ಥಿಯೇಟರ್‌ನಲ್ಲಿ ವಿಜಯ್ ಸಿನಿಮಾ ನೋಡ್ತಾ ನೋಡ್ತಾ 15 ನಿಮಿಷಕ್ಕೆ ನಿದ್ರೆಗೆ ಜಾರಿದ್ದೆ
ಪ್ರೇಕ್ಷಕರು 200 ರೂಪಾಯಿ ದುಡ್ಡು, 3 ಗಂಟೆ ಸಮಯ ವ್ಯಯಿಸಿ ಒಂದು ಸಿನಿಮಾ ನೋಡುತ್ತಾರೆ. ಅಂತಹ ಪ್ರೇಕ್ಷಕರಿಗೆ ಮನರಂಜನೆ ಅಗತ್ಯ. ಇವತ್ತಿನ ಕಾಲದಲ್ಲಿ ಒಂದು ಒಳ್ಳೆ ಸಿನಿಮಾ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿಬಿಟ್ಟಿದೆ. 2 ಗಂಟೆ ನೋಡುಗರನ್ನು ಎಂಗೇಜಿಂಗ್ ಆಗಿ ಇಟ್ಟುಕೊಳ್ಳುವುದು ಕಷ್ಟವೇ ಸರಿ.
ನೂರಾರು ಕೋಟಿ ಸುರಿದು ಮಾಡಿದ ಸಿನಿಮಾಗಳನ್ನು ಪ್ರೇಕ್ಷಕರು ಚೆನ್ನಾಗಿಲ್ಲ ಎಂದುಬಿಡುತ್ತಾರೆ. ಸಿನಿಮಾ ಸಕ್ಸಸ್ ಸೂತ್ರ ಗೊತ್ತಿಲ್ಲದೇ ಫಿಲ್ಮ್ ಮೇಕರ್ಸ್ ತಲೆ ಕೆಡಿಸಿಕೊಳ್ಳುವಂತಾಗಿದೆ. ಭಾರೀ ನಿರೀಕ್ಷೆ ಇಟ್ಟುಕೊಂಡು ಥಿಯೇಟರ್‌ಗೆ ಹೋದ ಸಿನಿಮಾಗಳು ಬೇಸರ ಮೂಡಿಸುವ ಉದಾಹರಣೆಗಳಿವೆ. ಕೆಲವರು ಸಿನಿಮಾ ನೋಡ್ತಾ ನೋಡ್ತಾ ನಿದ್ರೆಗೆ ಜಾರಿ ಬಿಡುತ್ತಾರೆ. ಅಷ್ಟರಮಟ್ಟಿಗೆ ಚಿತ್ರಗಳು ಆಸಕ್ತಿ ಕಳೆದುಕೊಂಡುಬಿಡುತ್ತವೆ.

ಅಷ್ಟು ದೊಡ್ಡ ಥಿಯೇಟರ್‌ನಲ್ಲಿ ನೂರಾರು ಜನರ ನಡುವೆ ಡಿಟಿಎಸ್ ಸೌಂಡ್ ಮಧ್ಯೆ ಕೂಡ ಪ್ರೇಕ್ಷಕರಿಗೆ ನಿದ್ರೆ ಹೇಗೆ ಬರುತ್ತೆ ಎಂದು ಅಣಕವಾಡುವವರು ಇದ್ದಾರೆ. ಸಿನಿಮಾ ಚೆನ್ನಾಗಿಲ್ಲ ಅಂದ್ರೆ ನಿದ್ರೆ ಮಾಡದೇ ಏನು ಮಾಡುವುದು ಎನ್ನುವವರಿಗೆ ಲೆಕ್ಕವಿಲ್ಲ. ತಮಿಳು ನಟ ದಳಪತಿ ವಿಜಯ್ ನಟನೆಯ ಸಿನಿಮಾ ನೋಡ್ತಾ ನೋಡ್ತಾ ನಾನು ನಿದ್ರೆಗೆ ಜಾರಿಬಿಟ್ಟೆ ಎಂದು ತಮಿಳು ನಟಿ ಹೇಳಿರುವ ಮಾತುಗಳು ವೈರಲ್ ಆಗ್ತಿದೆ.
ತಮಿಳು ನಟಿ ಅದಿತಿ ಬಾಲನ್ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಆಕೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಭಾಗಿ ಆಗಿದ್ದರು. ಥಿಯೇಟರ್‌ನಲ್ಲಿ ಸ್ನೇಹಿತರ ಜೊತೆ 'ಬೀಸ್ಟ್' ಸಿನಿಮಾ ನೋಡಲು ಹೋಗಿದ್ದೆ. ನೋಡ್ತಾ ನೋಡ್ತಾ 15 ನಿಮಿಷಕ್ಕೆ ನಿದ್ರೆಗೆ ಜಾರಿಬಿಟ್ಟೆ ಎಂದು ಹೇಳಿದ್ದಾರೆ. ಆಕೆಯ ಹೇಳಿಕೆ ಬಗ್ಗೆ ದಳಪತಿ ವಿಜಯ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯ ಪ್ರೇಕ್ಷಕರು ಈ ರೀತಿ ಒಬ್ಬ ನಟನ ಸಿನಿಮಾ ಬಗ್ಗೆ ವ್ಯಂಗ್ಯ ಮಾಡಿ ಮಾತನಾಡುವುದು ಪರವಾಗಿಲ್ಲ. ಆದರೆ ಚಿತ್ರರಂಗದಲ್ಲೇ ಇರುವ ನಟಿಯೊಬ್ಬರು ಈ ರೀತಿ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬೇರೆ ನಟನ ಅಭಿಮಾನಿಗಳು ಅದಿತಿ ಹೇಳಿಕೆ ವೈರಲ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಅಂದಹಾಗೆ ಅದಿತಿ ಕೂಡ ದಳಪತಿ ವಿಜಯ್ ಅವರ ದೊಡ್ಡ ಅಭಿಮಾನಿ.
ಬಹಳ ಹಿಂದಿನಿಂದಲೂ ನಾನು ವಿಜಯ್ ಸಿನಿಮಾಗಳನ್ನು ನೋಡುತ್ತಾ ಬರುತ್ತಿದ್ದೇನೆ. 20 ವರ್ಷಗಳ ಹಿಂದೆಯೇ ಅವರ ಸಿನಿಮಾಗಳಿಗೆ ಅಭಿಮಾನಿ ಆದವಳು ನಾನು ಎಂದು ಅದಿತಿ ಬಾಲನ್ ಹೇಳಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ವಿಜಯ್ ನಟಿಸಿದ 'ಬೀಸ್ಟ್' ಸಿನಿಮಾ ತೆರೆಗೆ ಬಂದಿತ್ತು. ನೆಲ್ಸನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. 'KGF-2 ಎದುರು ಬಂದಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು.
'ಬೀಸ್ಟ್' ಸಿನಿಮಾ ಬಗ್ಗೆ ಮಾತನಾಡುತ್ತಾ ಅದಿತಿ ಬಾಲನ್, "ನಾನು ಸ್ನೇಹಿತರ ಜೊತೆ ಪಾಂಡಿಚೇರಿಯ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಹೋಗಿದ್ದೆ. ಆರಂಭದ 15 ನಿಮಿಷ ಸಿನಿಮಾ ನೋಡಿ ಸಖತ್ ಎಂಜಾಯ್ ಮಾಡ್ದೆ. ಕೂಗಾಡಿ, ಜೈಕಾರ ಹಾಕಿ ಸಂಭ್ರಮಿಸಿದೆವು. ಚಿತ್ರಮಂದಿರದಲ್ಲಿದ್ದವರು ನಮ್ಮನ್ನೇ ನೋಡುತ್ತಿದ್ದರು. 15 ನಿಮಿಷಗಳ ಬಳಿಕ ಸೈಲೆಂಟ್ ಆಗಿ ನಿದ್ರೆಗೆ ಜಾರಿಬಿಟ್ಟಿದ್ದೆ. ನಮ್ಮ ಸ್ನೇಹಿತರು ಅದರ ವೀಡಿಯೋ ಮಾಡಿ ವ್ಯಂಗ್ಯ ಮಾಡಿದ್ದರು" ಎಂದು ಹೇಳಿಕೊಂಡಿದ್ದಾರೆ.
ಚೆನ್ನೈನಲ್ಲಿ ಹುಟ್ಟಿ ಬೆಳೆದ ಅದಿತಿ ಬಾಲನ್ ತಮಿಳಿನ 'ಅರುವಿ' ಚಿತ್ರದ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟರು. ಮುಂದೆ 'ಕುಟ್ಟಿ ಸ್ಟೋರಿ', 'ಪಡವೆಟ್ಟು', 'ಶಾಕುಂತಲಂ', 'ಕ್ಯಾಪ್ಟನ್ ಮಿಲ್ಲರ್' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಂದ ತೆಲುಗಿನ 'ಸರಿಪೋದ ಶನಿವಾರಂ' ಚಿತ್ರದಲ್ಲಿ ಕೂಡ ಆಕೆ ಬಣ್ಣ ಹಚ್ಚಿದ್ದರು.


Click it and Unblock the Notifications











