Jailer: ಎಲ್ಲೆಡೆ ಜೈಲರ್ ದರ್ಬಾರ್; 3 ದಿನಗಳಲ್ಲಿ ಚಿತ್ರ ಮಾಡಿದ ಕಲೆಕ್ಷನ್ ಎಷ್ಟು?
ಆಗಸ್ಟ್ 10ರಿಂದ ಆನ್‌ಲೈನ್ ಹಾಗೂ ಆಫ್‌ಲೈನ್ ಎರಡರಲ್ಲಿಯೂ ಹೆಚ್ಚಾಗಿ ಚರ್ಚೆಗೀಡಾಗಿರುವ ಚಿತ್ರವೆಂದರೆ ಅದು ತಮಿಳಿನ ಜೈಲರ್. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಿರುವ ಜೈಲರ್ ಪ್ಯಾನ್ ಇಂಡಿಯಾ ಚಿತ್ರವಾಗಿದೆ. 2021ರಲ್ಲಿ ಅಣ್ಣಾತ್ತೆ ಸಿನಿಮಾ ಮಾಡಿ ಕೈ ಸುಟ್ಟುಕೊಂಡಿದ್ದ ರಜನಿಕಾಂತ್ ಹಾಗೂ ಕಳೆದ ವರ್ಷ ಬೀಸ್ಟ್ ಚಿತ್ರ ಮಾಡಿ ಹೀನಾಯವಾಗಿ ಟ್ರೋಲ್ ಆಗಿದ್ದ ನೆಲ್ಸನ್ ಕುಮಾರ್ ಇಬ್ಬರೂ ಸಹ ಜೈಲರ್ ಮೂಲಕ ದೊಡ್ಡ ಮಟ್ಟದಲ್ಲಿ ಕಮ್‌ಬ್ಯಾಕ್ ಮಾಡಿದ್ದಾರೆ.
ರಜನಿಕಾಂತ್ ಬಹು ದಿನಗಳ ಬಳಿಕ ತಮ್ಮ ಸ್ಟಾರ್‌ಡಂ ರೇಂಜಿನ ಸಿನಿಮಾದಲ್ಲಿ ನಟಿಸಿದ್ದರೆ, ನೆಲ್ಸನ್ ದೊಡ್ಡ ಸೋಲಿನ ಬಳಿಕ ಮೈ ಕೊಡವಿ ಎದ್ದು ನಿಂತಿದ್ದಾರೆ. ಇನ್ನು ಜೈಲರ್ ಚಿತ್ರದ ಮೂಲಕ ಈ ಇಬ್ಬರು ಮಾತ್ರವಲ್ಲದೇ ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್ ಹಾಗೂ ಮಲಯಾಳಂನ ಮೋಹನ್ ಲಾಲ್ ಸಹ ಭರ್ಜರಿ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ನೆಲ್ಸನ್ ಕುಮಾರ್ ಹಾಗೂ ರಜಿನಿಕಾಂತ್ ಕಾಂಬಿನೇಶನ್ ವರ್ಕ್ ಆಗಿದ್ದು, ಸಿನಿ ರಸಿಕರು ಮೋಹನ್ ಲಾಲ್ ಮತ್ತು ಶಿವರಾಜ್‌ಕುಮಾರ್ ನಟನೆಗೂ ಜೈ ಎಂದಿದ್ದಾರೆ. ಅದರಲ್ಲಿಯೂ ಶಿವರಾಜ್‌ಕುಮಾರ್ ಅತಿಥಿ ಪಾತ್ರಕ್ಕೆ ಇಡೀ ಸೌತ್ ಇಂಡಸ್ಟ್ರಿ ಫಿದಾ ಆಗಿದ್ದು, ಚಿತ್ರ ಮೊದಲ ಶೋ ಮುಗಿಯುತ್ತಿದಂತೆಯೇ ಸೂಪರ್ ಹಿಟ್ ಹಂತವನ್ನು ತಲುಪಿಬಿಟ್ಟಿದೆ.
ನಾಲ್ಕನೇ ದಿನವೂ ಸಹ ಶೇ. 80 ಪ್ರದರ್ಶನಗಳು ತುಂಬು ಮಂದಿರಗಳ ಪ್ರದರ್ಶನವನ್ನು ಜೈಲರ್ ಕಾಣುತ್ತಿದ್ದು, ಮೊದಲ 3 ದಿನಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡಿ ಅಬ್ಬರಿಸುತ್ತಿದೆ. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 91 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಜೈಲರ್ ಚಿತ್ರ ಎರಡನೇ ದಿನ 53 ಕೋಟಿ ಕಲೆಕ್ಷನ್ ಮಾಡಿದೆ ಹಾಗೂ ಮೂರನೇ ದಿನ 60 ಕೋಟಿ ರೂಪಾಯಿ ಗಳಿಸಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ವರದಿ ಮಾಡಿದ್ದಾರೆ. ಈ ಮೂಲಕ ಜೈಲರ್ ಮೊದಲ 3 ದಿನಗಳಲ್ಲಿ 204 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಮೂರೇ ದಿನಕ್ಕೆ 200 ಕೋಟಿ ಕ್ಲಬ್ ಸೇರಿದ ದಾಖಲೆ ಮಾಡಿದೆ.


Click it and Unblock the Notifications











