'ಇಂಡಿಯನ್ 2' ದುರಂತ: ಸಿಬಿಐ ಅಧಿಕಾರಿಗಳಿಂದ ನಿರ್ದೇಶಕ ಶಂಕರ್ ವಿಚಾರಣೆ
ಯಾರೂ ನಿರೀಕ್ಷಿಸದ ದುರ್ಘಟನೆಯೊಂದು ಕಳೆದ ವಾರ ನಡೆದೇ ಹೋಯ್ತು. ಚೆನ್ನೈನಲ್ಲಿ ನಡೆಯುತ್ತಿದ್ದ 'ಇಂಡಿಯನ್-2' ಶೂಟಿಂಗ್ ಸ್ಪಾಟ್ ನಲ್ಲಿ ಆಕಸ್ಮಿಕವಾಗಿ ಕ್ರೇನ್ ಬಿದ್ದು ಮೂವರು ಸಾವನ್ನಪ್ಪಿದರು. ಒಂಬತ್ತು ಮಂದಿ ಗಾಯಗೊಂಡರು. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ನಿರ್ದೇಶಕ ಶಂಕರ್, ನಟ ಕಮಲ್ ಹಾಸನ್ ಮತ್ತು ನಟಿ ಕಾಜಲ್ ಅಗರ್ವಾಲ್ ಪಾರಾದರು.
Recommended Video
ಚಿತ್ರೀಕರಣದ ವೇಳೆ ಈ ದುರಂತ ಸಂಭವಿಸಿದ ಮೇಲೆ 'ಇಂಡಿಯನ್-2' ಶೂಟಿಂಗ್ ನಿಲ್ಲಿಸಲಾಗಿದೆ. ಜೊತೆಗೆ 'ಇಂಡಿಯನ್-2' ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಲೈಕಾ ಪ್ರೊಡಕ್ಷನ್ಸ್ ವಿರುದ್ಧ ಕೇಸ್ ದಾಖಲಾಗಿದೆ. ಈ ಪ್ರಕರಣ ಇದೀಗ ಸಿಬಿಐಗೆ ವರ್ಗಾವಣೆಗೊಂಡಿದ್ದು, ನಿರ್ದೇಶಕ ಶಂಕರ್ ರನ್ನ ವಿಚಾರಣೆಗೆ ಒಳಪಡಿಸಲಾಗಿದೆ.
ನಿರ್ದೇಶಕ ಶಂಕರ್ ಮತ್ತು ನಟ ಕಮಲ್ ಹಾಸನ್ ಗೆ ಸಿಬಿಐ ನಿಂದ ಸಮನ್ಸ್ ಜಾರಿ ಆಗಿದ್ದು, ನಿನ್ನೆ ಚೆನ್ನೈನ ಸಿಬಿಐ ಕಛೇರಿಗೆ ಶಂಕರ್ ಆಗಮಿಸಿದ್ದರು. ಎರಡು ಗಂಟೆಗಳಿಗೂ ಅಧಿಕ ಕಾಲ ಶಂಕರ್ ರನ್ನ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು.

'ಇಂಡಿಯನ್-2' ಶೂಟಿಂಗ್ ಸ್ಪಾಟ್ ನಲ್ಲಿ ನಡೆದ ದುರಂತ ನಿರ್ದೇಶಕ ಶಂಕರ್ ಗೂ ಆಘಾತ ನೀಡಿದೆ. ''ದುರ್ಘಟನೆ ಸಂಭವಿಸಿದ ಕ್ಷಣದಿಂದ ನಾನು ಶಾಕ್ ನಲ್ಲಿದ್ದೇನೆ. ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಆ ಕ್ರೇನ್ ನನ್ನ ಮೇಲೆ ಬಿದ್ದಿದ್ದರೆ ಚೆನ್ನಾಗಿರುತ್ತಿತ್ತು'' ಎಂದು ಭಾವೋದ್ವೇಗದಿಂದ ನಿರ್ದೇಶಕ ಶಂಕರ್ ಟ್ವೀಟ್ ಮಾಡಿದ್ದರು.
'ಇಂಡಿಯನ್-2' ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನಟ ಕಮಲ್ ಹಾಸನ್ ತಲಾ ಒಂದು ಕೋಟಿ ರೂಪಾಯಿ ನೀಡಿದ್ದಾರೆ.


Click it and Unblock the Notifications











