ಅಜಿತ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಕನ್ನಡದ ಈ ನಾಯಕಿ ? ಇಬ್ಬರ ನಡುವೆ ಇದೆ 22 ವರ್ಷಗಳ ಅಂತರ..!
ಯಾರಿಗೆ ಎಲ್ಲಿ ಹೇಗೆ ಮತ್ತು ಯಾವಾಗ ಅದೃಷ್ಟ ಒಲಿಯುತ್ತದೆ ಎಂಬುದನ್ನು ಯಾರಿಂದನೂ ಊಹಿಸಲು ಸಾಧ್ಯ ಇಲ್ಲ. ಕುರಿಕಾಯುತ್ತಾ ತನಗಿಷ್ಟ ಬಂದಂತೆ ಹಾಡುತ್ತಿದ್ದ ಹನುಮಂತ ಸರಿಗಮಪ ಸೀಜನ್ 15ರ ರನ್ನರ್ ಅಪ್ ಆಗುತ್ತಾನೆಂದರೆ ತಮಾಷೆಯ ಮಾತೇ.? ಇನ್ನೂ ಕೇವಲ ಕಣ್ಸನ್ನೆಯಿಂದ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ವಾರಿಯರ್ ಅವರದ್ದು ಅದೃಷ್ಟವಲ್ಲದೇ ಮತ್ತೇನು..?
ಇಷ್ಟೇ ಯಾಕೆ..ರೈಲ್ವೆ ಸ್ಟೇಷನ್ನಿನಲ್ಲಿ ಹಾಡುತ್ತಿದ್ದ ರಾಣು ಮಂಡಾಲ್ ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದು ಕೂಡ ಇದೇ ಅದೃಷ್ಟದಿಂದ ಅಲ್ಲವೇ..? ಹೀಗೆ ಅದೃಷ್ಟ ಅಂದ್ರೆ ಇದು... ಹೀಗಂತ ಗಾಂಧಿನಗರದ ಮಂದಿ ಅಚ್ಚರಿಯಿಂದ ಮಾತಾನಾಡಿಕೊಂಡಿದ್ದು ಕೆಜಿಎಫ್ ಚಿತ್ರದ ಕಥಾ ನಾಯಕಿ ಶ್ರೀನಿಧಿ ಶೆಟ್ಟಿ ವಿಚಾರದಲ್ಲಿ.

ಯಾಕೆಂದರೆ .. ಕೆ.ಜಿ.ಎಫ್ ಶ್ರೀನಿಧಿ ಶೆಟ್ಟಿ ಅಭಿನಯದ ಮೊದಲ ಸಿನಿಮಾ. ಆದರೆ ಬೇರೆ ನಟಿಯರಿಗೆ ಮೂರು ನಾಲ್ಕು ಚಿತ್ರಗಳಾದರೂ ಸಿಗದ ಪಬ್ಲಿಸಿಟಿ ಶ್ರೀನಿಧಿಗೆ ಕೆ.ಜಿ.ಎಫ್ ಚಿತ್ರದ ಮೂಲಕ ಸಿಕ್ಕಿತ್ತು.
ಇನ್ನೂ ಮೊದಲನೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಆಗಲೇ ಶ್ರೀನಿಧಿ ಶೆಟ್ಟಿಗೆ ಬೇರೆ ಬೇರೆ ಭಾಷೆಗಳಿಂದಲೂ ಅವಕಾಶಗಳು ಸರದಿಯಲ್ಲಿ ನಿಂತಿದ್ದವು. ಬಂದ ಈ ಅವಕಾಶಗಳನ್ನು ಶ್ರೀನಿಧಿ ಎರಡು ಕೈಯಿಂದ ಬಾಚಿಕೊಂಡಿದ್ದರು ಕೂಡ.
ಕೆ.ಜಿ.ಎಫ್ ಭಾಗ 1 ಮತ್ತು ಭಾಗ 2ರ ನಂತರ ಸೀದಾ ಕಾಲಿವುಡ್ ಕಡೆ ಮುಖ ಮಾಡಿದ್ದ ಶ್ರೀನಿಧಿ, ಚಿಯಾನ್ ವಿಕ್ರಮ್ ಜೊತೆ ತೆರೆ ಹಂಚಿಕೊಂಡರು. ಕೋಬ್ರಾದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದರು. ಕೋಬ್ರಾ ಚಿತ್ರದ ನಂತರ ಟಿಲ್ಲು ಸ್ಕ್ರೈರ್ ಖ್ಯಾತಿಯ ಸಿದ್ದು ಜೋನಲಗುಡ್ಡ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಹೋದರು ಶ್ರೀನಿಧಿ ಶೆಟ್ಟಿ.
ಇವರು ಇಬ್ಬರು ಅಭಿನಯಿಸಿರುವ 'ತೆಲಸು ಕದಾ' ಈ ಅಕ್ಟೋಬರ್ 17ರಂದು ಬಿಡುಗಡೆಯಾಗಲಿದೆ. ಇದರ ನಡುವೆ ನಾನಿ ಜೊತೆ ಹಿಟ್ 3 ಚಿತ್ರದಲ್ಲಿ ಕೂಡ ಶ್ರೀನಿಧಿ ಶೆಟ್ಟಿ ತೆರೆ ಹಂಚಿಕೊಂಡರು.
ಹೀಗಿರುವಾಗ ಈಗ ಶ್ರೀನಿಧಿ ಶೆಟ್ಟಿ ತಮಿಳುನಾಡಿನ ತಲಾ ಅಜಿತ್ ಅಭಿನಯದ 64ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸದ್ಯ ಸದ್ದು ಮಾಡುತ್ತಿದೆ.
ಹೌದು, ಗುಡ್ ಬ್ಯಾಡ್ ಅಗ್ಲಿ ಚಿತ್ರದ ಪ್ರಚಂಡ ಯಶಸ್ಸಿನ ನಂತರ ನಿರ್ದೇಶಕ ಅಧಿಕ್ ರವಿಚಂದ್ರನ್ ಮತ್ತು ಅಜಿತ್ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಕೆಲಸಗಳು ಈಗಾಗಲೇ ಆರಂಭವಾಗಿವೆ.

ಅಜಿತ್ ವೃತ್ತಿ ಬದುಕಿನಲ್ಲಿಯೇ ಈ ಚಿತ್ರ ತುಂಬಾನೇ ವಿಶೇಷವಾಗಿರಲಿದೆ ಎನ್ನುವ ಮಾತು ಕೇಳಿ ಬರುತ್ತಿದ್ದು ಈ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಆಯ್ಕೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ಮಾಡಿದೆ.
ಈ ವರದಿಯ ಪ್ರಕಾರ ಶ್ರೀನಿಧಿ ಶೆಟ್ಟಿ ಜೊತೆ ಈಗಾಗಲೇ ಮಾತು ಕತೆ ಕೂಡ ನಡೆದಿದ್ದು ಶೀಘ್ರದಲ್ಲಿಯೇ ಚಿತ್ರತಂಡ ಅಧಿಕೃತವಾಗಿ ಶ್ರೀನಿಧಿ ಶೆಟ್ಟಿ ಅವರ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ.
ಇನ್ನು ಅಜಿತ್ ಜೊತೆ ಶ್ರೀನಿಧಿ ಶೆಟ್ಟಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದ ಬೆನ್ನಲ್ಲೇ, ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರದ ಕುರಿತು ಚರ್ಚೆಯಾಗುತ್ತಿದೆ. ಯಾಕೆಂದರೆ ಇಬ್ಬರ ನಡುವೆ 22 ವರ್ಷಗಳ ವಯಸ್ಸಿನ ಅಂತರ ಇದೆ. ಇನ್ನು ಹಿಂದೆ ಎಲ್ಲ ಈ ವಯಸ್ಸಿನ ಅಂತರದ ಕುರಿತು ಯಾರು ಹೆಚ್ಚೇನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗೀಗ ಈ ವಿಚಾರವನ್ನೇ ಅನೇಕರು ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ. ಆದರೂ ಕೂಡ ಶ್ರೀನಿಧಿ ಶೆಟ್ಟಿ ಅವರ ಅಭಿಮಾನಿಗಳು ಈ ಕುರಿತು ತಲೆ ಕೆಡಿಸಿಕೊಂಡಿಲ್ಲ. ಅಜಿತ್ ಜೊತೆ ಶ್ರೀನಿಧಿ ಶೆಟ್ಟಿ ಚಿತ್ರ ಮಾಡುತ್ತಿದ್ದಾರೆ ಎನ್ನುವ ಸಂಭ್ರಮ ಇವರದ್ದು.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ಪಡೆಯಲು ನಿಮ್ಮ 'ಫಿಲ್ಮಿಬೀಟ್' ವೆಬ್ ಸೈಟ್ ತಂಡ ಶ್ರೀನಿಧಿ ಶೆಟ್ಟಿ ಅವರನ್ನು ಸಂಪರ್ಕಿಸಿತ್ತು. ಅಜಿತ್ ಅವರ ಜೊತೆ ಚಿತ್ರ ಮಾಡುತ್ತಿರುವ ಸುದ್ದಿ ನಿಜಾನಾ ಎಂದು ಪ್ರಶ್ನೆಯನ್ನು ಕೇಳಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಶ್ರೀನಿಧಿ ಶೆಟ್ಟಿ ಅವರ ಕುಟುಂಬಸ್ಥರು ''ಆ ತರಹದ ಮಾತುಕತೆ ಯಾವುದು ನಡೆದಿಲ್ಲ'' ಎಂದಿದ್ದಾರೆ. ಆದರೂ ಕೂಡ ಬೆಂಕಿ ಇರದೇ ಹೊಗೆಯಾಡಲ್ಲ. ಯಾರಿಗೆ ಗೊತ್ತು ಚಿತ್ರತಂಡದವರೇ ಅಧಿಕೃತವಾಗಿ ಹೇಳಲಿ ಎನ್ನುವ ಉದ್ದೇಶ ಇವರ ಈ ಮಾತುಗಳ ಹಿಂದೆ ಇದ್ದರೂ ಇರಬಹುದು.
ಏನೇ ಇರಲಿ ಸದ್ಯ ಅಜಿತ್ ಅವರ ಜೊತೆ ಶ್ರೀನಿಧಿ ಶೆಟ್ಟಿ ತೆರೆ ಹಂಚಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಸದ್ಯ ಕಾಡ್ಗಿಚ್ಚಿನಂತೆ ಹಬ್ಬಿದೆ. ನಿಜಕ್ಕೂ ಶ್ರೀನಿಧಿ ಶೆಟ್ಟಿ, ಅಜಿತ್ ಅಭಿನಯದ 64ನೇ ಚಿತ್ರದ ನಾಯಕಿಯಾಗುತ್ತಾರಾ ಎನ್ನುವುದಕ್ಕೆ ಉತ್ತರ ಕೆಲವೇ ದಿನಗಳಲ್ಲಿ ಸಿಗಲಿದೆ.


Click it and Unblock the Notifications











