ಪೈರಸಿ ಸಿನಿಮಾಗಳ ಕಿಂಗ್ ತಮಿಳ್ ರಾಕರ್ಸ್ 'ಸೇವೆ' ಸ್ಥಗಿತ!?
ನಿರ್ಮಾಪಕರ ಪಾಲಿಗೆ ಯಮಧೂತರೇ ಆಗಿದ್ದ ತಮಿಳ್ ರಾಕರ್ಸ್ ತಂಡ ತಮ್ಮ ಪೈರಸಿ ಕಾರ್ಯವನ್ನು ಸ್ಥಗಿತಗೊಳಿಸಿದೆ ಎನ್ನಲಾಗುತ್ತಿದೆ.
ಬಹುತೇಕ ಎಲ್ಲಾ ಸಿನಿಮಾಗಳನ್ನು ಪೈರಸಿ ಮಾಡಿ ಆನ್‌ಲೈನ್ ನಲ್ಲಿ ಉಚಿತವಾಗಿ ಹಂಚಿಕೆ ಮಾಡುತ್ತಿದ್ದ ತಮಿಳ್ ರಾಕರ್ಸ್ ಭಾರತದಾದ್ಯಂತ ಕುಖ್ಯಾತಿ ಗಳಿಸಿತ್ತು.
ಒಂದು ದಶಕದಿಂದಲೂ ಸಿನಿಮಾ ಪೈರಸಿ ಕೆಲಸ ಮಾಡುತ್ತಿದ್ದ ತಮಿಳು ರಾಕರ್ಸ್ ಎಂದರೆ ನಿರ್ಮಾಪಕರುಗಳು ಹೆದರಿ ಬೀಳುತ್ತಿದ್ದರು. ತಮಿಳು ರಾಕರ್ಸ್ ವಿರುದ್ಧ ದಾಖಲಾಗಿರುವ ದೂರುಗಳಿಗಂತೂ ಲೆಕ್ಕವೇ ಇಲ್ಲ. ಇಂಥಹಾ ತಮಿಳು ರಾಕರ್ಸ್ ಇನ್ನು ಮುಂದೆ ಪೈರಸಿ ಮಾಡುವುದಿಲ್ಲ ಎನ್ನಲಾಗುತ್ತಿದೆ.

ತಮಿಳ್ ರಾಕರ್ಸ್ ಸ್ಥಗಿತಗೊಳ್ಳುತ್ತಿದೆ?
ತಮಿಳ್ ರಾಕರ್ಸ್ ತನ್ನ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುದ್ದಿಯ ಜೊತೆಗೆ ತಮಿಳು ರಾಕರ್ಸ್ ಅವರದ್ದು ಎನ್ನಲಾದ ಸಂದೇಶವೊಂದರ ಸ್ಕ್ರೀನ್ ಶಾಟ್ ಸಹ ಹರಿದಾಡುತ್ತಿದೆ.

ಸ್ಕ್ರೀನ್ ಶಾಟ್ ಒಂದು ಹರಿದಾಡುತ್ತಿದೆ
'ಒಂದು ವರ್ಷಕ್ಕೂ ಹೆಚ್ಚು ಕಾಲದ ಸೇವೆಗೆ ಧನ್ಯವಾದಗಳು ತಮಿಳ್ ರಾಕರ್ಸ್- ಟಿಎಂವಿ ತಂಡ' ಎಂದು ಬರೆದಿರುವ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಮಿಳ್ ರಾಕರ್ಸ್ ಇನ್ನುಮುಂದೆ ಕೆಲಸ ಮಾಡುವುದಿಲ್ಲ ಎಂದು ಸುದ್ದಿ ಹಬ್ಬಲಾಗುತ್ತಿದೆ.

ತಮಿಳ್ ರಾಕರ್ಸ್ ತಂಡದಿಂದ ಮಾಹಿತಿ ಇಲ್ಲ
ತಮಿಳ್ ರಾಕರ್ಸ್ ಇನ್ನು ಮುಂದೆ ಸ್ಥಗಿತಗೊಳ್ಳಲಿದೆ ಎಂಬ ಬಗ್ಗೆ ತಮಿಳ್ ರಾಕರ್ಸ್ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಟ್ವಿಟ್ಟರ್‌ನಲ್ಲೂ ಸಹ ಕೆಲವರು ತಮಿಲ್ ರಾಕರ್ಸ್ ಪೈರಸಿ ಮುಂದುವರೆಸಲಿದೆ ಎಂದು ಹೇಳುತ್ತಿದ್ದಾರೆ.

ಕೆಲವೇ ಗಂಟೆಗಳಲ್ಲಿ ಸಿನಿಮಾ ಪೈರಸಿ ಮಾಡುತ್ತದೆ ತಮಿಳ್ ರಾಕರ್ಸ್
ತಮಿಳ್ ರಾಕರ್ಸ್ ತಂಡವು ಬಹುತೇಕ ಎಲ್ಲಾ ಸೂಪರ್ ಸ್ಟಾರ್ ಗಳ ಸಿನಿಮಾವನ್ನು ಪೈರಸಿ ಮಾಡಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ಒಟಿಟಿಗಳು ಬಂದ ನಂತರವಂತೂ ಸಿನಿಮಾ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಅದರ ಪೈರಸಿ ಮಾಡಿ ಹರಿಬಿಡುತ್ತದೆ ತಮಿಳ್ ರಾಕರ್ಸ್ ತಂಡ.


Click it and Unblock the Notifications











