'ಬೇಗ ಬಾ ಬಾಲು'....ಎಸ್‌ಪಿಬಿ ಕುರಿತು ಭಾವುಕರಾದ ಇಳಯರಾಜಾ
ಕೊರೊನಾ ವೈರಸ್‌ನಿಂದ ಬಳಲುತ್ತಿರುವ ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚೆನ್ನೈ ಎಂಜಿಎಂ ಹೆಲ್ತ್ ಕೇರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Recommended Video
ಎಸ್‌ಪಿಬಿ ಆದಷ್ಟೂ ಬೇಗ ಚೇತರಿಕೆ ಕಾಣಲಿ, ಅವರ ಆರೋಗ್ಯ ಸುಧಾರಿಸಲಿ ಎಂದು ಕೋಟ್ಯಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಹಾಗೆಯೇ ಇಡೀ ಭಾರತೀಯ ಚಿತ್ರರಂಗ ಎಸ್‌ಪಿಬಿ ಗುಣಮುಖರಾಗಲಿದೆ ಎಂದು ಆಶಿಸುತ್ತಿದೆ.
ಇಷ್ಟು ಜನರ ಮಧ್ಯೆ ಸಂಗೀತ ನಿರ್ದೇಶಕ ಇಳಯರಾಜ ಅವರ ವಿಡಿಯೋ ಸಂದೇಶ ಬಹಳ ವಿಶೇಷವೆನಿಸಿದೆ. ಆತ್ಮೀಯ ಗೆಳೆಯ ಬಾಲಸುಬ್ರಹ್ಮಣ್ಯಂ ಬೇಗ ಗುಣಮುಖರಾಗಲಿ ಎಂದು ಇಳಯರಾಜಾ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ...

ಬಾಲು ಬೇಗೆ ಎದ್ದು ಬಾ.....
'ಬಾಲು ಬೇಗ ಎದ್ದು ಬಾ....ನಿನಗಾಗಿ ಕಾದಿರುವೆ....' ಹೀಗೆ ಮಾತು ಆರಂಭಿಸಿರುವ ಇಳಯರಾಜಾ ಅವರ ಧ್ವನಿಯಲ್ಲಿ ನೋವು ಕಾಣುತ್ತಿದೆ. ಕಣ್ಣಂಚಲಿ ನೀರಿದೆ, ಧ್ವನಿಯಲ್ಲಿ ಭಯ ಇದೆ. ಎಸ್‌ಪಿಬಿ ಮತ್ತು ಇಳಯರಾಜಾ ಬಹಳ ಆತ್ಮೀಯರು. ನೂರಾರು ಹಾಡುಗಳಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅನೇಕ ವೇದಿಕೆಗಳಲ್ಲಿ ಒಟ್ಟಿಗೆ ಕಾರ್ಯಕ್ರಮ ನೀಡಿದ್ದಾರೆ. ಕೆಲವು ವಿಚಾರಕ್ಕೆ ಮನಸ್ತಾಪವೂ ಮಾಡಿಕೊಂಡಿದ್ದಾರೆ. ಇದೆಲ್ಲದರ ನಡುವೆಯೂ ಸ್ನೇಹಿತನ ಸ್ಥಿತಿ ಕಂಡು ಇಳಯರಾಜಾ ಮರುಗಿದ್ದಾರೆ.

ಸಿನಿಮಾಗೆ ಮಾತ್ರ ನಮ್ಮ ಜೀವನ ಸೀಮಿತವಲ್ಲ
''ನಮ್ಮ ಜೀವನವು ಸಿನಿಮಾದೊಂದಿಗೆ ಕೊನೆಗೊಳ್ಳುವುದಿಲ್ಲ. ಹಾಗೆ, ಸಿನೆಮಾದಿಂದಲೂ ಪ್ರಾರಂಭವಾಗಲಿಲ್ಲ. ಕೆಲವು ವೇದಿಕೆಗಳಲ್ಲಿ, ಕೆಲವು ಕಾರ್ಯಕ್ರಮಗಳಲ್ಲಿ ನಾವು ಪ್ರಾರಂಭಿಸಿದ ಸಂಗೀತವು ನಮ್ಮ ಜೀವನ ಮತ್ತು ನಮ್ಮ ಜೀವನೋಪಾಯವಾಗಿ ಮಾರ್ಪಟ್ಟಿದೆ. ನಮ್ಮ ಮಧ್ಯೆ ಏನೇ ಮನಸ್ಥಾಪವಿದ್ದರೂ ನನ್ನ ನಿನ್ನ ನಡುವಿನ ಸ್ನೇಹ, ಪ್ರೀತಿ, ಸಂಬಂಧವನ್ನು ಬಿಟ್ಟುಕೊಟಿಲ್ಲ. ನೀನು ಮತ್ತೆ ತಿರುಗಿ ಬರುತ್ತೀಯಾ ಎಂದು ನನಗೆ ಗೊತ್ತಿದೆ. ನೀನು ಬೇಗ ಗುಣಮುಖರಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಾಲು....ಬೇಗ ಬಾ....'' ಎಂದು ಕೇಳಿಕೊಂಡಿದ್ದಾರೆ.

ನೋಟಿಸ್ ನೀಡಿದ್ದ ಇಳಯರಾಜಾ
ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಇಳಯರಾಜ ನಡುವೆ ಯಾವುದೋ ವಿಚಾರಕ್ಕೆ ಮನಸ್ತಾಪ ಮೂಡಿತ್ತು. ಆ ಸಂದರ್ಭದಲ್ಲಿ ಎಸ್‌ಪಿಬಿ ಅವರಿಗೆ ಇಳಯರಾಜಾ ನೋಟಿಸ್ ನೀಡಿದ್ದರು. ಯಾವುದೇ ವೇದಿಕೆಗಳಲ್ಲಿ ನನ್ನ ಹಾಡನ್ನು ಹಾಡಬಾರದು ಎಂದು ಹೇಳಿದ್ದರು. ಈ ವಿಚಾರಕ್ಕೆ ಎಸ್‌ಪಿಬಿ ಸಹ ಬೇಸರಗೊಂಡಿದ್ದರು.

ಐಸಿಯುನಲ್ಲಿ ಎಸ್‌ಪಿಬಿ ಚಿಕಿತ್ಸೆ!
'ಎಸ್ ಪಿ ಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ನಿಜ. ಆದರೆ ಅವರು ಎಂಜಿಎಂ ಆಸ್ಪತ್ರೆ ವೈದ್ಯರ ರಕ್ಷಣೆಯಲ್ಲಿ ಸುರಕ್ಷಿತರಾಗಿದ್ದಾರೆ. ಎಸ್ ಪಿ ಬಿ ಶೀಘ್ರದಲ್ಲಿಯೇ ಗುಣಮುಖರಾಗಿ ಹಿಂತಿರುಗಲಿದ್ದಾರೆ ಎಂದು ವಿಶ್ವಾಸವಿದೆ' ಎಂದು ಪುತ್ರ ಎಸ್ ಪಿ ಚರಣ್ ಮಾಹಿತಿ ನೀಡಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್‌ಪಿಬಿಯ ಫೋಟೋವೊಂದು ವೈರಲ್ ಆಗಿತ್ತು.


Click it and Unblock the Notifications











