ಸೇನಾಪತಿ ಮಗ ಚಂದ್ರು ಇನ್ನು ಬದುಕಿದ್ದಾನಾ? 'ಇಂಡಿಯನ್-2' ಟ್ವಿಸ್ಟ್ ಅದೇನಾ?
ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮುಂದಿನ ತಿಂಗಳು ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಶಂಕರ್ ನಿರ್ದೇಶನದ ಚಿತ್ರದಲ್ಲಿ ಮತ್ತೊಮ್ಮೆ ಸೇನಾಪತಿ ಆಗಿ ಕಮಲ್ ಹಾಸನ್ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಮರ ಶುರುವಾಗುತ್ತಿದೆ.
28 ವರ್ಷಗಳ ಹಿಂದೆ ಬಂದಿದ್ದ 'ಇಂಡಿಯನ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಶಂಕರ್ ಟೇಕಿಂಗ್, ಕಮಲ್ ಆಕ್ಟಿಂಗ್ ಸೇರಿ ತೆರೆಮೇಲೆ ಸಿನಿಮಾ ಮ್ಯಾಜಿಕ್ ಮಾಡಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಸೈನಿಕನಾಗಿ ಹೋರಾಡಿದ ಸೇನಾಪತಿ, 40 ವರ್ಷಗಳ ಬಳಿಕ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಚಿತ್ರದಲ್ಲಿತ್ತು. ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎನ್ನುವಂತೆ ಭ್ರಷ್ಟರನ್ನು ಕೊಂದು ಸಮಾಜದಲ್ಲಿ ಭ್ರಷ್ಟಾಚಾರ ತೊಲಗಿಸುವ ಪ್ರಯತ್ನ ಮಾಡುತ್ತಾನೆ. ಈ ಹಾದಿಯಲ್ಲಿ ತನ್ನ ಮಗನನ್ನು ಕೊಲ್ಲುವುದಕ್ಕೂ ಸೇನಾಪತಿ ಹಿಂದುಮುಂದು ನೋಡಲ್ಲ.

ಸ್ವಂತ ಮಗನೇ ಲಂಚ ತೆಗೆದುಕೊಂಡ ಪರಿಣಾಮ ಆಗುವ ಅನಾಹುತ ಕಂಡು ಮರಗುವ ಸೇನಾಪತಿ ಆತನನ್ನು ಚುಚ್ಚಿ ಸಾಯಿಸುತ್ತಾನೆ. ಕೊನೆಗೆ ತಂದೆ ಮಗ ಇದ್ದ ಜೀಪ್ ವಿಮಾನಕ್ಕೆ ಡಿಕ್ಕಿ ಹೊಡೆದು ಸ್ಫೋಟಗೊಂಡು ಸುಟ್ಟು ಹೋಗುತ್ತದೆ. ಆದರೆ ಸೇನಾಪತಿ ಸತ್ತಿರುವುದಿಲ್ಲ. ವಿದೇಶದಿಂದ ಪೊಲೀಸ್ ಇಲಾಖೆ ಫೋನ್ ಮಾಡಿ ಮಾತನಾಡುತ್ತಾನೆ. ನಾನು ಸತ್ತಿಲ್ಲ. ಎಲ್ಲೇ ಅನ್ಯಾಯ ನಡೆದರೂ ನಾನು ಅಲ್ಲಿ ಬರ್ತೀನಿ ಎಂದು ಹೇಳಿರುತ್ತಾನೆ.
ಇದೀಗ 28 ವರ್ಷಗಳ ಬಳಿಕ 'ಇಂಡಿಯನ್' ಸೀಕ್ವೆಲ್ ಬರ್ತಿದೆ. ದೇಶದಲ್ಲಿ ನಡೆಯುತ್ತಿರುವ ಅನ್ಯಾಯ ಎದುರಿಸಲು ಸೇನಾಪತಿ ಮತ್ತೆ ಬರುವಂತೆ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಮತ್ತೊಮ್ಮೆ ಸೇನಾಪತಿಯಾಗಿ ಕಮಲ್ ಹಾಸನ್ ಅಬ್ಬರಿಸಿದ್ದಾರೆ. 'ಇಂಡಿಯನ್-2' ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ವಿವಿಧ ಗೆಟಪ್‌ಗಳಲ್ಲಿ ಉಳಗನಾಯಗನ್ ಅಬ್ಬರಿಸಿದ್ದಾರೆ. ಮೈ ಜುಮ್ ಎನಿಸುವ ಸ್ಟಂಟ್ಸ್ ಮಾಡಿರುವಂತೆ ತೋರಿಸಲಾಗಿದೆ. ಆ ವಯಸ್ಸಿನಲ್ಲಿ ಅಷ್ಟೆಲ್ಲಾ ಸ್ಟಂಟ್ಸ್ ಸಾಧ್ಯವೇ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಈ ಬಗ್ಗೆ ಕಮಲ್, ಶಂಕರ್ ಸಹ ಪ್ರತಿಕ್ರಿಯಿಸಿದ್ದಾರೆ.
ಟ್ರೈಲರ್ ರಿಲೀಸ್ ಬೆನ್ನಲ್ಲೇ ಪ್ರೀಕ್ವೆಲ್‌ನಲ್ಲಿ ಸೇನಾಪತಿ ಬಯೋಡೆಟಾ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ. ಅದರಲ್ಲಿ ಸೇನಾಪತಿ ಡೇಟ್ ಆಫ್ ಬರ್ತ್ 1918 ಎಂದು ಇರುವುದನ್ನು ನೋಡಬಹುದು. ಆ ಲೆಕ್ಕದಲ್ಲಿ ಕಥೆಯ ಪ್ರಕಾರ ಆತನ ವಯಸ್ಸು 106 ವರ್ಷ. ಅಷ್ಟು ವಯಸ್ಸಾದ ವೃದ್ಧ ಈ ರೀತಿ ಫೈಟ್ಸ್ ಮಾಡೋದು ಹೇಗೆ? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಸೇನಾಪತಿ ಮಗ ಚಂದ್ರು ಸತ್ತಿಲ್ಲ. ಆತನೇ ಇದೀಗ ಸೇನಾಪತಿ ರೀತಿ ಅಬ್ಬರಿಸಿದ್ದಾನೆ ಎನ್ನುವುದು ಕೆಲವರ ವಾದ.

ಹೇಳಿ ಕೇಳಿ ಇದು ಸಿನಿಮಾ ಕಥೆ. ಇಲ್ಲಿ ಸತ್ತವರನ್ನು ಬದುಕಿಸುವುದು, ಬದುಕಿರುವವರು ಸತ್ತಂತೆ ತೋರಿಸುವುದು ಕಷ್ಟವೇನಲ್ಲ. ಪ್ರೇಕ್ಷಕರನ್ನು ನಂಬಿಸುವ ಪ್ರತಿಭೆ ಇದ್ದರೆ ಸಾಕು. ಪ್ರೀಕ್ವೆಲ್ ಕ್ಲೈಮ್ಯಾಕ್ಸ್‌ನಲ್ಲಿ ಸೇನಾಪತಿ ತಪ್ಪಿಸಿಕೊಂಡಂತೆ ಮಗ ಕೂಡ ತಪ್ಪಿಸಿಕೊಂಡಿರಬಹುದು. ತನ್ನ ತಪ್ಪಿ ಅರಿವಾಗಿ ಭ್ರಷ್ಟಚಾರದ ವಿರುದ್ಧ ಸಮರಕ್ಕೆ ತಂದೆ ಜೊತೆ ಕೈ ಜೋಡಿಸಬಹುದು. ಅದೇ ಕಥೆಯನ್ನು ಸೀಕ್ವೆಲ್‌ನಲ್ಲಿ ಹೇಳುತ್ತಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.
'ಇಂಡಿಯನ್-2' ಮಾತ್ರವಲ್ಲ 'ಇಂಡಿಯನ್-3' ಕೂಡ ಬರ್ತಿದೆ. 106 ವರ್ಷ ವಯಸ್ಸಿನ ಸೇನಾಪತಿ ಕಥೆಯನ್ನು 2 ಭಾಗಗಳಲ್ಲಿ ಮುಂದುವರೆಸುವುದು ಕಷ್ಟ. ಚಿತ್ರದಲ್ಲಿ ಕಮಲ್ ಮತ್ತೆ ತಂದೆ ಮಗನಾಗಿ ಡಬಲ್ ರೋಲ್ ಪ್ಲೇ ಮಾಡಿರುವ ಸಾಧ್ಯತೆಯಿದೆ. ತೆರೆಮೇಲೆ ಅದೇ ದೊಡ್ಡ ಟ್ವಿಸ್ಟ್ ಇರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.
ಚಿತ್ರದಲ್ಲಿ ಸಿದ್ದಾರ್ಥ್, ರಕುಲ್ ಪ್ರೀತ್ ಸಿಂಗ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಾಕಿ ಶ್ರಾಫ್, ಎಸ್. ಜೆ ಸೂರ್ಯ ವಿಲನ್‌ಗಳಾಗಿ ಅಬ್ಬರಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ರವಿ ವರ್ಮಾ ಛಾಯಾಗ್ರಹಣ, ಅನಿರುದ್ದ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.


Click it and Unblock the Notifications











