ಮತ್ತೊಬ್ಬರಿಗೆ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ ಕಮಲ್: ಅಭಿಮಾನಿಗಳ ಮೆಚ್ಚುಗೆ!
ಕಮಲ್ ಹಾಸನ್ 'ವಿಕ್ರಂ' ಸಿನಿಮಾ ಗೆಲುವಿನ ಜೋಶ್‌ನಲ್ಲಿದ್ದಾರೆ. ಸದ್ಯ 'ಇಂಡಿಯನ್'- 2 ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸೋತು ಸುಣ್ಣವಾಗಿದ್ದ ಉಳಗ ನಾಯಗನ್‌ಗೆ ಲೋಕೇಶ್ ಕನಗರಾಜ್ 'ವಿಕ್ರಂ' ಸಿನಿಮಾ ಮೂಲಕ ದೊಡ್ಡ ಬ್ರೇಕ್ ಕೊಟ್ಟರು. ಚಿತ್ರದ ನಿರ್ಮಾಣದಲ್ಲೂ ಕೈ ಜೋಡಿಸಿದ್ದ ಕಮಲ್ ಭಾರಿ ಲಾಭವನ್ನೇ ನೋಡಿದ್ದರು. ಹಳೇ ಸಾಲವನ್ನೆಲ್ಲಾ ತೀರಿಸಿ ಮತ್ತೆ ಎದ್ದು ಬಂದಿದ್ದಾರೆ.
'ವಿಕ್ರಂ' ಸಿನಿಮಾ ಸಕ್ಸಸ್ ಬೆನ್ನಲ್ಲೇ ಲಾಭ ಹಣದಿಂದ ತಂಡದಲ್ಲಿ ಕೆಲಸ ಮಾಡಿದವರಿಗೆ ಕಮಲ್ ಭರ್ಜರಿ ಉಡುಗೊರೆ ಕೊಟ್ಟಿದ್ದರು. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರಿಗೆ ಬೈಕ್‌ಗಳನ್ನು ಕೊಡಿಸಿದ್ದ ಕಮಲ್, ನಿರ್ದೇಶಕ ಲೋಕೇಶ್ ಕನಗರಾಜ್‌ಗೆ ಐಷಾರಾಮಿ ಲೆಕ್ಸಸ್ ಕಾರು ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ನಟ ಸೂರ್ಯಗೂ ದುಬಾರಿ ವಾಚ್ ನೀಡಿದ್ದರು. ಇದೀಗ ಮತ್ತೊಬ್ಬರಿಗೆ ಹೊಸ ಕೊಡಿಸುವ ಮೂಲಕ ಉಳಗ ನಾಯಗನ್ ಮಾದರಿಯಾಗಿದ್ದಾರೆ. ಈ ವಿಚಾರ ಈಗ ಕಾಲಿವುಡ್‌ನಲ್ಲಿ ಸಖತ್ ಸದ್ದು ಮಾಡ್ತಿದೆ.

ಕಮಲ್ ಹಾಸನ್ ಸದ್ಯ ಶಂಕರ್ ನಿರ್ದೇಶನದ 'ಇಂಡಿಯನ್'- 2 ಚಿತ್ರದಲ್ಲಿ ನಟಿಸ್ತಿದ್ದಾರೆ. ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸಿ ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಪ್ರತಿ ದಿನ ಜಿಮ್‌ನಲ್ಲಿ ಕಸರತ್ತು ನಡೀತಿದೆ. ವರ್ಕೌಟ್‌ಗೆ ಸಹಾಯ ಮಾಡುವ ತಮ್ಮ ಫಿಟ್‌ನೆಸ್ ಟ್ರೈನರ್‌ಗೆ ರೆನಾಲ್ಟ್ ಕಾರನ್ನು ಕಮಲ್ ಉಡುಗೊರೆಯಾಗಿ ನೀಡಿದ್ದಾರೆ. ಉಳಗ ನಾಯಗನ್ ಹೃದಯ ವೈಶಾಲ್ಯತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ 'ಇಂಡಿಯನ್'- 2 ಶೂಟಿಂಗ್ ವೇಳೆ ನಡೆದ ದುರಂತದಲ್ಲಿ 3 ಜನ ಮೃತಪಟ್ಟು, 10 ಜನ ಗಾಯಗೊಂಡಿದ್ದರು. ಈ ಘಟನೆಯ ನಂತರ ಸಿನಿಮಾ ಶೂಟಿಂಗ್ ನಿಂತು ಹೋಗಿತ್ತು. ಮತ್ತೆ ಈ ಸಿನಿಮಾ ಶುರುವಾಗುವುದಿಲ್ಲ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಅಂತೂ ಇಂತೂ ಮತ್ತೆ ಸೇನಾಪತಿಯಾಗಿ ಕಮಲ್ ಬಣ್ಣ ಹಚ್ಚಿದ್ದಾರೆ. ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇನ್ನು ಈ ದುರಂತದಲ್ಲಿ ಕೊನೆಯುಸಿರೆಳೆದ ಮೂವರ ಕುಟುಂಬಕ್ಕೆ ಕಮಲ್ ತಲಾ 1 ಕೋಟಿ ಸಹಾಯ ಮಾಡಿದ್ದರು.

"ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಬೇಕು, ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವು ಷರತ್ತುಗಳನ್ನು ಅಂಗೀಕರಿಸಿದರೆ ಮಾತ್ರ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ" ಎಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದ ಲೈಕಾ ಸಂಸ್ಥೆಗೆ ಕಮಲ್ ಹಾಸನ್ ಪತ್ರ ಬರೆದಿದ್ದರು. ಅದರಂತೆ ಲೈಕಾ ಸಂಸ್ಥೆ ಕೂಡ ಮೃತರ ಕುಟುಂಬಕ್ಕೆ ಸಹಾಯ ಮಾಡಿತ್ತು. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸುವುದಾಗಿ ಬಹಿರಂತ ಪತ್ರ ಬರೆದಿತ್ತು.
90ರ ದಶಕದಲ್ಲಿ ಸೂಪರ್ ಹಿಟ್ ಆಗಿದ್ದ 'ಇಂಡಿಯನ್' ಚಿತ್ರದ ಸೀಕ್ವೆಲ್ ಇದಾಗಿದ್ದು, ಕಾಜಲ್ ಅಗರ್‌ವಾಲ್ ನಾಯಕಿಯಾಗಿ ನಟಿಸ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಇಂಡಿಯನ್'-2 ಸಿನಿಮಾ ನಿರ್ಮಾಣವಾಗ್ತಿದೆ. ಒನ್ಸ್ ಅಗೇನ್ ಕಮಲ್ ಸೇನಾಪತಿಯಾಗಿ ಭ್ರಷ್ಟರ ಹುಟ್ಟಡಗಿಸಲು ಬರ್ತಿದ್ದಾರೆ. ಮೇಕಿಂಗ್ ಹಂತಲ್ಲೇ ಸಿನಿಮಾ ಭಾರೀ ಸದ್ದು ಮಾಡ್ತಿದೆ.


Click it and Unblock the Notifications











