"ಯಶ್ ನನ್ನ ಬಳಿ ಕಣ್ಣೀರು ಹಾಕಿದ್ದ" ಎನ್ನುವ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ ಜೈ ಆಕಾಶ್
ರಾಕಿಂಗ್ ಸ್ಟಾರ್ ಅಭಿಮಾನಿಗಳು ಯಶ್19 ಅಪ್‌ಡೇಟ್‌ಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ರಾಕಿಭಾಯ್ ಮುಂದಿನ ಸಿನಿಮಾ ಸುದ್ದಿವೊಂದು ಬಿಟ್ಟು ಬೇರೆ ಸುದ್ದಿಗಳೆಲ್ಲಾ ಭಾರೀ ಸದ್ದು ಮಾಡುತ್ತಿವೆ. ಇತ್ತೀಚೆಗೆ ತಮಿಳು ನಟ ಜೈ ಆಕಾಶ್, ಯಶ್ ಕುರಿತು ಆಡಿದ್ದ ಮಾತುಗಳು ವೈರಲ್ ಆಗಿತ್ತು. ಆದರೆ ತಮ್ಮ ಹೇಳಿಕೆ ಬಗ್ಗೆ ಜೈ ಆಕಾಶ್ ಕ್ಷಮೆ ಕೇಳಿದ್ದಾರೆ.
16 ವರ್ಷಗಳ ಹಿಂದೆ ಬಂದ 'ಜಂಭದ ಹುಡುಗಿ' ಚಿತ್ರದಲ್ಲಿ ಯಶ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಚಿತ್ರದಲ್ಲಿ ಜೈ ಆಕಾಶ್ ಹೀರೊ ಆಗಿ ನಟಿಸಿದ್ದರೆ ಯಶ್ ಆತನ ಸಹೋದರನ ಪಾತ್ರದಲ್ಲಿ ನಟಿಸಿದ್ದರು. "ಆ ಸಿನಿಮಾ ಶೂಟಿಂಗ್ ವೇಳೆ KGF ನಟ ಯಶ್ ಬಂದು ನನ್ನ ಬಳಿ ಕಣ್ಣೀರು ಹಾಕಿದ್ದ" ಎಂದು ಜೈ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು.

ಸದ್ಯ ಇದ್ದಕ್ಕಿದಂತೆ ತಮ್ಮ ಹೇಳಿಕೆ ಬಗ್ಗೆ ಜೈ ಆಕಾಶ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿ ಪ್ರತಿಕ್ರಿಯಿಸಿದ್ದಾರೆ. ಯಶ್ ಕ್ಷಮೆ ಕೂಡ ಕೇಳಿದ್ದಾರೆ. "ಎಲ್ಲರಿಗೂ ನಮಸ್ಕಾರ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಯಶ್ ಬಗ್ಗೆ ಪ್ರಶ್ನೆ ಎದುರಾಗಿತ್ತು. ಅದಕ್ಕೆ ನಾನು, ಯಶ್ ಒಟ್ಟಿಗೆ ನಟಿಸಿದ್ದೆವು. ಕನ್ನಡದಲ್ಲಿ ನನ್ನ ಮೊದಲ ಚಿತ್ರ ಜಂಭದ ಹುಡುಗಿ ಚಿತ್ರದಲ್ಲಿ ನನ್ನ ತಮ್ಮನ ಪಾತ್ರದಲ್ಲಿ ಯಶ್ ನಟಿಸಿದ್ದರು."
"ಯಶ್ ಆ ಸಿನಿಮಾದಲ್ಲಿ ನನ್ನೊಟ್ಟಿಗೆ ನಟಿಸುವಾಗ ಬಂದು ನನ್ನ ಬಳಿ ಮಾತನಾಡಿದರು. ಅವರೊಟ್ಟಿಗೆ ನಟಿಸುವಾಗ ನಾನು ಸಲಹೆ ನೀಡಿದ್ದೆ. ಅದರ ಬಗ್ಗೆ ನಾನು ಕ್ಯಾಷ್ಯುವಲ್ ಆಗಿ ಫ್ಲೋನಲ್ಲಿ ಆತುರದಲ್ಲಿ ಮಾತನಾಡಿದ್ದೆ. ಆದರೆ ಅದನ್ನು ಎಡಿಟ್ ಮಾಡಿ, ಬಹಳ ಜನಕ್ಕೆ ಯಶ್ ಗೊತ್ತಿಲ್ಲ. ಎನ್ನುವ ಅರ್ಥದಲ್ಲಿ ಹೇಳಿದ್ದಾಗಿ ಅದು ತಪ್ಪಾಗಿ ತೋರ್ಪಟ್ಟಿತ್ತು. ನಾನು ಯಶ್‌ನ ಸಹೋದರನ ರೀತಿ ನೋಡಿದ್ದೆ. ಹಾಗಾಗಿ ಮಾತನಾಡುವಾಗ ಆ ಹುಡುಗ, ಅವನು, ಇವನು ಎಂದು ಹೇಳಿದ್ದೆ"
"ನನ್ನ ತಮ್ಮ ಎನ್ನುವ ಭಾವನೆಯಲ್ಲಿ ಯಶ್ ಬಗ್ಗೆ ನಾನು ಏಕವಚನದಲ್ಲಿ ಮಾತನಾಡಿದ್ದೆ. ಆದರೆ ಯಶ್ ಈಗ ನ್ಯಾಷನಲ್ ಸ್ಟಾರ್. ಹಾಗಾಗಿ ಅವರ ಬಗ್ಗೆ ನಾನು ಆ ರೀತಿ ಮಾತನಾಡಬಾರದಿತ್ತು. ಬಳಿಕ ನನಗೆ ಅದು ಅರ್ಥ ಆಯಿತು. ಫ್ಲೋನಲ್ಲಿ ಮಾತನಾಡಿಬಿಟ್ಟೆ ಎನಿಸಿತು. ಇದರಿಂದ ನನಗೆ ಬೇಸರವಾಯಿತು. ಸಾಕಷ್ಟು ಜನ ಆ ವಿಡಿಯೋ ನೋಡಿ, ಕಾಮೆಂಟ್ ಮಾಡಿದ್ದರು"
"ಯಶ್ ನನ್ನ ಸ್ವಂತ ತಮ್ಮನ ತರ. ಆ ಸಲುಗೆಯಲ್ಲಿ ಮಾತನಾಡುವಾಗ ಅವನು, ಎಂದು ಏಕವಚನದಲ್ಲಿ ಹೇಳಿದ್ದೆ. ಆದರೆ ಸಭ ಮರ್ಯಾದೆ ಎನ್ನುವುದು ಒಂದಿದೆ. ಹಾಗಾಗಿ ನಾನು ಮಾಡಿದ್ದು ತಪ್ಪು. ಅದನ್ನು ತಪ್ಪಾಗಿ ಭಾವಿಸಬೇಡಿ. ನನಗೆ ನನ್ನ ತಮ್ಮ ಯಶ್ ಬಗ್ಗೆ ಬಹಳ ಹೆಮ್ಮೆ ಇದೆ. ಯಶ್ ಸಹೋದರ ಇನ್ನು ಎತ್ತರಕ್ಕೆ ಬೆಳೆಯಬೇಕು. ನನ್ನ ಮಾತುಗಳು ಯಾರನ್ನಾದರೂ ನೋಯಿಸಿದ್ದರೆ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ" ಎಂದು ಜೈಆಕಾಶ್ ತಿಳಿಸಿದ್ದಾರೆ.
ಇನ್ನು ಜೈಆಕಾಶ್ ಅಂದು ಸುದ್ದಿಗೋಷ್ಠಿಯಲ್ಲಿ ಯಶ್ ಬಗ್ಗೆ ಏನು ಹೇಳಿದ್ದರು ಎನ್ನುವುದನ್ನು ನೋಡುವುದಾದರೆ "ಜಂಭದ ಹುಡುಗಿ ಚಿತ್ರಕ್ಕೆ ಯಶ್‌ನ ಆಯ್ಕೆ ಮಾಡಿದ್ದೇ ನಾನು. ಮತ್ತೆ ಧಾರಾವಾಹಿ ಮಾಡಲು ಇಷ್ಟವಿಲ್ಲ. ಇಲ್ಲಿ ಯಾರೂ ಅವಕಾಶ ಕೊಡೋದಿಲ್ಲ ಅಂತಾರೆ ಎಂದು ಯಶ್ ನನ್ನ ಬಳಿ ಕಣ್ಣೀರು ಹಾಕಿದ್ದರು. ಆಗ ಆತನನ್ನು ಸಮಾಧಾನ ಮಾಡಿ, ಊಟ ಮಾಡಿಸಿ ಚಿತ್ರಕ್ಕೆ ಆಯ್ಕೆ ಮಾಡಿದ್ದೆ" ಎಂದು ಜೈ ಆಕಾಶ್ ಹೇಳಿದ್ದರು.
ಯಶ್ ಸಿನಿಮಾಗಳ ವಿಚಾರಕ್ಕೆ ಬಂದರೆ 'KGF-2' ಬಳಿಕ ಯಾವುದೇ ಸಿನಿಮಾ ಘೋಷಿಸಿಲ್ಲ. ಆ ಸಿನಿಮಾ ಬಂದೋಗಿ ಒಂದೂವರೆ ವರ್ಷ ಆಯಿತು. ಇನ್ನು ಹೊಸ ಸಿನಿಮಾ ಅಪ್‌ಡೇಟ್ ಸಿಕ್ಕಿಲ್ಲ. ಸಿನಿಮಾ ಅನೌನ್ಸ್ ಯಾವಾಗ? ಶೂಟಿಂಗ್ ಯಾವಾಗ? ರಿಲೀಸ್ ಯಾವಾಗ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.


Click it and Unblock the Notifications











