ಮೊದಲ ಭಾಗ 500 ಕೋಟಿ.. 2ನೇ ಭಾಗ 300 ಕೋಟಿ ರೂ. ಕಲೆಕ್ಷನ್: 'ಪೊನ್ನಿಯಿನ್ ಸೆಲ್ವನ್' ಗೆದ್ನಾ? ಸೋತ್ನಾ?
ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್'- 2 ಸಿನಿಮಾ ಓಟಿಟಿಗೆ ಬಂದಾಗಿದೆ. ಅಲ್ಲಿಗೆ ಬಾಕ್ಸಾಫೀಸ್‌ನಲ್ಲಿ ಬಹುತೇಕ ಸಿನಿಮಾ ಆಟ ಮುಕ್ತಾಯವಾದಂತಾಗಿದೆ. ಮೊದಲ ಭಾಗಕ್ಕೆ ಹೋಲಿಸಿದರೆ 2ನೇ ಭಾಗ ಅಷ್ಟಾಗಿ ಕಲೆಕ್ಷನ್ ಮಾಡ್ಲಿಲ್ಲ. ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ತ್ರಿಶಾರಂತಹ ಘಟಾನುಘಟಿ ಕಲಾವಿದರು ಕೂಡ ದೊಡ್ಡಮಟ್ಟದಲ್ಲಿ ಈ ಐತಿಹಾಸಿಕ ಚಿತ್ರವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಕಲ್ಕಿ ಕೃಷ್ಣ ಮೂರ್ತಿ ಬರೆದ ಕಾದಂಬರಿಯನ್ನು ಮಣಿರತ್ನಂ ಸಿನಿಮಾ ಮಾಡ್ತಾರಾ ಅಂದಾಗಲೇ ಭಾರೀ ನಿರೀಕ್ಷೆ ಇತ್ತು. ಇದು ಕಾಲಿವುಡ್ 'ಬಾಹುಬಲಿ' ಆಗುತ್ತೆ ಅಂತಲೇ ಎಲ್ಲಾ ಅಂದುಕೊಂಡಿದ್ದರು. ಆದರೆ ಸಿನಿಮಾ ಅಷ್ಟರಮಟ್ಟಿಗೆ ಸದ್ದು ಮಾಡುವಲ್ಲಿ ವಿಫಲವಾಗಿದೆ. ಎಂಜಿಆರ್, ಶಿವಾಜಿ, ರಜನಿಕಾಂತ್, ಕಮಲ್ ಈ ಕಾದಂಬರಿಯಲ್ಲಿ ಸಿನಿಮಾ ಮಾಡುವ ಕನಸು ಕಂಡಿದ್ದರು. ಅದನ್ನು ಮಣಿರತ್ನಂ ಸಾಧಿಸಿ ತೋರಿಸಿದ್ದಾರೆ. ಆ ಪ್ರಯತ್ನದಲ್ಲಿ ಭಾಗಶಃ ಗೆದ್ದಿದ್ದಾರೆ ಕೂಡ. ಆದರೆ ನಿರೀಕ್ಷೆ ತಕ್ಕಂತೆ ಸಿನಿಮಾ ಗೆಲ್ಲಲಿಲ್ಲ.

1000 ವರ್ಷಗಳ ಹಿಂದೆ ಚೋಳರು, ಪಾಂಡ್ಯರ ನಡುವೆ ನಡೆದ ಆಂತರಿಕ ಸಂಘರ್ಷ, ಆಸೆ, ದುರಾಸೆ, ಸೇಡು ಎನ್ನುವ ಅಂಶಗಳನ್ನಿಟ್ಟುಕೊಂಡು ಮಣಿರತ್ನಂ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಐತಿಹಾಸಿಕ ಪಾತ್ರಗಳಲ್ಲಿ ಕಲಾವಿದರು ಕೂಡ ವಿಜೃಂಭಿಸಿದ್ದಾರೆ. ಆದಿತ್ಯಾ ಕರಿಕಾಲನ್ ಆಗಿ ವಿಕ್ರಂ, ನಂದಿನಿಯಾಗಿ ಐಶ್ವರ್ಯ ರೈ, ಕುಂದವೈ ಆಗಿ ತ್ರಿಶಾ, ಅರುಳ್ಮುಳಿ ಆಗಿ ಜಯಂ ರವಿ, ವಂದಿಯದೇವನ್ ಆಗಿ ಕಾರ್ತಿ ನಟಿಸಿ ಗೆದ್ದಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಈ ಕಾಸ್ಟ್ಯೂಮ್ ಡ್ರಾಮಾ ತೆರೆಮೇಲೆ ಮ್ಯಾಜಿಕ್ ಮಾಡಲಿಲ್ಲ.
ಒಟ್ಟು 800 ಕೋಟಿ ರೂ. ಕಲೆಕ್ಷನ್
6 ತಿಂಗಳ ಅಂತರದಲ್ಲಿ 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾಗಳು ರಿಲೀಸ್ ಆಗಿದ್ದು ವಿಶೇಷ. ಇಷ್ಟು ದೊಡ್ಡ ಸಿನಿಮಾವನ್ನು ಇಷ್ಟು ಬೇಗ ಶೂಟ್ ಮಾಡಿ ತೆರೆಗೆ ತಂದ ಮಣಿರತ್ನಂ ಮತ್ತವರ ತಂಡದ ಶ್ರಮವನ್ನು ಮೆಚ್ಚಲೇಬೇಕು. ಇನ್ನಯ ಮೊದಲ ಭಾಗ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. 2ನೇ ಭಾಗ ಅಂದಾಜು 300 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿರುವ ಸಾಧ್ಯತೆಯಿದೆ. ಬಜೆಟ್‌ಗೆ ಹೋಲಿಸಿದರೆ ಸಿನಿಮಾ ನೆಟ್ ಕಲೆಕ್ಷನ್ ಕಮ್ಮಿ ಎನ್ನಬಹುದು. ಚಿತ್ರದಿಂದ ಲಾಭ ಅಷ್ಟಾಗಿ ಬಂದಿಲ್ಲ.

ತಮಿಳು ಪ್ರೇಕ್ಷಕರ ಮನಗೆದ್ದ ಚಿತ್ರ
2000 ಪುಟಗಳ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಹಿಟ್ ಆಗಿತ್ತು. ಅದನ್ನು ಸಿನಿಮಾ ಮಾಡೋದು ನಿಜಕ್ಕೂ ಸವಾಲಿನ ಕೆಲಸ. ಆ ಪ್ರಯತ್ನದಲ್ಲಿ ಮಣಿರತ್ನಂ ಗೆದ್ದಿದ್ದಾರೆ ಎಂದು ಹೇಳಬಹುದು. ಆದರೆ ಸಿನಿಮಾ ತಮಿಳು ಪ್ರೇಕ್ಷಕರಿಗೆ ಮಾತ್ರ ಇಷ್ಟವಾಗಿತು. ಚೋಳರು- ಪಾಂಡ್ಯರ ಕತೆ ಆಗಿದ್ದರಿಂದ ಪರಭಾಷಿಕರಿಗೆ ಅಷ್ಟಾಗಿ ಕನೆಕ್ಟ್ ಆಗಲಿಲ್ಲ. 500 ಕೋಟಿ ರೂ. ಗಳಿಸಿದರೂ ಪ್ಯಾನ್ ಇಂಡಿಯಾ ಹಿಟ್ ಎನಿಸಿಕೊಳ್ಳಲಿಲ್ಲ. ಆದರೆ ತಮಿಳುನಾಡಿನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ.
2ನೇ ಭಾಗ ಚೆನ್ನಾಗಿದ್ರು ಜನ ಬರಲಿಲ್ಲ
ಮೊದಲ ಭಾಗಕ್ಕೆ ಹೋಲಿಸಿದರೆ 2ನೇ ಭಾಗ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿತ್ತು. ಆದರೆ ಮೊದಲ ಭಾಗ ನಿರಾಸೆ ಮೂಡಿಸಿದ್ದರಿಂದ ಮುಂದುವರೆದ ಭಾಗದ ಬಗ್ಗೆ ಜನರಿಗೆ ಕುತೂಹಲ ಇರಲಿಲ್ಲ. ಓಟಿಟಿಗೆ ಬಂದಾಗ ನೋಡೋಣ ಎಂದು ಸುಮ್ಮನಾಗಿಬಿಟ್ಟರು ಅನ್ನಿಸುತ್ತದೆ. ಸಾಮಾನ್ಯವಾಗಿ ಮೊದಲ ಭಾಗಕ್ಕಿಂತ 2ನೇ ಭಾಗ ದೊಡ್ಡಮಟ್ಟದಲ್ಲಿ ಸದ್ದು ಮಾಡಬೇಕು. ಆದರೆ 'ಪೊನ್ನಿಯಿನ್ ಸೆಲ್ವನ್' -2 ಸಿನಿಮಾ ವಿಚಾರದಲ್ಲಿ ಆ ಮಾತು ಸುಳ್ಳಾಯಿತು.
'ಬಾಹುಬಲಿ'ಗೆ ಹೋಲಿಸಿದ್ದು ತಪ್ಪಾಯ್ತಾ?
ಬಹುತೇಕರು ತಮಿಳಿನ 'ಪೊನ್ನಿಯಿನ್ ಸೆಲ್ವನ್' -2 ಚಿತ್ರವನ್ನು ರಾಜಮೌಳಿ 'ಬಾಹುಬಲಿ' ಸರಣಿಗೆ ಹೋಲಿಸಿದ್ದು ತಪ್ಪಾಯಿತು ಎನ್ನಲಾಗುತ್ತದೆ. 'ಬಾಹುಬಲಿ' ಕಾಲ್ಪನಿಕ ಕಥೆ. ಅದರಲ್ಲಿ ಎಲಿವೇಷನ್ ಸನ್ನಿವೇಶಗಳು, ಫ್ಯಾಂಟಸಿ, ಸೂಪರ್ ಹೀರೊಗಳು, ಯುದ್ಧ ಸನ್ನಿವೇಶಗಳನ್ನು ಇಡಲು ಅವಕಾಶ ಇತ್ತು. ಆದರೆ 'ಪೊನ್ನಿಯಿನ್ ಸೆಲ್ವನ್' ಐತಿಹಾಸಿಕ ಕಥೆಯನ್ನು ಆಧರಿಸಿ ಬರೆದ ಕಾದಂಬರಿ. ಕಾದಂಬರಿ ಅಲ್ಲಿ ಇರುವುದನ್ನು ಬಿಟ್ಟು ಏನೇನೋ ತೋರಿಸಲು ಸಾಧ್ಯವಿಲ್ಲ. ಆದರೆ ಬಹುತೇಕರು 'ಬಾಹುಬಲಿ' ಸಿನಿಮಾ ಕೊಟ್ಟ ಕಿಕ್ ಈ ಸಿನಿಮಾ ಕೊಡಲಿಲ್ಲ ಎಂದುಬಿಟ್ಟರು. ಇದೇ ವಿಚಾರಕ್ಕೆ ತೆಲುಗಿನ ಕೆಲವರು ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ದರು.


Click it and Unblock the Notifications











