ಮದುವೆ ಬಗ್ಗೆ ಆದಷ್ಟು ಬೇಗ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದ ಕೀರ್ತಿ ಸುರೇಶ್
ನಟಿ ಕೀರ್ತಿ ಸುರೇಶ್ ಮದುವೆ ಯಾವಾಗ ಎಂಬ ಪ್ರಶ್ನೆ ಹಲವಾರು ದಿನಗಳಿಂದ ಕೇಳಿಬರುತ್ತಲೇ ಇದೆ. ನಟಿ ಭಾಗಿಯಾಗಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಈ ಪ್ರಶ್ನೆ ಎದುರಾಗಿದ್ದು, ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರೂ ಸಹ ಬೆಂಬಿಡದೇ ಪ್ರಶ್ನೆಗಳನ್ನು ಕೇಳಲಾಗಿದೆ.
ಇನ್ನು ಇತ್ತೀಚೆಗಷ್ಟೆ ನಟಿ ಕೀರ್ತಿ ಸುರೇಶ್ ದುಬೈ ಮೂಲದ ರಿಯಲ್ ಎಸ್ಟೇಟ್ ಬ್ಯುಸಿನೆಸ್‌ಮ್ಯಾನ್ ಜತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಸುದ್ದಿ ಕುರಿತು ಕೀರ್ತಿ ಸುರೇಶ್ ಬೇಸರ ವ್ಯಕ್ತಪಡಿಸಿದ್ದರು.

ಅಲ್ಲದೇ ಈ ಬ್ಯುಸಿನೆಸ್‌ಮ್ಯಾನ್ ಕೀರ್ತಿ ಸುರೇಶ್ ಫ್ಯಾಮಿಲಿ ಫ್ರೆಂಡ್ ಆಗಿದ್ದು, ಇಬ್ಬರ ಮದುವೆ ಪ್ರೀತಿ ಗೀತಿ ಏನಿಲ್ಲ ಎಂಬುದು ಸಹ ಬಹಿರಂಗವಾಗಿತ್ತು. ಹೀಗೆ ನಡೆದು ಕೆಲ ದಿನಗಳು ಕಳೆಯುವಷ್ಟರಲ್ಲಿಯೇ ಕೀರ್ತಿ ಸುರೇಶ್ ಮದುವೆ ವಿಚಾರವಾಗಿ ಮತ್ತಷ್ಟು ಸುದ್ದಿಗಳು ಹರಿದಾಡತೊಡಗಿವೆ.
ಅಲ್ಲದೇ ಕೀರ್ತಿ ಸುರೇಶ್ ನಿನ್ನೆ ನಡೆದ ತನ್ನ ಮುಂದಿನ ಚಿತ್ರ ಮಾಮನ್ನನ್ ಪ್ರೆಸ್ ಮೀಟ್ ಕಾರ್ಯಕ್ರಮದಲ್ಲಿ ಸಹ ಈ ವಿಷಯ ಪ್ರಸ್ತಾಪವಾಗಿದೆ. ಪತ್ರಕರ್ತರೊಬ್ಬರು ನಟಿಯ ಮದುವೆ ವಿಚಾರವಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಕೀರ್ತಿ ಸುರೇಶ್ ಆದಷ್ಟು ಬೇಗ ತನ್ನ ಮದುವೆಯ ಬಗೆಗಿನ ಮಾಹಿತಿಯನ್ನು ತಾನೇ ಹಂಚಿಕೊಳ್ಳಲಿದ್ದು, ಅಲ್ಲಿಯವರೆಗೂ ಸುಖಾಸುಮ್ಮನೆ ಸುದ್ದಿಗಳನ್ನು ಮಾಡಬಾರದಂತೆ ಮನವಿ ಮಾಡಿದ್ದಾರೆ.
ಈ ವರ್ಷ ನಾನಿ ಜತೆ ದಸರಾ ಚಿತ್ರದಲ್ಲಿ ನಟಿಸಿ ಭರ್ಜರಿ ಯಶಸ್ಸು ಗಳಿಸಿರುವ ಕೀರ್ತಿ ಸುರೇಶ್ ಕೈನಲ್ಲಿ ಸದ್ಯ ಹಲವಾರು ಚಿತ್ರಗಳಿದ್ದು, ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಚಿರಂಜೀವಿ ನಟನೆಯ ಭೋಲಾ ಶಂಕರ್ ಚಿತ್ರದಲ್ಲಿ ಚಿರಂಜೀವಿ ತಂಗಿಯ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.
ಜತೆಗೆ ಸೈರನ್, ರಿವಾಲ್ವರ್ ರೈತ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ರಘು ತಾತ ಚಿತ್ರಗಳಲ್ಲಿಯೂ ಸಹ ಕೀರ್ತಿ ಸುರೇಶ್ ನಟಿಸಲಿದ್ದಾರೆ.


Click it and Unblock the Notifications