Thalaivar175: ತಮ್ಮ 175ನೇ ಚಿತ್ರಕ್ಕೆ ಸಹಿ ಮಾಡಿದ ರಜನಿಕಾಂತ್; ಇದೇ ಕೊನೆ ಸಿನಿಮಾ?
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ವಿಭಿನ್ನ ಸ್ಟೈಲ್, ಮ್ಯಾನರಿಸಂ ಮೂಲಕ ದಶಕಗಳಿಂದ ಸಿನಿರಸಿಕರನ್ನು ರಂಜಿಸುತ್ತಿದ್ದಾರೆ. 170ಕ್ಕೂ ಅಧಿಕ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ನಟಿಸಿದ್ದಾರೆ. 'ಜೈಲರ್'-2 ಸಿನಿಮಾ ಮೂಲಕ ಶೀಘ್ರದಲ್ಲೇ ತೆರೆಮೇಲೆ ಬರಲಿದ್ದಾರೆ. ಮತ್ತೆರಡು ಸಿನಿಮಾಗಳು ಫೈನಲ್ ಆಗಿದೆ. ಇದೆಲ್ಲದರ ನಡುವೆ ರಜನಿಕಾಂತ್ ನಿವೃತ್ತಿ ಬಗ್ಗೆ ಚರ್ಚೆ ಶುರುವಾಗಿದೆ.
ಸೂಪರ್ ಸ್ಟಾರ್ ಸಿನಿಮಾಗಳಿಗೆ ಗುಡ್ ಬೈ ಹೇಳ್ತಾರೆ ಎನ್ನುವ ಚರ್ಚೆ ಇಂದು ನಿನ್ನೆಯದಲ್ಲ. ಈ ಹಿಂದೆ ಕೂಡ ಅಂತಹ ಮಾತುಗಳು ಕೇಳಿಬಂದಿತ್ತು. ರಜನಿಕಾಂತ್ ನಟನೆಯ 172ನೇ ಸಿನಿಮಾ 'ಜೈಲರ್'-2 ಇದೇ ಅಕ್ಟೋಬರ್ 16ಕ್ಕೆ ತೆರೆಗೆ ಬರಲಿದೆ. 173ನೇ ಚಿತ್ರ ಇತ್ತೀಚೆಗೆ ಶುರುವಾಗಿದೆ. 'ಧರ್ಮನ್' ಹೆಸರಿನ ಚಿತ್ರದಲ್ಲಿ ಡಾಕ್ಟರ್ ಪಾತ್ರದಲ್ಲಿ ತಲೈವಾ ನಟಿಸುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಕೂಡ ಗಮನ ಸೆಳೆದಿದೆ. ಕಮಲ್ ಹಾಸನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ದಶಕಗಳ ಬಳಿಕ ಕಮಲ್ ಹಾಸನ್ ಜೊತೆ ರಜನಿಕಾಂತ್ ಕೈಜೋಡಿಸಿದ್ದಾರೆ. ಕಮಲ್ ನಿರ್ಮಾಣದ ಚಿತ್ರದಲ್ಲಿ ನಟಿಸುವುದು ಮಾತ್ರವಲ್ಲ, ಮಲ್ಟಿಸ್ಟಾರರ್ ಚಿತ್ರದಲ್ಲಿ ಇಬ್ಬರೂ ತೆರೆ ಹಂಚಿಕೊಳ್ಳುತ್ತಿದ್ದಾರೆ. ನೆಲ್ಸನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಪ್ರೋಮೊ ಸಮೇತ ಸಿನಿಮಾ ಘೋಷಣೆಯಾಗಿದೆ. ರೆಡ್ ಜೈಂಟ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಲಿದೆ. ಇದೆಲ್ಲದರ ನಡುವೆ ರಜನಿಕಾಂತ್ ನಟನೆಯ 175ನೇ ಸಿನಿಮಾ ಬಗ್ಗೆ ಗುಸುಗುಸು ಶುರುವಾಗಿದೆ.
ತಲೈವಾ 175 ಚಿತ್ರಕ್ಕೆ ಸಹಿ?
ಸದ್ಯ ರಜನಿಕಾಂತ್ ನಟನೆಯ 17ನೇ ಸಿನಿಮಾ ಮಾತುಕತೆ ನಡೆದಿದ್ದು ಈಗಾಗಲೇ ಗ್ರೀನ್ ಸಿಗ್ನಲ್ ಕಟ್ಟಿದ್ದಾರೆ. ನಿರ್ದೇಶಕರು ಫೈನಲ್ ಆಗಿದ್ದು ರಜನಿಕಾಂತ್ ಚಿತ್ರಕ್ಕೆ ಸಹಿ ಮಾಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇದೇ ಕೊನೆಯ ಸಿನಿಮಾ. 175 ಸಿನಿಮಾ ಮುಗಿಸಿದ ಬಳಿಕ ತಲೈವಾ ವಿಶ್ರಾಂತಿ ಪಡೆಯುತ್ತಾರೆ. ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನುವ ಅಂತೆಕಂತೆ ಸುದ್ದಿ ಹರಿದಾಡುತ್ತಿದೆ. ದಶಕಗಳ ಹಿಂದೆ 'ಬಾಬಾ' ಸಿನಿಮಾ ಬಂದಾಗಲೇ ರಜನಿಕಾಂತ್ ಚಿತ್ರರಂಗಕ್ಕೆ ಗುಡ್‌ಬೈ ಹೇಳ್ತಾರೆ ಎಂದು ಗುಲ್ಲಾಗಿತ್ತು. ಬಳಿಕ ಅದು ಸುಳ್ಳಾಗಿತ್ತು.

ಫ್ಯಾನ್ಸ್ ಬೇಸರ
ಈಗಾಗಲೇ ತಮಿಳು ನಟ ವಿಜಯ್ ಸಿನಿಮಾ ಬಿಟ್ಟು ರಾಜಕೀಯರಂಗ ಪ್ರವೇಶಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ವಿಜಯ್ ಸದ್ಯಕ್ಕೆ ಸಿನಿಮಾಗಳಲ್ಲಿ ನಟಿಸುವುದು ದೂರದ ಮಾತು ಎನ್ನುವಂತಾಗಿದೆ. ಈಗ ರಜನಿಕಾಂತ್ ಕೂಡ ಚಿತ್ರರಂಗದಿಂದ ದೂರಾಗುತ್ತಾರಾ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಹೀರೊ ಆಗಿಯೇ ನಿವೃತ್ತಿ?
ಸಾಮಾನ್ಯವಾಗಿ ನಾಯಕ ನಟರು ವರ್ಷಗಳು ಕಳೆದಂತೆ ಪೋಷಕ ಪಾತ್ರಗಳತ್ತ ಮುಖ ಮಾಡುತ್ತಾರೆ. ಆದರೆ ರಜನಿಕಾಂತ್ ಹೀರೊ ಆಗಿಯೇ ಕೊನೆಯವರೆಗೂ ಉಳಿಯಲು ಬಯಸಿದ್ದಾರೆ. ಹಾಗಾಗಿ ಪೋಷಕ ಪಾತ್ರಗಳಲ್ಲಿ ನಟಿಸುವುದಿಲ್ಲ. ಹೀರೊ ಆಗಿ ಒಂದಷ್ಟು ಸಿನಿಮಾಗಳಲ್ಲಿ ಬೇಗ ನಟಿಸಿ ಬಳಿಕ ಸಿನಿಮಾಗಳಿಂದ ದೂರಾಗುತ್ತಾರೆ ಎನ್ನಲಾಗ್ತಿದೆ. ಆಪ್ತ ಸ್ನೇಹಿತ ರಾಜ್ ಬಹದ್ದೂರ್ ಕೂಡ ಸಂದರ್ಶನವೊಂದರಲ್ಲಿ ಈ ಮಾತು ಹೇಳಿದ್ದರು.
ಸೂಪರ್ ಸ್ಟಾರ್ ಯುಗಾಂತ್ಯ?
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಿವಾಜಿರಾವ್ ಆರಂಭದಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದರು. ಬಳಿಕ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಕಲಿತು ಸಿನಿಮಾರಂಗದತ್ತ ಮುಖ ಮಾಡಿದ್ದರು. ಆರಂಭದಲ್ಲಿ ಒಂದೆರಡು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಕೆ. ಬಾಲಚಂದರ್ ನಿರ್ದೇಶನದ 'ಅಪೂರ್ವ ರಾಗಂಗಳ್' ಸಿನಿಮಾ ಹಿಟ್ ಆಗಿತ್ತು. ಆ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ರಜನಿಕಾಂತ್ ಬಳಿಕ ಹೀರೊ ಆಗಿದ್ದರು. ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದರು. ರಜನಿಕಾಂತ್ ಸಿನಿಮಾಗಳಿಂದ ದೂರಾಗುವುದನ್ನು ಒಪ್ಪಿಕೊಳ್ಳಲು ಯಾರೊಬ್ಬರು ಸಿದ್ಧರಿಲ್ಲ.


Click it and Unblock the Notifications