'ಸನಾತನ ಧರ್ಮ ನಿರ್ಮೂಲನೆ ಮಾಡಬೇಕು'; ಸಿಎಂ ವಿಜಯ್ ಎದುರು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ
ತಮಿಳುನಾಡಿನ ಹಿಂದಿನ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಉದಯನಿಧಿ ಸ್ಟಾಲಿನ್ ಹೊಸ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಿದ್ದಾರೆ. ಮೊದಲ ವಿಧಾನಸಭೆ ಅಧಿವೇಶನದಲ್ಲಿ ನಿನ್ನೆ(ಮೇ 12) ಶಾಸಕರಾಗಿ ಅವರು ಪ್ರಮಾಣವಚನ ಸ್ವೀಕರಸಿದ್ದರು. ಸದನದಲ್ಲಿ ಎರಡನೇ ದಿನ ವಿರೋಧ ಪಕ್ಷದ ನಾಯಕನಾಗಿ ಭಾಷಣ ಮಾಡಿದ್ದಾರೆ. ಸಿಎಂ ವಿಜಯ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಉದಯನಿಧಿ ಸ್ಟಾಲಿನ್ ತಮ್ಮ ಭಾಷಣದ ಕೊನೆಯಲ್ಲಿ ಆಡಿದ ಮಾತು ಈಗ ಮತ್ತೆ ವಿವಾದ ಹುಟ್ಟಾಕ್ಕಿದೆ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಹೇಳಿರುವುದು ಬಹಳ ವೈರಲ್ ಆಗ್ತಿದೆ. 3 ವರ್ಷಗಳ ಹಿಂದೆ ಕೂಡ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಗೆ ಉದಯನಿಧಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆ ನಡೆದಿತ್ತು.

ಡಿಎಂಕೆ ಪಕ್ಷದ ವಿರುದ್ಧ ಗೆದ್ದು ಅಧಿಕಾರಕ್ಕೆ ಏರಿರುವ ನೂತನ ಮುಖ್ಯಮಂತ್ರಿ ಅವರಿಗೆ ಅಭಿನಂದನೆಗಳು. ತಮಿಳು ಏಳ್ಗೆ, ತಮಿಳುನಾಡ ಬಾಳ್ಗೆ, ಜನರನ್ನು ವಿಭಜಿಸುವ ಸನಾತನ ಧರ್ಮ ಕಂಡಿತ ನಿರ್ಮೂಲನೆ ಆಗಬೇಕು. ನಮಸ್ಕಾರ.. ಧನ್ಯವಾದ ಎಂದು ಹೇಳಿಕೆ ಉದಯನಿಧಿ ತಮ್ಮ ಭಾಷಣ ಮುಗಿಸಿದ್ದಾರೆ. ಕೂಡಲೇ ಸಿಎಂ ವಿಜಯ್ ಕೈಮುಗಿದು ಪ್ರತಿಕ್ರಿಯಿಸಿದ್ದಾರೆ. ಸನಾತನ ಧರ್ಮ ನಿರ್ಮೂಲನೆ ಆಗಬೇಕು ಎಂದು ಅವರು ಹೇಳಿವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಜಯ್ ಕ್ರಿಶ್ಚಿಯನ್, ಬಿಜೆಪಿ ವಿರೋಧಿ ಎನ್ನುವ ಆರೋಪದ ನಡುವೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಹೇಳಿಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಸನಾತನ ಧರ್ಮದ ಬಗ್ಗೆ ದ್ರಾವಿಡ ಡಿಎಂಕೆ ಪಕ್ಷ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ದಶಕಗಳ ಬಳಿಕ ಇದೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳನ್ನು ಹೊರತುಪಡಿಸಿದ ಟಿವಿಕೆ ಪಕ್ಷ ಅಧಿಕಾರ ಹಿಡಿದಿದೆ. ಇದೆಲ್ಲದರ ನಡುವೆ ಉದಯನಿಧಿ ಹೇಳಿಕೆ ವೈರಲ್ ಆಗ್ತಿದೆ.
3 ವರ್ಷಗಳ ಹಿಂದೆ ಸನಾತನ ಧರ್ಮವನ್ನು ಡೆಂಗ್ಯುಗೆ ಹೋಲಿಸಿ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಕರೆ ಕೊಟ್ಟಿದ್ದರು. ಆ ಬಳಿಕ ಕೂಡ ಅದನ್ನು ಅವರು ಸಮರ್ಥಿಸಿಕೊಂಡಿದ್ದರು. ತಮ್ಮ ಹೇಳಿಕೆ ಮಹಿಳೆಯರ ಮೇಲಿನ ಶೋಷಣೆಯ ಆಚರಣೆಗಳನ್ನು ನಿವಾರಿಸುವ ಉದ್ದೇಶದ್ದಾಗಿದೆ ಎಂದಿದ್ದರು. ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಕೆಲವರು ಅಂದು ಉದಯನಿಧಿ ಸ್ಟಾಲಿನ್ ಹೇಳಿಕೆ ಸಮರ್ಥಿಸಿಕೊಂಡಿದ್ದರು. ಅದರಲ್ಲಿ ತಪ್ಪೇನಿಲ್ಲ ಎಂದಿದ್ದರು.
ಅಂದು ಉದಯನಿಧಿ ಹೇಳಿಕೆಗೆ ಬಹಳ ಚರ್ಚೆ ಹುಟ್ಟು ಹಾಕಿತ್ತು. ಕೆಲವೆಡೆ ಪ್ರತಿಭಟನೆಗಳು ನಡೆದು, ದೂರುಗಳು ದಾಖಲಾಗಿತ್ತು. ಕೆಲವರು ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಅಯೋಧ್ಯೆಯ ಪರಮಹಂಸ ಆಚಾರ್ಯರು ಉದಯನಿಧಿ ತಲೆಗೆ 10 ಕೋಟಿ ರೂ. ಇನಾಮು ಘೋಷಿಸಿದ್ದರು. ಉದಯನಿಧಿ ತಲೆ ಕಡಿದು ತಂಡವರಿಗೆ 10 ಕೋಟಿ ಕೊಡ್ತೀನಿ, ಯಾರು ಕೊಲ್ಲದಿದ್ದರೆ ನಾನೇ ಹುಡುಕಿ ಕೊಲ್ಲುತ್ತೇನೆ ಎಂದಿದ್ದರು. ಅದಕ್ಕೆ ಸ್ಟಾಲಿನ್ ಪುತ್ರ ತಿರುಗೇಟು ನೀಡಿದ್ದರು. ಇಂತಹ ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ ಎಂದಿದ್ದರು.
ಸನಾತನ ಧರ್ಮದ ಬಗ್ಗೆ ಅಂದು ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು. ಸನಾತನ ಧರ್ಮದ ಬಗ್ಗೆ ನಿಮ್ಮ ಕಾಮೆಂಟ್ ಪರಿಣಾಮ ಏನು ಎಂದು ತಿಳಿದಿದೆಯೇ? ನೀವು ಸಾಮಾನ್ಯ ವ್ಯಕ್ತಿ ಅಲ್ಲ, ಸಚಿವರ ಸ್ಥಾನದಲ್ಲಿ ಇರುವವರು. ಹಾಗಾಗಿ ಇಂತಹ ಹೇಳಿಕೆ ನೀಡಬಹುದೇ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠ ಅಸಮಾಧಾನ ವ್ಯಕ್ತಪಡಿಸಿತ್ತು.


Click it and Unblock the Notifications