International Women's Day 2023: ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ನಟಿ ಹಂಸ ನಂದಿನಿ ಸ್ಪೂರ್ತಿದಾಯಕ ಕಥನ
ಕ್ಯಾನ್ಸರ್ ಮಹಾಮಾರಿ ವಿರುದ್ದ ಹೋರಾಡಿ ಗೆದ್ದವರಲ್ಲಿ ತೆಲುಗು ನಟಿ ಹಂಸ ನಂದಿನಿ ಕೂಡ ಒಬ್ಬರು. ಒಂದಷ್ಟು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕುವ ಮೂಲಕ ಹಂಸಾ ಗುರ್ತಿಸಿಕೊಂಡಿದ್ದರು. ಇಂತಹ ಸಮಯದಲ್ಲೇ ಸ್ತನ ಕ್ಯಾನ್ಸರ್‌ಗೆ ನಟಿ ತುತ್ತಾದರು. ಸತತ ಹೋರಾಟದಿಂದ ಕ್ಯಾನ್ಸರ್ ವಿರುದ್ಧ ಗೆದ್ದಿದ್ದಾರೆ. ಆದರೆ ಈ ಮಾಹಾಮಾರಿ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ನರಕಯಾತನೆ ಅನುಭವಿಸದರಂತೆ. ಮೊದಲಿಗೆ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಆಕೆಗೆ ಮತ್ತೊಂದು ಶಾಕ್ ಕಾದಿತ್ತು. ಈ ಕ್ಯಾನ್ಸರ್ ತನ್ನ ತಾಯಿಯಿಂದ ವಂಶವಾಹಿಯಾಗಿ ಬಂದಿರುವುದಾಗಿ ತಿಳಿಯದ ಕಾರಣ ಮತ್ತೊಮ್ಮೆ ಚಿಕಿತ್ಸೆ ತೆಗೆದುಕೊಳ್ಳಬೇಕಾಯಿತು.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸ್ತನ ಕ್ಯಾನ್ಸರ್ ವಿರುದ್ಧದ ತಮ್ಮ ಹೋರಾಟವನ್ನು ಹಂಸ ನಂದಿನಿ ಹಂಚಿಕೊಂಡಿದ್ದಾರೆ. ಲಾಕ್‌ಡೌನ್ ಮುಗಿದು ಮತ್ತೆ ನಾನು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಜುಲೈ, 2020ರಲ್ಲಿ ತನಗೆ ಗ್ರೇಡ್ 3 ಕಾರ್ಸಿನೋಮಾ ಇರುವುದು ಗೊತ್ತಾಯಿತು ಎಂದು ಹಂಸಾ ನಂದಿನಿ ವಿವರಿಸಿದ್ದಾರೆ. ಆಕೆಯ ತಾಯಿ ಕೂಡ 18 ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿದರು. ಆದರೆ ದುರದೃಷ್ಟವಶಾತ್ ಆಕೆ ಮಹಾಮಾರಿ ಎದುರು ಸೋತಿದ್ದರು. ಆದರೂ ಹಂಸ ನಂದಿನಿ ಮಾತ್ರ ಧೈರ್ಯವಾಗಿ ಮನೋಸ್ಥೈರ್ಯದಿಂದ ಚಿಕಿತ್ಸೆ ಪಡೆದರು. ತನಗೆ ಕ್ಯಾನ್ಸರ್ ಇದೆ ಎಂದು ತಿಳಿದ ನಂತರ ಭಯ, ಗೊಂದಲ, ಆತಂಕ ಎಲ್ಲವೂ ನನ್ನನ್ನು ಆವರಿಸಿತು. ಸತತವಾಗಿ ಸ್ಕಾನಿಂಗ್ಸ್ , ಪರೀಕ್ಷೆಯ ನಂತರ ಆಕೆ ಧೈರ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಕ್ಯಾನ್ಸರ್ ಸಂಪೂರ್ಣವಾಗಿ ಹರಡದಿದ್ದರೂ 16 ಕೀಮೋ ಥೆರಪಿ ಸೆಷೆನ್ಸ್ ಆಕೆ ಧೈರ್ಯವಾಗಿ ಮಾಡಿಸಿಕೊಂಡಿದ್ದರು. ಎಲ್ಲಾ ಮುಗೀತು ಎಂದುಕೊಳ್ಳುವ ಸಮಯದಲ್ಲಿ ಆಕೆಗೆ BRCA1 (ವಂಶಪಾರಂಪರ್ಯ ಸ್ತನ ಕ್ಯಾನ್ಸರ್) ಪಾಸಿಟಿವ್ ಎನ್ನುವುದು ಗೊತ್ತಾಯಿತು. ಅಂದರೆ ಆಕೆಗೆ ಕ್ಯಾನ್ಸರ್ ವಂಶಪಾರಂಪರ್ಯವಾಗಿ ಬಂದಿತ್ತು. ಸದ್ಯಕ್ಕೆ ಇದರಿಂದ ಬಿಡುಗಡೆ ಸಿಗಬಹುದು. ಆದರೆ ಮುಂದೆ ಮತ್ತೆ ಕ್ಯಾನ್ಸರ್ ಬರಬಹುದು ಎಂದು ವೈದ್ಯರು ಹೇಳಿದರು. 70% ರಷ್ಟು ಮತ್ತೆ ಕ್ಯಾನ್ಸರ್ ಬರುತ್ತೆ ಎಂದಾಗ ಅದಕ್ಕೆ ಇದ್ದಿದ್ದು ಒಂದೇ ಮಾರ್ಗ, ಇನ್ವಾಸಿವ್ ಪ್ರೊಫಿಲಾಕ್ಟಿಕ್ ಸರ್ಜರಿ. ಕಳೆದ ವರ್ಷ ಆ ಸರ್ಜರಿಯನ್ನು ಕೂಡ ಮಾಡಿಸಿಕೊಂಡೆ" ಎಂದು ಹಂಸ ನಂದಿನೆ ಹೇಳಿದ್ದಾರೆ.
ಕಠಿಣ ಚಿಕಿತ್ಸೆಗಳು, ಹಲವು ಸವಾಲುಗಳೊಂದಿಗೆ ಕ್ಯಾನ್ಸರ್ ಮಹಾಮಾರಿ ವಿರುದ್ಧ ಹಂಸ ನಂದಿನಿ ಹೋರಾಡಿದ್ದಾರೆ. ಯಾವುದೇ ಕಾರಣಕ್ಕೂ ಕ್ಯಾನ್ಸರ್‌ಗೆ ಗೆಲ್ಲಲು ಬಿಡುಬಾರದು ಎಂದು ಭಾವಿಸಿದ್ದರು. ಮತ್ತೆ ಬೆಳ್ಳಿತೆರೆಗೆ ಬರಬೇಕು, ಮತ್ತೊಬ್ಬರಿಗೆ ಪ್ರೇರಣೆಯಾಗಬೇಕು ಎಂದು ಕ್ಯಾನ್ಸರ್ ವಿರುದ್ಧದ ತಮ್ಮ ಹೋರಾಟದ ಕಥೆಯನ್ನು ಹೇಳುತ್ತಾ ಬರ್ತಿದ್ದಾರೆ. ಆಕೆಗೆ ಕ್ಯಾನ್ಸರ್ ಇರುವ ವಿಷಯ ತಿಳಿದು ಒಂದುವರೆ ವರ್ಷ ಆಗಿದೆ. ಆಕೆ ಹೇಳಿದಂತೆಯೇ ಸದಾ ನಗುತ್ತಾ ಜೀವನ ಸಾಗಿಸುತ್ತಾ ಬಂದರು. ಯಾವತ್ತೂ ಕೂಡ ಕ್ಯಾನ್ಸರ್ ವಿರುದ್ಧದ ಹೋರಾಟದಿಂದ ಹಿಂದಡಿ ಇಡಲಿಲ್ಲ. ಎರಡು ವರ್ಷಗಳ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಕ್ಯಾನ್ಸರ್ ವಿರುದ್ಧದ ಹೋರಾಟದ ಜರ್ನಿಯನ್ನು ಬರೆದುಕೊಂಡಿದ್ದರು.

ಕಳೆದ ವರ್ಷ ನವೆಂಬರ್‌ನಲ್ಲಿ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ಹಂಸ ನಂದಿನಿ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ್ದ ನಟಿ "ಮತ್ತೆ ಇಲ್ಲಿಗೆ ಬಂದಿದ್ದು ಬಹಳ ಸಂತೋಷ ಆಗುತ್ತಿದೆ. ನಾನು ಬಹಳ ಭಯಪಟ್ಟಿದ್ದೆ. ಆದರೆ ಕ್ಯಾಮರಾ ನೋಡುತ್ತಿದ್ದಂತೆ ಎಲ್ಲಾ ಮರೆತುಬಿಟ್ಟೆ. ಈಗ ಬಹಳ ಸಂತೋಷ ಎನಿಸುತ್ತದೆ. ಇಷ್ಟೆಲ್ಲಾ ನೋವು ಅನುಭವಿಸಿದರೂ ಆಕೆಯ ಮುಗುಳುನಗೆ ಎಷ್ಟೋ ಜನಕ್ಕೆ ಸ್ಪೂರ್ತಿ. ಆಕೆ ನಿಜಕ್ಕೂ ಒಬ್ಬ ಯೋಧೆ. ಮಹಿಳಾ ದಿನಾಚರಣೆಗೆ ಪ್ರೇರಣೆ. ಸ್ತನ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದ ತಮ್ಮ ತಾಯಿಯ ಹೆಸರಿನಲ್ಲಿ 'ಯಾಮಿನಿ ಕ್ಯಾನ್ಸರ್ ಫೌಂಡೇಶನ್ ಸ್ಥಾಪಿಸೋದಾಗಿ ನಟಿ ಹಂಸ ನಂದಿನಿ ಹೇಳಿದ್ದರು. ಮಹಿಳಾ ದಿನಾಚರಣೆ ವಿಶೇಷವಾಗಿ ತಮ್ಮ ಕ್ಯಾನ್ಸರ್ ವಿರುದ್ಧದ ಹೋರಾಟದ ಜರ್ನಿಯನ್ನು ನಟಿ ಹಂಚಿಕೊಂಡಿದ್ದಾರೆ.


Click it and Unblock the Notifications











