಿದ್ಯಾಭ್ಯಾಸ ಹೊರತಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದಳು. ಆದರೆ ಮೀರಾ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಳು ಎನ್ನಲಾಗ್ತಿದೆ. ವಿಜಯ್ ಆಂಟೋನಿ ಮತ್ತು ಫಾತಿಮಾ 2006ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳು ಮೀರಾ ಮತ್ತು ಕಿರಿಯ ಮಗಳು ಲಾರಾ ವಿಜಯ್ ಆಂಟೋನಿ. 'ಪಿಚ್ಚಕಾರನ್', 'ವೇಟೈಕಾರನ್', 'ನಾನ್', 'ಸಲೀಂ' ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ವಿಜಯ್ ನಟಿಸಿದ್ದಾರೆ.


Click it and Unblock the Notifications











