ಶೀಘ್ರದಲ್ಲೇ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ ಸೌರವ್ ಗಂಗೂಲಿ ಬಯೋಪಿಕ್
ಕ್ರಿಕೆಟ್ ಜಗತ್ತಿನ ದಂತಕಥೆಯಾದ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಸದ್ಯ ಅವರ ಜೀವನದ ಪ್ರತಿಯೊಂದು ಘಟನೆಗಳನ್ನು ಆಧಾರಿಸಿ ಬಯೋಪಿಕ್ ಸಿನಿಮಾ ಮಾಡಲು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಮುಂದಾಗಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಸೌರವ್ ಗಂಗೂಲಿ ಬಯೋಪಿಕ್ ಸಿನಿಮಾ ಬರಲಿದೆ ಎಂಬ ಚರ್ಚೆ ಸಿನಿರಂಗದಲ್ಲಿ ಕೇಳಿ ಬರುತ್ತಿತ್ತು. ಸದ್ಯ ಈಗ ಆ ಮಾತುಗಳಿಗೆಲ್ಲಾ ಬ್ರೇಕ್ ಬಿದ್ದಿದ್ದು, ಸೌರವ್ ಗಂಗೂಲಿಯ ಜೀವನಾಧಾರಿತ ಚಿತ್ರ ಮಾಡಲು ಐಶ್ವರ್ಯಾ ರಜನಿಕಾಂತ್ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಕ್ರಿಕೆಟ್ ಜಗತ್ತಿನ ಪ್ರಮುಖ ಕ್ರಿಕೆಟರ್‌ಗಳ ಬಯೋಪಿಕ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡಿದೆ. ಈಗ ಸೌರವ್ ಗಂಗೂಲಿ ಬಯೋಪಿಕ್ ಕೂಡ ತೆರೆಗೆ ತರಲು ನಿರ್ಧರಿಸಿದ್ದು, ಇದು ಕೂಡ ಸಕ್ಸಸ್ ಕಾಣುವ ಸಾಧ್ಯತೆ ಇದೆ. ಈಗಾಗಲೇ ನಟಿ ಐಶ್ವರ್ಯಾ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಕ್ರಿಕೆಟ್‌ನತ್ತ ಒಲವು ತೋರಿದ್ದು, ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಜೀವನವನ್ನು ತೆರೆ ಮೇಲೆ ಪ್ರಸ್ತುತ ಪಡಿಸಲು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಸಿದ್ಧರಾಗಿದ್ದಾರೆ.

ಐಶ್ವರ್ಯಾ ರಜನಿಕಾಂತ್ ನಿರ್ದೇಶನದಲ್ಲಿ ದಾದ ಬಯೋಪಿಕ್
ನಿರ್ದೇಶಕ ಲವ್ ರಂಜನ್ ಒಡೆತನದ ಲವ್ ಫಿಲ್ಮ್ಸ್ ನಿರ್ಮಾಣದ ಅಡಿಯಲ್ಲಿ ಸೌರವ್ ಗಂಗೂಲಿ ಬಯೋಪಿಕ್ ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಸಿನಿಮಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಸಿನಿಮಾದಲ್ಲಿ ಸೌರವ್ ಗಂಗೂಲಿ ಪ್ರತಿಯೊಂದು ಹಾದಿಯನ್ನು ತೋರಿಸಲಾಗುತ್ತದೆ. ಇದಕ್ಕಾಗಿ ಐಶ್ವರ್ಯಾ ರಜನಿಕಾಂತ್ ಸಕಲ ತಯಾರಿ ಮಾಡಿಕೊಂಡಿದ್ದಾರೆ. ತಮ್ಮ ನಿರ್ದೇಶನದಲ್ಲೇ ಕ್ರಿಕೆಟ್ ಜಗತ್ತಿನ ದಾದಾ ಸೌರವ್ ಗಂಗೂಲಿ ಬಯೋಪಿಕ್ ತರಲು ಉತ್ಸುಕರಾಗಿದ್ದಾರೆ.

ಕಳೆದ ವರ್ಷವೇ ಬಯೋಪಿಕ್ ಬಗ್ಗೆ ನಡೆದಿತ್ತು ಮಾತುಕತೆ
ಕ್ರಿಕೆಟ್ ಜಗತ್ತಿನ ದಾದಾ ಸೌರವ್ ಗಂಗೂಲಿ ತಮ್ಮ ಬಯೋಪಿಕ್ ಬಗ್ಗೆ ಈ ಹಿಂದೆಯೇ ಪ್ರತಿಕ್ರಿಯೆ ನೀಡಿದ್ದರು. "ಕ್ರಿಕೆಟ್ ನನ್ನ ಜೀವನ. ಈ ಕ್ರೀಡೆಯು ನನಗೆ ಆತ್ಮವಿಶ್ವಾಸ ನೀಡಿದೆ. ಎಲ್ಲರ ಮುಂದೆ ತಲೆಯೆತ್ತಿ ನಡೆಯುವಂತೆ ಮಾಡಿದೆ. ಇದೀಗ ಅದೇ ಕಥೆಯನ್ನು ಲವ್ ಫಿಲಂಸ್ ಚಿತ್ರವಾಗಿಸುತ್ತಿದೆ. ನನ್ನ ಜೀವನವನ್ನು ದೊಡ್ಡ ಪರದೆ ಮೇಲೆ ಕಾಣುವ ಕುತೂಹಲ ನನಗೂ ಇದೆ, "ಎಂದು ಹೇಳುವ ಮೂಲಕ ಬಯೋಪಿಕ್‌ಗೆ ಆಗಲೇ ಸೌರವ್ ಗಂಗೂಲಿ ಗ್ರೀನ್ ಸಿಗ್ನಲ್ ನೀಡಿದ್ದರು. ಸದ್ಯ ಈಗ ಈ ಐಶ್ವರ್ಯಾ ರಜನಿಕಾಂತ್ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು, ಸಿನಿಮಾ ಮೇಲೆ ಅಭಿಮಾನಿಗಳಿಗೆ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ.

ದಾದಾ ಪಾತ್ರದಲ್ಲಿ ನಟಿಸುತ್ತಾರಾ ರಣಬೀರ್?
ಸೌರವ್ ಗಂಗೂಲಿ ಬಯೋಪಿಕ್ ಬರುತ್ತೇ ಎಂಬ ವಿಚಾರ ಕೇಳಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸದ್ಯ ಈಗ ಸಿನಿಮಾದಲ್ಲಿ ಸೌರವ್ ಗಂಗೂಲಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಆದರೆ, ಈವರೆಗೂ ಚಿತ್ರತಂಡ ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಡ್ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೂ ಸಹ ಈ ಸಿನಿಮಾದಲ್ಲಿ ದಾದಾ ಪಾತ್ರವನ್ನು ಬಾಲಿವುಡ್ ನಟ ರಣಬೀರ್ ಕಪೂರ್ ಮಾಡುವ ಸಾಧ್ಯತೆ ಇದೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಈಗಾಗಲೇ ಈ ಬಗ್ಗೆ ಒಂದು ಸುತ್ತಿನ ಮಾತುಕತೆ ಕೂಡ ಆಗಿದೆ ಎನ್ನಲಾಗ್ತಿದೆ. ಆದರೆ ಚಿತ್ರತಂಡ ಈವರೆಗೆ ಯಾವುದೇ ಮಾಹಿತಿ ನೀಡದ ಹಿನ್ನಲೆ ಅಭಿಮಾನಿಗಳು ಕೂಡ ಕುತೂಹಲವನ್ನು ಹಿಡಿದಿಟ್ಟುಕೊಂಡಿದ್ದಾರೆ.

ಸಕ್ಸಸ್ ಕಂಡಿದ್ದ ಧೋನಿ ಬಯೋಪಿಕ್
ಈ ಮೊದಲು ಕೂಡ ಭಾರತೀಯ ಚಿತ್ರರಂಗದಲ್ಲಿ ಕ್ರಿಕೆಟ್ ದಿಗ್ಗಜರ ಸಿನಿಮಾಗಳು ತೆರೆ ಕಂಡಿವೆ. ಅದರಲ್ಲಿ ಕೆಲವು ಸಕ್ಸಸ್ ಆಗಿದ್ದರೆ, ಇನ್ನು ಕೆಲವು ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಗಿದೆ. 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಚಿತ್ರ 'ಎಂ ಎಸ್ ಧೋನಿ: ಅನ್ ಟೋಲ್ಡ್ ಸ್ಟೋರಿ ' ತೆರೆ ಕಂಡಿತ್ತು. ಸುಶಾಂತ್ ಸಿಂಗ್ ಈ ಚಿತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಚಿತ್ರ ಕೂಡ ಬಾಕ್ಸಾಫೀಸ್ ಧೂಳೆಬ್ಬಿಸಿತ್ತು. ಇದಾದ ಬಳಿಕ ಮತೊಬ್ಬ ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಅವರ ಫಿಕ್ಸಿಂಗ್ ಕಹಾನಿ ತಿಳಿಸುವ 'ಅಜರ್' ಚಿತ್ರ ತೆರೆ ಕಂಡಿತ್ತು. ಆದರೆ ಆ ಸಿನಿಮಾ ಅಷ್ಟು ಸಕ್ಸಸ್ ತಂದು ಕೊಡಲಿಲ್ಲ. ಇದಾದ ಬಳಿಕ ಬಯೋಪಿಕ್ ಅಲ್ಲದೆ ಹೋದರೂ, '83' ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿತ್ತು. ಈಗ ಸೌರವ್ ಗಂಗೂಲಿ ಬಯೋಪಿಕ್ ಕೂಡ ರೆಡಿಯಾಗುತ್ತಿದ್ದು, ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.


Click it and Unblock the Notifications











