World Cup 2023: ಈ ಬಾರಿಯ ವಿಶ್ವಕಪ್ ಫೈನಲ್ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಭವಿಷ್ಯ ಹೀಗಿದೆ
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದ್ದು, ಒಂದು ಪಂದ್ಯದಲ್ಲಿಯೂ ಸೋಲು ಕಂಡಿಲ್ಲ. ಒಂದಾದ ನಂತರ ಒಂದು ಪಂದ್ಯಗಳನ್ನು ಗೆಲುತ್ತಾ ವಿಶ್ವಕಪ್‌ಗೆ ಮುತ್ತಿಡಲು ಹೊರಟಿದೆ. ಕೊನೆಯ ಮೆಟ್ಟಿಲಲ್ಲಿ ಇರುವ ರೋಹಿತ್ ಶರ್ಮಾ ತಂಡಕ್ಕೆ ಇಡೀ ದೇಶದ ಜನರ ಹಾರೈಕೆಗಳಿವೆ.
ಇನ್ನು, ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಬಾಲಿವುಡ್, ಸ್ಯಾಂಡಲ್‌ವುಡ್ ತಾರೆಗಳಂತಯೇ ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ತಮ್ಮ ಪತ್ನಿ ಲತಾ ರಜನಿಕಾಂತ್ ಮತ್ತು ರವಿಚಂದರ್ ರಾಘವೇಂದ್ರ ಅವರೊಂದಿಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಾಜರಿದ್ದರು.

ಕ್ರಿಕೆಟ್ ಬಗ್ಗೆ ರಜನಿಕಾಂತ್ ಪ್ರೀತಿ
ಕ್ರಿಕೆಟ್ ಬಗ್ಗೆ ಅತ್ಯಂತ ಪ್ರೀತಿ ಹೊಂದಿರುವ ನಟ ರಜನಿಕಾಂತ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಈ ಸೆಮಿಫೈನಲ್‌ನಲ್ಲಿ ಭಾರತ ಗೆದ್ದು ಬೀಗಿದ್ದು ಫೈನಲ್‌ಗೆ ಕಾಲಿಟ್ಟಿದೆ. ಇಂಡಿಯಾ ಗೆದ್ದ ನಂತರ ರಜನಿಕಾಂತ್ ಮುಂಬೈನಿಂದ ಚೆನ್ನೈಗೆ ಹಿಂತಿರುಗಿದ್ದರು. ಅಲ್ಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಪಂದ್ಯದ ಬಗ್ಗೆ ಮಾತನಾಡಿದ್ದರು
ಫೈನಲ್ ತಲುಪಿರುವ ಭಾರತ ತಂಡದ ಬಗ್ಗೆ ಮಾತನಾಡಿದ್ದ ಅವರು, "ಸೆಮಿ ಫೈನಲ್ ಪಂದ್ಯದ ಒಂದೂವರೆ ಗಂಟೆಗಳ ಕಾಲ ಸ್ವಲ್ಪ ಆತಂಕವಾಗಿತ್ತು. ಆದರೆ, ನ್ಯೂಜಿಲ್ಯಾಂಡ್ ವಿಕೆಟ್‌ಗಳು ಬೀಳಲು ಆರಂಭಿಸಿದ ಬಳಿಕ ಸರಿಯಾಯಿತು. ಏನೇ ಆದರೂ ಈ ಬಾರಿ 100% ವಿಶ್ವಕಪ್ ನಮ್ಮದೇ" ಎಂದು ಹೇಳಿದ್ದಾರೆ.
ನೇರವಾಗಿ ಪಂದ್ಯ ನೋಡುವ ನಟ ರಜನಿಕಾಂತ್
ಇತ್ತೀಚಿಗೆ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದ ವೇಳೆ ಸೆಲೆಬ್ರಿಟಿಗಳ ಸಂಖ್ಯೆ ಹೆಚ್ಚಾಗಿಯೇ ಇತ್ತು. ಮುಂಬೈನಲ್ಲಿ ಪಂದ್ಯ ನಡೆದ ಕಾರಣ ಹಲವು ಟಾಪ್ ಬಾಲಿವುಡ್ ನಟ, ನಟಿಯರು ಈ ಸೆಮಿ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಇದರ ಜೊತೆಗೆ ನಟ ರಜನಿಕಾಂತ್ ಚೆನ್ನೈನಿಂದ ಮುಂಬೈಗೆ ಪಂದ್ಯ ನೋಡಲು ತೆರಳಿದ್ದು ಸಕತ್ ಚರ್ಚೆಯಾಗಿತ್ತು.
ನಟ ರಜನಿಕಾಂತ್ ಅವರಿಗೆ ಕ್ರಿಕೆಟ್ ಮೇಲೆ ಎಲ್ಲಿಲ್ಲದ ಪ್ರೀತಿ, ಹೀಗಾಗಿ ಅವರಿಗೆ ಆಟವನ್ನು ಕ್ರೀಡಾಂಗಣದಲ್ಲಿ ನೇರವಾಗಿ ನೋಡುವುದು ತುಂಬಾ ಇಷ್ಟ. ಹೀಗಾಗಿಯೇ ಅವರು ಹಲವು ಬಾರಿ ಕ್ರೀಡಾಂಗಣಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಡಾಂಗಣದಲ್ಲಿ ಕಾಣಿಸಿಕೊಂಡಾಗ ಭಾರತ ತಂಡ ಸಕತ್ ಕಮಾಲ್ ಮಾಡಿದೆ.

ಭಾರತ ತಂಡಕ್ಕೆ ರಜನಿಕಾಂತ್ ಲಕ್ಕಿ!
2011 ರಲ್ಲಿ, ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಒಟ್ಟಾಗಿ ಆಯೋಜಿಸಿದ್ದ ಐಸಿಸಿ ವಿಶ್ವಕಪ್‌ನಲ್ಲಿ, ಎಂಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾದ ಗೆಲುವು ಕ್ರಿಕೆಟ್ ಇತಿಹಾಸದಲ್ಲಿ ಕೆತ್ತಲಾಗಿದೆ. ಆ ವರ್ಷ, ಭಾರತ ಮತ್ತು ಶ್ರೀಲಂಕಾ ನಡುವಿನ ಅಂತಿಮ ಪಂದ್ಯದ ಸಂದರ್ಭದಲ್ಲಿ, ಪಂದ್ಯವನ್ನು ವೀಕ್ಷಿಸಲು ರಜನಿಕಾಂತ್ ಸ್ಥಳದಲ್ಲಿ ಹಾಜರಿದ್ದರು. ಆಗ ಕೂಡ ಭಾರತವು 6 ವಿಕೆಟ್‌ಗಳಿಂದ ಭರ್ಜರಿ ಜಯ ಗಳಿಸಿತ್ತು.
ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿನ ಅದೃಷ್ಟದ ವ್ಯಕ್ತಿ ಎಂದು ಈಗಾಗಲೇ ಹಲವರು ರಜನಿಕಾಂತ್ ಅವರನ್ನು ಹೊಗಳಲು ಪ್ರಾರಂಭಿಸಿದ್ದಾರೆ . ಇದೇ ವೇಳೆ ನಟ ಕೂಡ ಇಂಡಿಯಾ ನೂರಕ್ಕೆ ನೂರಷ್ಟು ವಿಶ್ವಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಹಲವು ಮಂದಿ ಭಾರತವು ಈ ಬಾರಿ ವಿಶ್ವಕಪ್ ಗೆದ್ದು ಬೀಗಲಿದೆ ಎಂದೇ ನಂಬಿದ್ದಾರೆ.
ರಜನಿಕಾಂತ್ ಸಿನಿಮಾಗಳು
ರಜನಿಕಾಂತ್ ಅವರು ತಮ್ಮ ಪುತ್ರಿ ಮತ್ತು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಲಾಲ್ ಸಲಾಂ ಚಿತ್ರದ ಮೂಲಕ ಮುಂದಿನ ವರ್ಷ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ರಜನಿಕಾಂತ್ ಅತಿಥಿ ಪಾತ್ರದಲ್ಲಿದ್ದಾರೆ.
ಇದಲ್ಲದೆ, ರಜನಿಕಾಂತ್, ಜೈಭೀಮ್ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾತ್ಕಾಲಿಕವಾಗಿ ಈ ಸಿನಿಮಾಕ್ಕೆ ತಲೈವರ್ 170 ಎಂದು ಕರೆಯಲಾಗಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ ಮತ್ತು ಫಹಾದ್ ಫಾಸಿಲ್ ಸೇರಿದಂತೆ ಪ್ರಮುಖ ತಾರಾಗಣವಿದೆ.


Click it and Unblock the Notifications











