ಹೇಗಿದೆ 'ಇಡ್ಲಿ ಕಡೇ' ಟ್ರೈಲರ್? 'ಕಾಂತಾರ- 1' ಎದುರು ಧನುಷ್ ಸಿನಿಮಾ ನಿಲ್ಲುತ್ತಾ?
ದಸರಾ ಸಂಭ್ರಮದಲ್ಲಿ ಧನುಷ್ ನಿರ್ಮಿಸಿ ನಿರ್ದೇಶಿಸಿ ನಟಿಸಿರುವ 'ಇಡ್ಲಿ ಕಡೇ' ಸಿನಿಮಾ ಬಿಡುಗಡೆ ಆಗ್ತಿದೆ. ಕನ್ನಡದ 'ಕಾಂತಾರ- 1' ಸಿನಿಮಾ ಎದುರು ಬಾಕ್ಸಾಫೀಸ್‌ನಲ್ಲಿ ಕದನಕ್ಕೆ ಇಳಿಯುತ್ತಿದೆ. ಅಕ್ಟೋಬರ್ 1ರಂದು 'ಇಡ್ಲಿ ಕಡೇ' ಸಿನಿಮಾ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ತೆರೆಗಪ್ಪಳಿಸುತ್ತಿದೆ. ಅಕ್ಟೋಬರ್ 2ರಂದು ಕನ್ನಡದ 'ಕಾಂತಾರ'-1 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿದೆ.
'ಇಡ್ಲಿ ಕಡೇ' ಚಿತ್ರದಲ್ಲಿ ನಿತ್ಯಾ ಮೆನನ್ ನಾಯಕಿಯಾಗಿ ನಟಿಸಿದ್ದಾರೆ. ಧನುಷ್ ತಂದೆ ಪಾತ್ರದಲ್ಲಿ ರಾಜ್‌ಕಿರಣ್ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಸತ್ಯರಾಜ್, ಶಾಲಿನಿ ಪಾಂಡೆ , ಪಾರ್ಥಿಬನ್, ಸಮುದ್ರ ಖನಿ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಕೋಯಂಬತ್ತೂರಿನಲ್ಲಿ ಬಹಳ ಅದ್ಧೂರಿಯಾಗಿ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ಫೀಲ್ ಗುಡ್ ಸಿನಿಮಾದ ಸಣ್ಣ ಝಲಕ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಕೂಡ 'ಇಡ್ಲಿ ಕಡೇ' ಚಿತ್ರದ ಟ್ರೈಲರ್ ಲಿಂಕ್ ಶೇರ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿದೆ. ರಾಯನ್ ಬಳಿಕ ಧನುಷ್ ನಿರ್ದೇಶನದ ಮತ್ತೊಂದು ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ. ಟ್ರೈಲರ್ ನೋಡಿದರೆ ಸಿನಿಮಾ ಕಥೆ ಏನಿರಬಹುದು ಎನ್ನುವ ಅಂದಾಜು ಸಿಗುತ್ತದೆ.
ಹುಟ್ಟೂರಿನಲ್ಲಿ ನಾಯಕ ಮುರುಗನ್(ಧನುಷ್) ತಂದೆ ಶಿವನೇಶನ್(ರಾಜ್‌ಕಿರಣ್) ಇಡ್ಲಿ ಅಂಗಡಿ ನಡೆಸುತ್ತಿರುತ್ತಾರೆ. ಗ್ರೈಂಡರ್, ಮಿಕ್ಸಿ ಬೇಡ ಒರಳುಕಲ್ಲಿನಲ್ಲಿ ಅಕ್ಕಿ ರುಬ್ಬಿ, ಚಟ್ನಿ ಅರೆದು ಕೊಟ್ಟರೆ ರುಚಿ, ಸ್ವಾದ ಎಂದು ನಂಬಿದವರು. ಆ ಇಡ್ಲಿ ಅಂಗಡಿಯೇ ಅವರಿಗೆ ಸರ್ವಸ್ವ. ತಂದೆಯನ್ನು ನೋಡುತ್ತಾ ಬೆಳೆದ ಮುರುಗನ್ ಮುಂದೆ ದೊಡ್ಡ ಫುಡ್ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಕಂಪನಿಯಲ್ಲಿ ಉನ್ನತ ಸ್ಥಾನಕ್ಕೇರಿದರೂ ಹುಟ್ಟೂರಿನ ಇಡ್ಲಿ ಅಂಗಡಿ ಅವನಿಗೆ ನೆನಪಾಗುತ್ತಿರುತ್ತದೆ. ದೊಡ್ಡ ಕಂಪನಿ ಕೆಲಸ ಬಿಟ್ಟು ತಂದೆ ಕಾಲಾನಂತರ ಮುಚ್ಚಿದ್ದ ಇಡ್ಲಿ ಅಂಗಡಿಯನ್ನು ಪುನರಾರಂಭಿಸಿತ್ತಾನೆ? ಅದಕ್ಕೆ ಕಾರಣ ಏನು? ಎನ್ನುವುದನ್ನು ತೆರೆಮೇಲೆ ನೋಡಬೇಕು.
ಮೇಲ್ನೋಟಕ್ಕೆ ಇಷ್ಟೇ ಕಥೆ ಅನ್ನಿಸಿದರೂ ಅದನ್ನು ಬಹಳ ಭಾವನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದಂತೆ ಕಾಣುತ್ತಿದೆ. ಧನುಷ್ ನಟನೆಯ 'VIP' ಸಿನಿಮಾ ರೀತಿಯ ಕಮರ್ಷಿಯಲ್ ಅಂಶಗಳ ಜೊತೆಗೆ 'ಮೇಯಳಗನ್' ರೀತಿಯ ಭಾವತೀವ್ರತೆ ಸಿನಿಮಾದಲ್ಲಿ ಇರುತ್ತದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮೊದಲ ನೋಟದಲ್ಲಿ ಟ್ರೈಲರ್ ಗಮನ ಸೆಳೆದಿದೆ. ಸಿಕ್ಕಾಪಟ್ಟೆ ಸ್ಲೋ ಸಿನಿಮಾ ಎನ್ನುವಂತಿದೆ. ಚಿತ್ರಮಂದಿರಗಳಲ್ಲಿ ಗೆಲ್ಲುತ್ತಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಒಟ್ಟಾರೆ 'ಇಡ್ಲಿ ಕಡೇ' ಟ್ರೈಲರ್ ಪಾಸ್ ಆಗಿದೆ. ಅಕ್ಟೋಬರ್ 1ರಂದು ಸಿನಿಮಾ ತೆರೆಗೆ ಬರಲಿದೆ. ಅತ್ತ ತಮಿಳುನಾಡಿನಲ್ಲಿ ಕೂಡ ರಿಷಬ್ ಶೆಟ್ಟಿ 'ಕಾಂತಾರ- 1' ಸಿನಿಮಾ ದೊಡ್ಡದಾಗಿ ತೆರೆಗಪ್ಪಳಿಸುತ್ತಿದೆ. ದಸರಾ ಸಂಭ್ರಮದಲ್ಲಿ ಯಾವ ಚಿತ್ರಕ್ಕೆ ಎಷ್ಟು ಅಂಕ ಸಿಗುತ್ತದೆ ಎಂದು ಕಾದು ನೋಡಬೇಕಿದೆ. 33 ಕೋಟಿ ರೂ.ಗೆ ತಮಿಳು ವರ್ಷನ್ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ.
ದೇಶ ವಿದೇಶಗಳಲ್ಲಿ 'ಇಡ್ಲಿ ಕಡೇ' ಸಿನಿಮಾ ಬಿಡುಗಡೆ ಆಗ್ತಿದೆ. ಹಾಗಾಗಿ ಎಲ್ಲಾ ಕಡೆ 'ಕಾಂತಾರ- 1' ಎದುರು ಪೈಪೋಟಿಹೆ ಇಳಿಯಲಿದೆ. ಈ ಎರಡೂ ಸಿನಿಮಾಗಳಿಗೂ ಮುನ್ನ ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ಬಿಡುಗಡೆ ಆಗಲಿದೆ. ಹಾಗಾಗಿ ಯಾವ ಚಿತ್ರಕ್ಕೆ ಹೆಚ್ಚು ಸ್ಕ್ರೀನ್ ಎಲ್ಲೆಲ್ಲಿ ಕಬಳಿಸುತ್ತದೆ? ಯಾವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಹಿಂದೆ 'ಕಾಂತಾರ' ಸಿನಿಮಾ ನೋಡಿ ಧನುಷ್ ಮೆಚ್ಚಿಕೊಂಡಿದ್ದರು. ರಿಷಬ್ ಶೆಟ್ಟಿ ಪ್ರತಿಭೆಗೆ ಬಹುಪರಾಕ್ ಎಂದಿದ್ದರು. ಇಡೀ ತಂಡಕ್ಕೆ ಶುಭ ಕೋರಿದ್ದರು. ರಿಷಬ್ ಶೆಟ್ಟಿ 'ಇಡ್ಲಿ ಕಡೇ' ಟ್ರೈಲರ್ ಶೇರ್ ಮಾಡುತ್ತಿದ್ದಂತೆ ಇದು ನೆನಪಾಗುತ್ತಿದೆ. ಇನ್ನು ಈಗಾಗಲೇ 'ಕಾಂತಾರ-1' ಸಿನಿಮಾ ಸೆನ್ಸಾರ್ ಕಂಪ್ಲೀಟ್ ಆಗಿದ್ದು ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











