ಧನುಷ್, ಸೇತುಪತಿ, ಕಮಲ್ ಬಿಟ್ಟ ಕಥೆ ಮತ್ತೆ ವಿಜಯ್ ಪಾಲಾಯ್ತಾ? ದಳಪತಿ 69 ಕಥೆಯೇನು?
ತಮಿಳು ನಟ ದಳಪತಿ ವಿಜಯ್ ರಾಜಕೀಯರಂಗ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಕೊನೆಯದಾಗಿ ಇನ್ನೊಂದು ಚಿತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುವ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ ವಿಜಯ್ ನಟನೆಯ 69ನೇ ಸಿನಿಮಾ ಘೋಷಣೆ ಆಗಿದೆ. ಕೆವಿಎನ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡುತ್ತಿದೆ.
ಹೆ. ವಿನೋದ್ ನಿರ್ದೇಶನದಲ್ಲಿ ದಳಪತಿ69 ಸಿನಿಮಾ ಮೂಡಿ ಬರಲಿದೆ. ಇನ್ನು ಹೆಸರಿಡದ ಈ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ವಿಜಯ್ ಪೊಲಿಟಿಕಲ್ ಜರ್ನಿಗೆ ಈ ಚಿತ್ರವನ್ನು ವೇದಿಕೆ ಮಾಡಿಕೊಳ್ಳುವ ಪ್ರಯತ್ನ ನಡೀತಿದೆ. ರಾಜಕೀಯ ಅಂಶಗಳನ್ನು ಸೇರಿಸಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

ದಳಪತಿ 69 ಅನೌನ್ಸ್‌ಮೆಂಟ್ ಪೋಸ್ಟರ್ ಗಮನ ಸೆಳೆದಿದೆ. 'ಪ್ರಜಾಪ್ರಭುತ್ವದ ಜ್ಯೋತಿ ಹಿಡಿಯುವವನು ಶೀಘ್ರದಲ್ಲೇ ಬರ್ತಿದ್ದಾನೆ' ಎನ್ನುವ ಸಾಲು ಕುತೂಹಲ ಮೂಡಿಸಿದೆ. 'ತಮಿಳಗ ಮುನ್ನೆಟ್ರ ಕಳಗಂ' ಎನ್ನುವ ಪಕ್ಷ ಸ್ಥಾಪಿಸಿ ದಳಪತಿ ರಾಜಕೀಯರಂಗಕ್ಕೆ ಧುಮುಕುತ್ತಿದ್ದಾರೆ. ತಮಿಳುನಾಡಿನ ಮುಂದಿನ ಸಿಎಂ ವಿಜಯ್ ಎಂದು ಈಗಾಗಲೇ ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ.
2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಈಗಾಗಲೇ ವಿಜಯ್ ತಯಾರಿ ನಡೆಸಿದ್ದಾರೆ. ಆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ. ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ದಳಪತಿ69 ಸಿನಿಮಾ ರಿಲೀಸ್ ಮಾಡಿ ಚಿತ್ರರಂಗಕ್ಕೆ ಗುಡ್‌ಬೈ ಹೇಳುವ ಆಲೋಚನೆಯಲ್ಲಿದ್ದಾರೆ. ಇದೆಲ್ಲದರ ನಡುವೆ ಚಿತ್ರದ ಕಥೆ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
'ತೀರನ್ ಅಧಿಗಾರಂ ಒಂಡ್ರು', 'ನೇರ್ಕೊಂಡ ಪಾರ್ವೈ', 'ವಾಲಿಮೈ' ಹಾಗೂ 'ತನಿವು' ರೀತಿಯ ಹಿಟ್ ಸಿನಿಮಾಗಳನ್ನು ಹೆಚ್. ವಿನೋದ್ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ದಳಪತಿ69 ಸಿನಿಮಾ ಬಗ್ಗೆಯೂ ನಿರೀಕ್ಷೆ ಮೂಡಿದೆ. ಇದೇ ಕಥೆಯನ್ನು ಹಿಂದೆ ಅಜಿತ್, ಕಮಲ್ ಹಾಸನ್, ಧನುಷ್ ಹಾಗೂ ವಿಜಯ್ ಸೇತುಪತಿಗೆ ಕೂಡ ಹೇಳಿದ್ದರು ಎನ್ನಲಾಗ್ತಿದೆ.

ವಿಜಯ್ 'ಮೆರ್ಸಲ್' ಎನ್ನುವ ಚಿತ್ರದಲ್ಲಿ ನಟಿಸುವಾಗಲೇ ಹೆಚ್. ವಿನೋದ್ ಭೇಟಿಯಾಗಿ ಈ ಕಥೆಯನ್ನು ಹೇಳಿದ್ದರಂತೆ. ಕಥೆ ಚೆನ್ನಾಗಿದೆ. ಸದ್ಯಕ್ಕೆ ಆಗಲ್ಲ, ಮುಂದೆ ನೋಡೋಣ ಎಂದು ದಳಪತಿ ಹೇಳಿದ್ದರಂತೆ. ಬಳಿಕ ಇದೇ ಕಥೆ ಬಗ್ಗೆ ಬೇರೆ ನಟರ ಜೊತೆಗೂ ಚರ್ಚಿಸಿದ್ದರಂತೆ. ಆದರೆ ಅವರು ಯಾರು ಕೂಡ ಒಪ್ಪಲಿಲ್ಲ. ಕೊನೆಗೆ ಅದೇ ಕಥೆಯನ್ನು ತಮ್ಮ ಕೊನೆ ಚಿತ್ರಕ್ಕೆ ವಿಜಯ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಈ ಹಿಂದೆ ಕೂಡ ಕೆಲ ನಾಯಕರು ತಮ್ಮ ರಾಜಕೀಯ ಆರಂಗೇಟ್ರಂಗೆ ಸಿನಿಮಾಗಳನ್ನು ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ತೆರೆಮೇಲೆ ಜನನಾಯಕನಾಗಿ ಕಾಣಿಸಿಕೊಂಡು ಬಳಿಕ ಸಕ್ರಿಯ ರಾಜಕೀಯರಂಗಕ್ಕೆ ಧುಮುಕಿದ್ದಾರೆ. ಅದೇ ಹಾದಿಯಲ್ಲಿ ವಿಜಯ್ ಅಡಿ ಇಟ್ಟಿದ್ದಾರೆ. ಕಾಲಿವುಡ್‌ನಲ್ಲಿ ರಜನಿಕಾಂತ್ ಬಿಟ್ಟರೆ ಆ ಮಟ್ಟಿಗೆ ಜನಪ್ರಿಯತೆ ಇರುವ ಮತ್ತೊಬ್ಬ ನಟ ವಿಜಯ್. ಹಾಗಾಗಿ ದಳಪತಿ ಪೊಲಿಟಿಕಲ್ ಎಂಟ್ರಿ ಬಗ್ಗೆಯೂ ಭಾರೀ ನಿರೀಕ್ಷೆಯಿದೆ.
ಇನ್ನು ದಳಪತಿ 69 ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ? ಎನ್ನುವ ಬಗ್ಗೆಯೂ ಚರ್ಚೆ ಶುರುವಾಗಿದೆ. ಸಮಂತಾ ಹಾಗೂ ಪೂಜಾ ಹೆಗ್ಡೆ ಚಿತ್ರದಲ್ಲಿ ನಾಯಕಿಯರಾಗಿ ನಟಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಮಲಯಾಳಂ ನಟ ಮೋಹನ್ ಲಾಲ್ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಸಿಮ್ರನ್ ಸಹ ಕೀ ರೋಲ್ ಪ್ಲೇ ಮಾಡುವ ಬಗ್ಗೆ ಊಹಾಪೋಹ ಶುರುವಾಗಿದೆ.
ಅಂದಾಜು 400 ರೂ. ಕೋಟಿ ಬಜೆಟ್‌ನಲ್ಲಿ ದಳಪತಿ 69 ಸಿನಿಮಾ ನಿರ್ಮಾಣವಾಗುತ್ತಿದೆ. 275 ಕೋಟಿ ರೂ. ಸಂಭಾವನೆಯಾಗಿ ವಿಜಯ್ ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಒಟ್ಟಾರೆ ಸೆಟ್ಟೇರುವುದಕ್ಕೂ ಮುನ್ನ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.


Click it and Unblock the Notifications











